ಬಂಗಾರ ಸನ್ ಆಫ್ ಬಂಗಾರದ ಮನುಷ್ಯ: ನೇಗಿಲ ಯೋಗಿಯ ಕಥಾನಕ

Update: 2017-05-20 18:00 GMT

ರೈತರ ಸಮಸ್ಯೆ, ಸಿಕ್ಕುಗಳು ಸುಲಭಕ್ಕೆ ಅರ್ಥವಾಗುವಂಥವಲ್ಲ. ಕಳಪೆ ಬಿತ್ತನೆ ಬೀಜ, ಯಥೇಚ್ಛ ರಸಗೊಬ್ಬರ ಬಳಕೆಯಿಂದಾಗಿ ಫಲವತ್ತತೆ ಕಳೆದುಕೊಂಡ ನೆಲ, ಕಾಲಕ್ಕೆ ಸರಿಯಾಗಿ ಸುರಿಯದ ಮಳೆ, ಬೆಳೆಗೆ ಸರಿಯಾಗಿ ಸಿಗದ ಬೆಲೆ, ಮಧ್ಯವರ್ತಿಗಳ ಹಾವಳಿ, ಔದ್ಯೋಗೀಕರಣ... ಹೀಗೆ ಹತ್ತಾರು ಸಮಸ್ಯೆಗಳು ರೈತರನ್ನು ಕಾಡುತ್ತಿವೆ. ತೀರದ ಬ್ಯಾಂಕ್ ಮತ್ತು ಖಾಸಗಿ ಸಾಲಗಳು ಬಸವಳಿದ ರೈತನನ್ನು ಆತ್ಮಹತ್ಯೆಗೆ ದೂಡುತ್ತವೆ. ಇದೆಲ್ಲವನ್ನೂ ದೊಡ್ಡ ಪರದೆ ಮೇಲೆ ತೋರಿಸುವುದು ಕಷ್ಟಸಾಧ್ಯ. ಆದರೆ ನಿರ್ದೇಶಕ ಯೋಗಿ ಜಿ.ರಾಜ್ ವಿಸ್ತಾರವಾದ ಈ ವಿಷಯವನ್ನು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ. ಕೊಂಚ ಎಚ್ಚರ ತಪ್ಪಿದ್ದರೂ ಇದೊಂದು ಡಾಕ್ಯುಮೆಂಟರಿಯಾಗುತ್ತಿತ್ತು. ತಂತ್ರಜ್ಞರು ಮತ್ತು ಕಲಾವಿದರ ಟೀಮ್‌ವರ್ಕ್ ನಿಂದಾಗಿ ಒಂದೊಳ್ಳೆಯ ಚಿತ್ರವಾಗಿದೆ.

ಎಪ್ಪತ್ತರ ದಶಕದಲ್ಲಿ ತೆರೆಕಂಡ ಡಾ.ರಾಜ ಕುಮಾರ್ ಅಭಿನಯದ ‘ಬಂಗಾರದ ಮನುಷ್ಯ’ ಕನ್ನಡ ಚಿತ್ರರಂಗದಲ್ಲಿ ಮೈಲುಗಲ್ಲು ಸೃಷ್ಟಿಸಿದ ಸಿನೆಮಾ. ಸಾಮಾಜಿಕ ಸಂದೇಶವೊಂದನ್ನು ಯಶಸ್ವಿಯಾಗಿ ದಾಟಿಸಿದ ಶ್ರೇಷ್ಠ ಪ್ರಯೋಗವದು. ‘ಬಂಗಾರ’ದಲ್ಲೂ ಆ ಚಿತ್ರದ ನೆನಪುಗಳು ಮರುಕಳಿಸುತ್ತವೆ. ಇಲ್ಲಿ ವರನಟ ರಾಜ್‌ರ ಇಮೇಜನ್ನು ಬಳಕೆ ಮಾಡಿ ಕೊಂಡಿದ್ದು, ಆ ಪ್ರಯತ್ನ ಚಿತ್ರದ ಯಾವ ಹಂತದಲ್ಲೂ ಮುಕ್ಕಾಗಿಲ್ಲ ಎನ್ನುವುದು ವಿಶೇಷ.

ಬದಲಿಗೆ ತಮ್ಮ ನೆಚ್ಚಿನ ನಾಯಕನಟನ ಹೊಳಪಿನ ಇಮೇಜು ಉನ್ನತ ಆಶಯವೊಂದಕ್ಕೆ ನೆರಳಾಗಿರುವುದು ಅಭಿಮಾನಿ ಗಳಿಗೂ ಇಷ್ಟವಾಗುತ್ತದೆ! ಯೂರೋಪ್‌ನಲ್ಲಿ ದೊಡ್ಡ ಉದ್ಯಮಿಯಾದ, ನಾಳೆಗಳ ಬಗ್ಗೆ ನಂಬಿಕೆ ಯಿರದ ನಾಯಕ ಶಿವು ಕರುನಾಡಿನ ತನ್ನ ತಂದೆ ಊರಿಗೆ ಆಗಮಿಸು ತ್ತಾನೆ. ಅಲ್ಲಿನ ರೈತರ ಸಮಸ್ಯೆಗಳಿಗೆ ಹೆಗಲು ಕೊಡುತ್ತಾ ನಾಡಿನ ರೈತರ ಹಿತಕ್ಕಾಗಿ ಹೋರಾಟ ರೂಪಿಸುವ ಹಾದಿಯಲ್ಲಿನ ಸಂಕಷ್ಟಗಳನ್ನು ನಿರ್ದೇಶಕರು ಸೂಕ್ಷ್ಮವಾಗಿ ವಿಷದಪಡಿಸಿದ್ದಾರೆ. ಸಿನೆಮಾ ಮಾಧ್ಯಮದಲ್ಲಿ ಮನರಂಜನೆಯೇ ಮೊದಲ ಆದ್ಯತೆ. ವಿಸ್ತಾರವಾದ ರೈತ ಸಮುದಾಯದ ಸಂಗತಿಗಳನ್ನು ಹೇಳುವ ಧಾಟಿ ವಾಚ್ಯವಾಗುವ ಸಂಭವವೂ ಇಲ್ಲದಿರಲಿಲ್ಲ. ನಿರ್ದೇಶಕರಿಗೆ ಈ ಸೂಕ್ಷ್ಮದ ಅರಿವಿದ್ದು, ಇದನ್ನು ಮೀರಲು ಅವರು ವೇಗದ ನಿರೂಪಣಾ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ವಾಸ್ತವ ಸಂಗತಿಗಳ ಜೊತೆಜೊತೆಗೆ ಭಾವನಾತ್ಮಕ ಸಂಬಂಧಗಳನ್ನು ಬೆಸೆಯುತ್ತಾ ಚಿತ್ರಕಥೆ ಎಲ್ಲೂ ಆಕರ್ಷಣೆ ಕಳೆದುಕೊಳ್ಳದಂತೆ ನೋಡಿಕೊಂಡಿದ್ದಾರೆ. ಅವರು ಸಾಕಷ್ಟು ಹೋಂವರ್ಕ್ ಮಾಡಿರುವುದು ದಟ್ಟವಾಗಿ ಕಾಣಿಸುತ್ತದೆ. ಸಂಕಲನ ಸೇರಿದಂತೆ ಚಿತ್ರದ ಇತರ ತಾಂತ್ರಿಕ ವಿಭಾಗಗಳಲ್ಲಿ ಅವರಿಗೆ ಸೂಕ್ತ ರೀತಿಯ ಸಾಥ್ ಸಿಕ್ಕಿದೆ.

ಇನ್ನು ಚಿತ್ರದ ನಾಯಕನಟ ಶಿವರಾಜ್‌ಕುಮಾರ್ ಅವರನ್ನು ಪ್ರಶಂಸಿಸಲೇಬೇಕು. ಹೀರೋಯಿಸಂಗೆ ಜಾಗವಿಲ್ಲದ ಇಂಥದ್ದೊಂದು ಸಾಮಾಜಿಕ ಕಾಳಜಿಯ ವಸ್ತುವನ್ನು ಅವರು ಆಯ್ಕೆ ಮಾಡಿದ್ದಾರೆ. ಖಂಡಿತವಾಗಿ ಈ ಪಾತ್ರ, ಚಿತ್ರ ಅವರ ವೃತ್ತಿಬದುಕಿನಲ್ಲಿ ವಿಶಿಷ್ಟವಾಗಿ ನಿಲ್ಲುತ್ತದೆ. ಸಂಯಮ, ಪ್ರಬುದ್ಧ ಅಭಿನಯದೊಂದಿಗೆ ಗಂಭೀರ ಕತೆಯನ್ನು ಜವಾಬ್ದಾರಿಯಿಂದ ಪೋಷಿಸಿದ್ದಾರೆ. ಹಾಡುಗಳನ್ನು ಸುಂದರವಾಗಿ ಚಿತ್ರಿಸಿದ್ದು, ಅಭಿಮಾನಿಗಳು ಶಿವರಾಜ್ ನೃತ್ಯವನ್ನು ಕಣ್ತುಂಬಿಕೊಳ್ಳಬಹುದು. ನಾಯಕಿ ವಿದ್ಯಾ ಪ್ರದೀಪ್ ಅವರಿಗೆ ಇದು ಮೊದಲ ಕನ್ನಡ ಸಿನೆಮಾ. ಮುದ್ದುಮುಖದ ಆಕೆ ನಟನೆ, ನೃತ್ಯದಲ್ಲೂ ಇಷ್ಟವಾಗುತ್ತಾರೆ. ಇತರ ಪಾತ್ರಧಾರಿಗಳನ್ನು ನಿರ್ದೇಶಕರು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಸಾಧು ಕೋಕಿಲ, ಚಿಕ್ಕಣ್ಣನ ಆರೋಗ್ಯಕರ ಹಾಸ್ಯ ಗಂಭೀರ ದೃಶ್ಯಗಳ ಮಧ್ಯೆ ಮನಸ್ಸನ್ನು ತಿಳಿಗೊಳಿಸುತ್ತದೆ.

ಅನುಭವಿ ಸಂಭಾಷಣೆಕಾರ ಎಂ.ಎಸ್.ರಮೇಶ್ ಚಿತ್ರಕ್ಕೆ ಸೊಗಸಾದ ಮಾತುಗಳನ್ನು ಬರೆದಿದ್ದಾರೆ. ಛಾಯಾಗ್ರಾಹಕ ಜೈಆನಂದ್ ಅವರ ಕ್ಯಾಮರಾ ಕಣ್ಣಿನಲ್ಲಿ ಯೂರೋಪ್‌ನ ಭವ್ಯ ಕಟ್ಟಡಗಳು, ರೈತರ ಹೊಲ-ಗದ್ದೆಗಳು ಚೆನ್ನಾಗಿ ಕಾಣಿಸುತ್ತವೆ. ಆದರೆ ವಿ.ಹರಿಕೃಷ್ಣರ ಸಂಗೀತ ಮತ್ತಷ್ಟು ಇಂಪಾಗಿರಬೇಕು ಎನಿಸದಿರದು. ವಿಜಯ್ ಪ್ರಕಾಶ್ ಹಾಡಿರುವ ‘ಒಂದಾನೊಂದು ಊರಲ್ಲಿ’ ಹಾಡೊಂದನ್ನು ಹೊರತುಪಡಿಸಿ ಮತ್ತಾವುದೇ ಗೀತೆಗಳು ನೆನಪಿನಲ್ಲುಳಿಯುವುದಿಲ್ಲ. ಇಂತಹ ಸಣ್ಣಪುಟ್ಟ ನ್ಯೂನತೆಗಳ ಮಧ್ಯೆಯೂ ಒಂದೊಳ್ಳೆಯ ಕಥಾವಸ್ತು ಮತ್ತು ಉತ್ತಮ ನಿರ್ದೇಶನದಿಂದಾಗಿ ಸಿನೆಮಾ ಗಮನಸೆಳೆಯುತ್ತದೆ.

ನಿರ್ದೇಶನ: ಯೋಗಿ ಜಿ.ರಾಜ್, ನಿರ್ಮಾಣ: ಜಯಣ್ಣ ಮತ್ತು ಭೋಗೇಂದ್ರ, ಸಂಗೀತ: ವಿ.ಹರಿಕೃಷ್ಣ, ತಾರಾಗಣ: ಶಿವರಾಜ್‌ಕುಮಾರ್, ವಿದ್ಯಾ ಪ್ರದೀಪ್, ಶಿವರಾಂ, ಚಿಕ್ಕಣ್ಣ, ಬಿ.ಜಯಾ, ಸಾಧು ಕೋಕಿಲ, ಶ್ರೀನಿವಾಸಮೂರ್ತಿ, ಶರತ್ ಲೋಹಿತಾಶ್ವ ಮತ್ತಿತರರು.

ರೇಟಿಂಗ್ - ***
 

* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ

Writer - ಶಶಿಧರ ಚಿತ್ರದುರ್ಗ

contributor

Editor - ಶಶಿಧರ ಚಿತ್ರದುರ್ಗ

contributor

Similar News