ಪೇಜಾವರರಿಂದ ದಲಿತ ದೀಕ್ಷೆಯನ್ನು ಪಡೆಯುವೆ...

Update: 2017-05-20 18:28 GMT

ಚುನಾವಣೆ...ಚುನಾವಣೆ...ಚುನಾವಣೆ....

ಉಪಚುನಾವಣೆಯ ಗೆಲುವಿನ ಬಳಿಕ ಕಾಂಗ್ರೆಸ್ ಪಕ್ಷ ಚುನಾವಣೆಯ ಕುರಿತಂತೆ ಧೈರ್ಯದಿಂದ ಮಾತನಾಡುತ್ತಿರುವುದು ಕೇಳಿ ಪತ್ರಕರ್ತ ಕಾಸಿ ರೋಮಾಂಚನಗೊಂಡ. ಇದರ ಬೆನ್ನಿಗೇ ‘‘ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲಿ ನಡೆಯಲಿದೆ. ಹೈಕಮಾಂಡ್ ಮುಖ್ಯಮಂತ್ರಿಯನ್ನು ಆರಿಸುತ್ತದೆ’’ ಎಂದದ್ದೇ ಕಾಸಿ ಸಿದ್ದರಾಮಯ್ಯ ಅವರನ್ನು ಎರಡನೆ ಬಾಹುಬಲಿ ಎಂದೇ ಬಗೆದು ಇಂಟರ್ಯೂಗೆ ಹೊರಟ.

ಕಾಸಿಯನ್ನು ಕಂಡದ್ದೇ ಸಿದ್ದರಾಮಯ್ಯ ಅವರು ಅರೆ ನಿದ್ದೆಗಣ್ಣಲ್ಲಿ ಗಡ್ಡ ಸವರುತ್ತಾ ‘‘ಏನ್ರೀ....ಅದು...’’ ಎಂದು ಕೇಳಿದರು.

‘‘ಸಾರ್ ಇಂಟರ್ಯೂ ಸಾರ್...’’ ಹಲ್ಲು ಗಿಂಜುತ್ತಾ ಕಾಸಿ ಕೇಳಿದ.

‘‘ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲೇ ನಡೆಯುತ್ತದೆ...ಬರ್ಕೊಳ್ರೀ...’’ ಸಿದ್ದರಾಮಯ್ಯ ಕಾಸಿಗೆ ಭಿಕ್ಷೆ ನೀಡಿದರು.

ಆದರೆ ಅವನಿಗೆ ಸಾಕಾಗಲಿಲ್ಲ ‘‘ಸಾರ್ ಚುನಾವಣೆಯಲ್ಲಿ ಗೆದ್ರೆ ಮುಖ್ಯಮಂತ್ರಿ?’’ ಕೇಳಿದ.

‘‘ಹೈಕಮಾಂಡ್ ಯಾರನ್ನು ಆಯ್ಕೆ ಮಾಡುತ್ತೋ ಅವರೇ ಮುಖ್ಯಮಂತ್ರಿ...ನನಗೆ ಹೈಕಮಾಂಡ್ ಮೇಲೆ ನಂಬಿಕೆಯಿದೆ’’ ಸಿದ್ದರಾಮಯ್ಯ ನಿದ್ದೆಗಣ್ಣಲ್ಲಿ ಹೇಳಿದರು.

‘‘ಸರ್, ಬೇರೆ ನಾಯಕರನ್ನು ಮುಖ್ಯಮಂತ್ರಿ ಮಾಡಿದರೆ ನೀವು ಒಪ್ಪಿಕೊಳ್ಳುತ್ತೀರಾ?’’ ಕಾಸಿ ಕೇಳಿದ.

‘‘ನನಗೆ ಹೈಕಮಾಂಡ್ ಮೇಲೆ ನಂಬಿಕೆಯಿದೆ. ಅವರು ನನ್ನನ್ನೇ ಮುಖ್ಯಮಂತ್ರಿ ಮಾಡುತ್ತಾರೆ ಎಂದು. ಆದುದರಿಂದ ಹೈಕಮಾಂಡ್ ಯಾರನ್ನು ಮುಖ್ಯಮಂತ್ರಿ ಮಾಡುತ್ತಾರೋ ಅವರೇ ಮುಖ್ಯಮಂತ್ರಿ...’’ ಸಿದ್ದರಾಮಯ್ಯ ನಿದ್ದೆಗಣ್ಣಲ್ಲೇ ನುಡಿದರು.

ಕಾಸಿ ಗೊಂದಲಕ್ಕೀಡಾದ. ‘‘ಸಾರ್ ಒಂದು ವೇಳೆ ನಿಮ್ಮನ್ನು ಮುಖ್ಯಮಂತ್ರಿ ಮಾಡದೇ ಬೇರೆಯವರನ್ನು ಮುಖ್ಯಮಂತ್ರಿ ಮಾಡಿದರೆ....’’

‘‘ಹೈಕಮಾಂಡ್‌ಗೆ ನನ್ನ ಮೇಲೆ ನಂಬಿಕೆ ಇದೆ. ಆದುದರಿಂದಲೇ ನನ್ನ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಹೊರಟಿದ್ದಾರೆ. ಅದರ ಅರ್ಥ ನನ್ನನ್ನೇ ಮುಖ್ಯಮಂತ್ರಿ ಮಾಡುತ್ತಾರೆ...’’ ಸಿದ್ದರಾಮಯ್ಯರು ಉತ್ತರಿಸಿದರು.

‘‘ಸಾರ್ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ಧೈರ್ಯವಿದೆಯೇ?’’ ಕಾಸಿ ಪ್ರಶ್ನೆಯನ್ನು ಬೇರೆ ಕಡೆಗೆ ಹೊರಳಿಸಿದ.

‘‘ಎಲ್ಲರೂ ನನಗೆ ಬೆಂಬಲಕೊಟ್ಟಿದ್ದಾರೆ. ಪೂರ್ಣ ಸಹಕಾರ ಕೊಡುವ ಭರವಸೆ ನೀಡಿದ್ದಾರೆ. ಆದುದರಿಂದ ಚುನಾವಣೆಯನ್ನು ನಾನು ಗೆದ್ದೇ ಗೆಲ್ಲುತ್ತೇನೆ...’’ ಸಿದ್ದರಾಮಯ್ಯ ಧೈರ್ಯದಿಂದ ಹೇಳಿದರು.

‘‘ಪರಮೇಶ್ವರ್, ಖರ್ಗೆ ನಿಮಗೆ ಸಂಪೂರ್ಣ ಸಹಕಾರ ನೀಡುತ್ತಾರಾ?’’ ಕಾಸಿ ಕೇಳಿದ.

‘‘ಅಯ್ಯೋ ಅವರ ವಿಷಯ ಅಲ್ಲಾರಿ. ಬಿಜೆಪಿಯಿಂದ ಈಶ್ವರಪ್ಪ, ಶೆಟ್ಟರ್ ಮೊದಲಾದವರೆಲ್ಲ ನನಗೆ ಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಆದುದರಿಂದ ಈ ಬಾರಿ ಕಾಂಗ್ರೆಸ್ ಪಕ್ಷ ಗೆದ್ದೇ ಗೆಲ್ಲುತ್ತದೆ...’’ ಸಿದ್ದರಾಮಯ್ಯ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

‘‘ಬಿಜೆಪಿ, ಜೆಡಿಎಸ್ ಈ ಎರಡು ಪಕ್ಷಗಳಲ್ಲಿ ನಿಮ್ಮ ಬಲವಾದ ಸ್ಪರ್ಧಿ ಯಾರು ಸಾರ್?’’ ಕಾಸಿ ಕೇಳಿದ.

ಸಿದ್ದರಾಮಯ್ಯ ತುಸು ಹೊತು ತಲೆಗೆ ಕೈಹೊತ್ತು ಕುಳಿತು ಯೋಚಿಸಿ ಹೇಳಿದರು ‘‘ಕಾಶಪ್ಪನೋರೆ...ಇಲ್ಲಿ ಕೇಳ್ರಿ. ಸದ್ಯಕ್ಕೆ ನನಗೆ ದೊಡ್ಡ ಸ್ಪರ್ಧಿ ಕಾಂಗ್ರೆಸ್‌ನೊಳಗೇ ಇದ್ದಾರೆ. ಅವರನ್ನು ಸೋಲಿಸೋದೆ ಮುಂದಿನ ಚುನಾವಣೆಯ ಮುಖ್ಯ ಗುರಿ...’’

ಕಾಸಿಗೆ ಅರ್ಥವಾಗಲಿಲ್ಲ ‘‘ಸಾರ್...ನೀವು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿರೋದಲ್ವಾ?’’

‘‘ನೋಡ್ರಿ....ಹಿಂದಿನ ಚುನಾವಣೆಯಲ್ಲಿ ದೊಡ್ಡ ತಲೆನೋವಾಗಿದ್ದದ್ದು ಪರಮೇಶ್ವರ್. ಈ ಉಪಚುನಾವಣೆಯಲ್ಲಿ ಅವರು ಬಾಲ ಮುದುರಿಕೊಂಡು ಕೂತಿದ್ದಾರೆ. ಇದೀಗ ದಿಲ್ಲಿಯಿಂದ ಖರ್ಗೆಯನ್ನು ನನ್ನ ವಿರುದ್ಧ ಸ್ಪರ್ಧಿಸೋದಕ್ಕೆ ಅಲ್ಲಿಯ ಕೆಲವು ‘ವರಿ’ಷ್ಠರು ಕಳುಹಿಸುತ್ತಿದ್ದಾರೆ. ಅವರನ್ನು ಗೆಲ್ಲೋದೇ ನನ್ನ ದೊಡ್ಡ ಸಮಸ್ಯೆಯಾಗಿದೆ....ಉಳಿದಂತೆ ಬಿಜೆಪಿಯೊಳಗಿನ ಈಶ್ವರಪ್ಪಾದಿಗಳು, ಯಡಿಯೂರಪ್ಪಾದಿಗಳು ನನಗೆ ಪೂರ್ಣ ಸಹಕಾರ ನೀಡುತ್ತಾರೆ ಎಂಬ ಭರವಸೆಯಿದೆ....’’ ಸಿದ್ದರಾಮಯ್ಯ ಹೇಳಿದರು.

‘‘ಇನ್ನೂ ವಿವರಿಸಿ ಹೇಳಿ ಸಾರ್?’’ ಕಾಸಿ ಕೇಳಿದರು.

‘‘ನಿಮ್ ತಲೆ, ಏನ್ರೀ ವಿವರಿಸೋದು. ಮುಂದಿನ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್‌ನ್ನು ಸೋಲಿಸೋದಕ್ಕೆ ಬೇರೆ ಸಮರ್ಥ ಪಕ್ಷಗಳೇ ಇಲ್ಲ. ಆದುದರಿಂದ ಖರ್ಗೆಯವರನ್ನು ರಾಜ್ಯಕ್ಕೆ ಕೆಲವರು ಕಳುಹಿಸಿದ್ದಾರೆ. ಆದುದರಿಂದ ನಾನು ಕಾಂಗ್ರೆಸ್ ಪಕ್ಷದೊಳಗೆ ಚುನಾವಣೆಯಲ್ಲಿ ಗೆಲ್ಲುವುದು ದೊಡ್ಡ ಕಷ್ಟವಾಗಿ ಬಿಟ್ಟಿದೆ. ಉಳಿದಂತೆ ಬಿಜೆಪಿ, ಜೆಡಿಎಸ್ ಬಗ್ಗೆ ನನಗೆ ಯಾವ ಆಲೋಚನೆಯೂ ಇಲ್ಲ...’’

‘‘ಸಾರ್...ಕಾಂಗ್ರೆಸ್‌ನಿಂದ ಕೆಲವು ಹಿರಿಯರು ಬಿಜೆಪಿ, ಜೆಡಿಎಸ್ ಸೇರುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತಲ್ಲ? ಇದು ಕಾಂಗ್ರೆಸ್‌ಗೆ ಹಿನ್ನಡೆಯಲ್ಲವೆ?’’ ಕಾಸಿ ಕೇಳಿದ.

ಸಿದ್ದರಾಮಯ್ಯ ಈಗ ಚಿಂತೆಯ ಮುಖ ಮಾಡಿದರು ‘‘ನೋಡ್ರಿ...ಅವರೆಲ್ಲ ಹೋಗ್ತಾರೆ ಎಂದು ಹೇಳ್ತಾ ಇದ್ದರು. ಈಗ ನೋಡಿದರೆ ಹೋಗುವ ಲಕ್ಷಣಗಳೇ ಕಾಣ್ತಾ ಇಲ್ಲ. ಎಸ್. ಎಂ. ಕೃಷ್ಣ ಅವರು ಬಿಜೆಪಿಗೆ ಹೋದ ಕಾರಣವೇ ಬಿಜೆಪಿ ಸೋತಿತು ಎಂದು ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸಿದ್ದೇ ಹಬ್ಬಿಸಿದ್ದು ಇತ್ತ ನನ್ನನ್ನು ಸೋಲಿಸುವ ಒಂದೇ ಉದ್ದೇಶದಿಂದ ಜಾಫರ್ ಶರೀಫ್, ವಿಶ್ವನಾಥ್, ಜನಾರ್ದನ ಪೂಜಾರಿ ಮೊದಲಾದವರು ಪಕ್ಷ ಬಿಡುವುದಿಲ್ಲ ಎಂದು ಕೂತಿದ್ದಾರೆ. ಅತ್ತ ಬಿಜೆಪಿಯವರೂ ಇವರು ಬರುತ್ತಾರೆ ಎಂದು ಮನೆಯ ಬಾಗಿಲಿಗೆ ಬೀಗ ಹಾಕಿ ಕೂತಿದ್ದಾರೆ. ನೋಡ್ರೀ...ಹೋಗ್ತೇನೆ ಹೋಗ್ತೇನೆ ಎಂದು ಆಸೆ ಹುಟ್ಟಿಸಿ ಈಗ ತಮ್ಮ ಮಾತಿನಿಂದ ಹಿಂದೆ ಸರಿಯುವುದು ಅವರಿಗೆ ಶೋಭೆ ಕೊಡುತ್ತೇನ್ರೀ? ದಿಲ್ಲಿಯಿಂದ ಕಾಂಗ್ರೆಸ್‌ನ ಕೆಲವು ಅನಿಷ್ಟರು ಸಾರಿ...ವರಿಷ್ಠರು ಅವರಿಗೆ ಹೇಳಿದ್ದಾರಂತೆ ಈಗ ಹೋಗಬೇಡಿ. ಸಿದ್ದರಾಮಯ್ಯ ಸೋತ ಬಳಿಕ ಹೋಗಿ...ಅಂತ’’ ಸಿದ್ದರಾಮಯ್ಯ ನಿರಾಸೆಯಿಂದ ಹೇಳಿದರು.

‘‘ಸಾರ್...ಮುಂದಿನ ಬಾರಿ ಕಾಂಗ್ರೆಸ್‌ನಿಂದ ದಲಿತರೇ ಮುಖ್ಯಮಂತ್ರಿಯಾಗುತ್ತಾರಂತೆ ಹೌದೇ?’’

‘‘ಯಾಕ್ರೀ ಇಂತಹ ಪ್ರಶ್ನೆ ಕೇಳಿ ನನ್ನ ಹೊಟ್ಟೆ ಉರಿಸ್ತೀರಾ? ನಾನು ಕೂಡ ದಲಿತ ಸಮುದಾಯಕ್ಕೇ ಸೇರಿದ್ದೇನೆ. ಯಡಿಯೂರಪ್ಪ ಅವರು ಮುಂದಿನ ವಾರ ನನ್ನ ಮನೆಯಲ್ಲಿ ಊಟ ಮಾಡಿ ತಮ್ಮ ಜಾತ್ಯತೀತತೆಯನ್ನು ಮೆರೆಯಲಿದ್ದಾರಂತೆ. ಪೇಜಾವರಶ್ರೀಗಳು ನನ್ನ ದಲಿತಕೇರಿಗೆ ಬಂದು ನನಗೆ ದಲಿತ ದೀಕ್ಷೆಯನ್ನೂ ಕೊಡಲಿದ್ದಾರೆ. ಈ ಮೂಲಕ ನನ್ನನ್ನು ಮುಂದಿನ ಬಾರಿಯ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಾಗಿಸಲಿದ್ದಾರೆ....’’ ಸಿದ್ದರಾಮಯ್ಯ ಹೇಳಿದರು.

‘‘ಇದೆಂತದು ಸಾರ್, ದಲಿತ ದೀಕ್ಷೆ...?’’ ಕಾಸಿ ಅಚ್ಚರಿಯಿಂದ ಕೇಳಿದರು.

‘‘ನೋಡ್ರೀ...ಪೇಜಾವರರು ದಲಿತ ಕೇರಿಗೆ ಹೋಗಿ ಹೋಗಿ ವೈಷ್ಣವ ದೀಕ್ಷೆ ಕೊಟ್ಟು ದಲಿತರನ್ನು ಬ್ರಾಹ್ಮಣ ಮಾಡಬಹುದಾದರೆ, ನನಗೆ ದಲಿತ ದೀಕ್ಷೆ ಕೊಟ್ಟು ನನ್ನನ್ನು ದಲಿತನನ್ನಾಗಿ ಮಾಡಬಾರದೆ? ಆದುದರಿಂದ ನಾನು ಪೇಜಾವರರಿಂದಲೇ ದಲಿತ ದೀಕ್ಷೆಯನ್ನು ತೆಗೆದುಕೊಂಡು ಮುಂದಿನ ಬಾರಿ ಮುಖ್ಯಮಂತ್ರಿಯಾಗಲಿದ್ದೇನೆ....’’

‘‘ಸಾರ್...ನಿಮ್ಮ ಪಕ್ಷದಿಂದ ಡಿಕೆಶಿ, ಪೀಕೆಶಿ, ಕಾಗೋಡು, ಈಗೋಡು ಎಲ್ಲರೂ ಉಡುಪಿ ಕಡೆಗೆ ಹೋಗುವ ಸಿದ್ಧತೆಯಲ್ಲಿದ್ದಾರಂತೆ...ಅವರದೂ ಇದೇ ಉದ್ದೇಶ ಇರಬಹುದೇ...’’

ಕಾಸಿ ಕೇಳಿದ್ದೇ ತಡ ನಿದ್ದೆಯಿಂದ ದಿಗ್ಗನೆ ಎಚ್ಚೆತ್ತ ಸಿದ್ದರಾಮಯ್ಯ ಅವರು ಉಡುಪಿಯ ಕಡೆಗೆ ದೌಡಾಯಿಸತೊಡಗಿದರು.

Writer - ಚೇಳಯ್ಯ chelayya@gmail.com

contributor

Editor - ಚೇಳಯ್ಯ chelayya@gmail.com

contributor

Similar News