ರಾಂಬೋ ಬಾಲಿವುಡ್ ರೀಮೇಕ್ ಸುದ್ದಿ ಕೇಳಿ ಒರಿಜಿನಲ್ ರಾಂಬೋ ಹೆದರಿದ್ದು ಏಕೆ...?

Update: 2017-05-20 10:29 GMT

ಮುಂಬೈ,ಮೇ 20: ಖ್ಯಾತ ಹಾಲಿವುಡ್ ನಟ ಸಿಲ್ವೆಸ್ಟರ್ ಸ್ಟಾಲೋನ್ ಅವರ ‘ರಾಂಬೋ’ ಚಿತ್ರವನ್ನು ಟೈಗರ್ ಶ್ರಾಫ್‌ನನ್ನು ನಾಯಕನನ್ನಾಗಿಸಿ ಭಾರತದಲ್ಲಿ ಪುನರ್ ನಿರ್ಮಾಣ ಮಾಡಲಾಗುತ್ತದೆ ಎಂಬ ಸುದ್ದಿ ಅಂತರ್ಜಾಲದಲ್ಲಿ ವ್ಯಾಪಕವಾಗಿ ಹರಿದಾಡು ತ್ತಿದೆ. ‘ದಿ ಹಾಲಿವುಡ್ ರಿಪೋರ್ಟರ್(ಟಿಎಚ್‌ಆರ್)’ನಲ್ಲಿಯ ಇತ್ತೀಚಿನ ವರದಿಯೊಂದು ಈ ಬೆಳವಣಿಗೆಯನ್ನು ದೃಢಪಡಿಸಿದ್ದು, ಭಾರತೀಯ ರೀಮೇಕ್‌ನ್ನು ಸಿದ್ಧಾರ್ಥ ಆನಂದ ನಿರ್ದೇಶಿಸಲಿದ್ದಾರೆ ಮತ್ತು ಎಂ! ಕ್ಯಾಪಿಟಲ್ ವೆಂಚರ್ಸ್, ಒರಿಜಿನಲ್ ಎಂಟರ್‌ಟೇನ್ ಮೆಂಟ್, ಇಂಪ್ಯಾಕ್ಟ್ ಫಿಲ್ಮ್ಸ್ ಮತ್ತು ಸಿದ್ಧಾರ್ಥ ಆನಂದ ಫಿಲ್ಮ್ಸ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸಲಿವೆ ಎಂಬ ಮಾಹಿತಿಯನ್ನು ನೀಡಿದೆ.

ಈ ಸುದ್ದಿ ಈಗ ಒರಿಜಿನಲ್ ‘ರಾಂಬೋ’ ಸಿಲ್ವೆಸ್ಟರ್ ಸ್ಟಾಲೋನ್ ಅವರ ಕಿವಿಗೂ ಬಿದ್ದಿರುವಂತಿದೆ. ಭಾರತೀಯ ರಿಮೇಕ್ ಬಗ್ಗೆ ಅವರಲ್ಲಿ ಸ್ವಲ್ಪ ಅಳುಕುಂಟಾಗಿರುವಂತಿದೆ. ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತನ್ನ ರಾಂಬೋ ಚಿತ್ರದ ಸ್ಥಿರಚಿತ್ರವೊಂದನ್ನು ಪೋಸ್ಟ್ ಮಾಡಿರುವ ಅವರು,‘‘ಭಾರತದಲ್ಲಿ ರಾಂಬೋ ಪುನರ್ ನಿರ್ಮಾಣಗೊಳ್ಳಲಿದೆ ಎನ್ನುವುದನ್ನು ಇತ್ತೀಚಿಗೆ ಓದಿದ್ದೇನೆ. ಅದೊಂದು ಮಹಾನ್ ಪಾತ್ರ.... ಅದನ್ನು ನಾಶಗೊಳಿಸುವುದಿಲ್ಲ ಎಂದು ಆಶಿಸಿದ್ದೇನೆ ’’ಎಂದು ಬರೆದಿದ್ದಾರೆ.

ಹಾಲಿವುಡ್ ಹಿಟ್ ಚಿತ್ರಗಳ ಭಾರತೀಯ ರಿಮೇಕ್‌ಗಳ ಇತಿಹಾಸವನ್ನು ಅವಲೋಕಿಸಿದರೆ ಸ್ಟಾಲೋನ್ ಅವರ ಭೀತಿ ಸಹಜವೇ ಆಗಿದೆ.

ಇದೀಗ ಬಾಲಿವುಡ್‌ನ ರಾಂಬೋ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿರುವ ಟೈಗರ್ ಶ್ರಾಫ್ ಸ್ಟಾಲೋನ್ ನಿರ್ವಹಿಸಿದ್ದ ಪಾತ್ರದಲ್ಲಿ ಅಭಿನಯಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ಯಾವುದೇ ರೀತಿಯಲ್ಲಿಯೂ ಅವರ ಸ್ಥಾನವನ್ನು ತುಂಬಲು ತಾನು ಸಮರ್ಥನಲ್ಲ ಎಂದು ಹೇಳಿಕೊಂಡಿದ್ದಾರೆ.

ಚಿಕ್ಕಂದಿನಿಂದಲೂ ಕರಾಟೆ ಪಟು ಮತ್ತು ಆ್ಯಕ್ಷನ್ ಚಿತ್ರಗಳ ಭಕ್ತನಾಗಿರುವ ನನಗೆ ಈಗಲೂ ಇದನ್ನು ನಂಬಲಾಗುತ್ತಿಲ್ಲ, ಈ ಅವಕಾಶ ನನಗೆ ದೊರಕಿರುವುದಕ್ಕಾಗಿ ನಾನು ಋಣಿಯಾಗಿದ್ದೇನೆ. ಆದರೆ ದಂತಕಥೆಯಾಗಿರುವ ಸ್ಟಾಲೋನ್ ಅವರ ಸ್ಥಾನವನ್ನು ನಾನು ಯಾವುದೇ ರೀತಿಯಲ್ಲಿಯೂ ತುಂಬಲು ಸಾಧ್ಯವಿಲ್ಲ ಎನ್ನುವುದು ನನಗೆ ಚೆನ್ನಾಗಿ ಗೊತ್ತು. ಆದರೆ ನಾನು ಚಿಕ್ಕಂದಿನಿಂದಲೂ ಇಂತಹುದೊಂದು ಪಾತ್ರಕ್ಕೆ ಸಿದ್ಧಗೊಳ್ಳುತ್ತಿದ್ದೆನೇನೋ ಎಂದು ನನಗನ್ನಿಸುತ್ತಿದೆ ಎಂದು ಶ್ರಾಫ್ ಅವರನ್ನು ಉಲ್ಲೇಖಿಸಿ ಟಿಎಚ್‌ಆರ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News