ಡಾ. ಬಿ.ಆರ್.ಅಂಬೇಡ್ಕರ್ ವರ್ತಮಾನದೊಂದಿಗೆ ಮುಖಾಮುಖಿ

Update: 2017-05-21 18:16 GMT

ವರ್ತಮಾನದ ರಾಜಕೀಯ ವಿದ್ಯಮಾನ ಅಂಬೇಡ್ಕರ್ ಚಿಂತನೆಯ ಜೊತೆಗೆ ಮುಖಾಮುಖಿಯಾಗುವ ಪ್ರಯತ್ನದಲ್ಲಿದೆ. ಸದ್ಯದ ಬಿಕ್ಕಟ್ಟಿಗೆ ಅಂಬೇಡ್ಕರ್ ಚಿಂತನೆಯ ಮೂಲಕ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ, ಗಾಂಧಿಯ ಸ್ಥಾನದಲ್ಲಿ ಅಂಬೇಡ್ಕರ್ ಹೆಚ್ಚು ಚರ್ಚೆಗೊಳಗಾಗುತ್ತಿದ್ದಾರೆ. ಇದರ ಪರಿಣಾಮ ಯಾವ ಮಟ್ಟವನ್ನು ತಲುಪಿದೆಯೆಂದರೆ ಸಂಘಪರಿವಾರ, ಬಿಜೆಪಿ ಕೂಡ ಅಂಬೇಡ್ಕರ್ ಭಾವಚಿತ್ರವನ್ನು ಬಳಸುವಂತಹ ಮತ್ತು ಅವರ ಚಿಂತನೆಗಳನ್ನು ತಮ್ಮ ಮನುವಾದಿ ಚಿಂತನೆಗಳಿಗೆ ಪೂರಕವಾಗಿ ತಿರುಚುವಂತಹ ಅನಿವಾರ್ಯ ಸ್ಥಿತಿಗೆ ಬಂದು ನಿಂತಿದೆ. ಅಂಬೇಡ್ಕರ್ ಅವರು ಸ್ವಾತಂತ್ರ ಪೂರ್ವ ಮತ್ತು ಆನಂತರವೂ ಚರ್ಚಿಸಿದ್ದು ತನ್ನ ನೆಲದ ಗುಲಾಮಗಿರಿಯ ಕುರಿತಂತೆಯೇ ಆಗಿದೆ.‘‘ನನಗೆ ಮಾತೃಭೂಮಿಯಿದೆ ಎನ್ನುತ್ತೀರಿ. ಆದರೆ ಮತ್ತೆ ಮತ್ತೆ ಹೇಳುತ್ತೇನೆ. ನನಗೆ ಮಾತೃಭೂಮಿಯಿಲ್ಲ. ನಮ್ಮನ್ನು ಬೆಕ್ಕು ನಾಯಿಗಳಿಗಿಂತ ಕೀಳಾಗಿ ಕಾಣುವ, ಕುಡಿಯಲು ನೀರು ಕೊಡದ ಈ ನೆಲವನ್ನು ಹೇಗೆ ನನ್ನ ತಾಯಿನೆಲವೆಂದು ಕರೆಯಲಿ?’’ ಎನ್ನುವ ಅಂದಿನ ಅಂಬೇಡ್ಕರ್ ಪ್ರಶ್ನೆ ಈ ದೇಶದಲ್ಲಿ ಇಂದು ಕೇವಲ ದಲಿತರಾಗಿ ಮಾತ್ರ ಉಳಿದಿಲ್ಲ. ವಿವಿಧ ಶೋಷಿತ ಸಮುದಾಯ ಇಂತಹದೊಂದು ರಾಜಕೀಯ, ಸಾಮಾಜಿಕ ಬಿಕ್ಕಟ್ಟಿಗೆ ಸಿಲುಕುತ್ತಿದೆ. ಈ ಕಾರಣದಿಂದಲೇ ಅಂಬೇಡ್ಕರ್ ಬರಹಗಳ ಜೊತೆಗೆ ಹೆಚ್ಚು ಹೆಚ್ಚು ಮುಖಾಮುಖಿ ನಡೆಯಬೇಕಾಗಿದೆ.

ಬಿ. ಯು. ಸುಮಾ ಅವರು ಸಂಪಾದಿಸಿರುವ ಈ ಕೃತಿಯ ಹೆಸರೇ ‘ಡಾ. ಬಿ. ಆರ್. ಅಂಬೇಡ್ಕರ್-ವರ್ತಮಾನದೊಂದಿಗೆ ಮುಖಾಮುಖಿ’. ಈ ಕೃತಿಯಲ್ಲಿ ಅಂಬೇಡ್ಕರ್ ಅವರ ಬದುಕು, ವ್ಯಕ್ತಿತ್ವಗಳನ್ನು ಮೊದಲ ಅಧ್ಯಾಯದಲ್ಲಿ ಕಟ್ಟಿಕೊಡಲಾಗಿದೆ. ಆ ಮೂಲಕ ಅಂಬೇಡ್ಕರ್ ಬದುಕಿನ ಹೆಜ್ಜೆಗಳನ್ನು ಅರಿಯುವ ಪ್ರಯತ್ನ ಮಾಡಲಾಗಿದೆ. ಬಳಿಕದ ಅಧ್ಯಾಯದಲ್ಲಿ ಹೇಗೆ ಅಂಬೇಡ್ಕರ್‌ರನ್ನು ಅಸ್ಪಶ್ಯತೆ ಶಾಪವಾಗಿ ಕಾಡಿತು ಮತ್ತು ಅವರ ಯೋಚನೆಗಳು ಸಾಮಾಜಿಕ ಬದುಕು ಹೇಗೆ ರೂಪಿಸಿತು ಎನ್ನುವುದನ್ನು ಕಟ್ಟಿಕೊಡುತ್ತದೆ. ಆಗಿನ ಸಾಮಾಜಿಕ ಸಂದರ್ಭಕ್ಕೆ ಬೆಳಕು ಚೆಲ್ಲುವ ಪ್ರಯತ್ನವೂ ಈ ಅಧ್ಯಾಯದಲ್ಲಿದೆ. ಬಳಿಕದ ಅಧ್ಯಾಯಗಳಲ್ಲಿ ಜಾತಿ, ಅರ್ಥವ್ಯವಸ್ಥೆ, ಧರ್ಮ, ರಾಷ್ಟ್ರೀಯತೆಯ ಕುರಿತಂತೆ ಅಂಬೇಡ್ಕರ್ ಚಿಂತಿಸಿದ ರೀತಿಯನ್ನು ಅವರ ಮೂಲಕವೇ ಕಟ್ಟಿಕೊಡಲಾಗಿದೆ. ಅವರ ಲೇಖನ, ಭಾಷಣಗಳಿಂದಲೂ ಕೆಲವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕೊನೆಯಲ್ಲಿ ಗಾಂಧಿ ಮತ್ತು ಅಂಬೇಡ್ಕರ್‌ರನ್ನು ಮುಖಾಮುಖಿಗೊಳಿಸಲಾಗಿದೆ. ವ್ಯಕ್ತಿಪೂಜೆ-ಮೂರ್ತಿಪೂಜೆಗಳಲ್ಲಿ ಇಂದು ಅಂಬೇಡ್ಕರ್ ಕಳೆದು ಹೋಗುವ ಅಪಾಯಗಳು ಜಾಸ್ತಿಯಾಗಿವೆ. ಇಂತಹ ಸಂದರ್ಭದಲ್ಲಿ ಅವರ ಚಿಂತನೆಗಳನ್ನು, ಬರಹಗಳನ್ನು ಜನರಬಳಿಗೆ ತಲುಪಿಸುವ ಹೊಣೆಗಾರಿಕೆಯನ್ನು ಈ ಪುಸ್ತಕ ಯಶಸ್ವಿಯಾಗಿ ನೆರವೇರಿಸುತ್ತದೆ. ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 192. ಮುಖಲೆಬೆ 150 ರೂಪಾಯಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News