ಮುಂಬೈ ಇಂಡಿಯನ್ಸ್ ಮೂರನೆ ಬಾರಿ ಚಾಂಪಿಯನ್‌

Update: 2017-05-21 19:04 GMT

ಹೈದರಾಬಾದ್, ಮೇ 21: ಹತ್ತನೆ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಯ ಫೈನಲ್‌ನಲ್ಲಿ ರವಿವಾರ ರೈಸಿಂಗ್ ಪುಣೆ ಸೂಪರ್‌ಜೈಂಟ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 1 ರನ್ ಅಂತರದಲ್ಲಿ ರೋಚಕ ಜಯ ಗಳಿಸಿದ್ದು, ಇದರೊಂದಿಗೆ ಮುಂಬೈ ಮೂರನೆ ಬಾರಿ ಐಪಿಎಲ್ ಕಿರೀಟ ಧರಿಸಿದೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಗೆಲುವಿಗೆ 130 ರನ್‌ಗಳ ಸವಾಲನ್ನು ಪಡೆದ ಪುಣೆ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 128 ರನ್ ಗಳಿಸಲಷ್ಟೇ ಶಕ್ತವಾಗಿದೆ. ಅಂತಿಮ ಓವರ್‌ನಲ್ಲಿ ಪುಣೆಯ ಗೆಲುವಿಗೆ 11 ರನ್‌ಗಳ ಆವಶ್ಯಕತೆ ಇತ್ತು. ಆದರೆ ಜಾನ್ಸನ್ ದಾಳಿಯನ್ನು ಎದುರಿಸಲಾರದೆ 9 ರನ್ ಗಳಿಸಿತು.

19ನೆ ಓವರ್‌ನ ಮುಕ್ತಾಯಕ್ಕೆ ಪುಣೆ 3 ವಿಕೆಟ್ ನಷ್ಟದಲ್ಲಿ 119 ರನ್ ಗಳಿಸಿತ್ತು. ನಾಯಕ ಸ್ಮಿತ್ 51 ರನ್ ಮತ್ತು ಮನೋಜ್ ತಿವಾರಿ 3 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. 20ನೆ ಓವರ್‌ನ ಮೊದಲ ಎಸೆತದಲ್ಲಿ ಜಾನ್ಸನ್ ಅವರ ಎಸೆತವನ್ನು ತಿವಾರಿ ಬೌಂಡರಿಗಟ್ಟಿದರು. 2ನೆ ಎಸೆತದಲ್ಲಿ ತಿವಾರಿ ಬೌಂಡರಿ ಬಾರಿಸುವ ಯತ್ನದಲ್ಲಿ ಪೊಲಾರ್ಡ್‌ಗೆ ಕ್ಯಾಚ್ ನೀಡಿದರು.

3ನೆ ಎಸೆತದಲ್ಲಿ ಸ್ಮಿತ್ ದೊಡ್ಡ ಹೊಡೆತಕ್ಕೆ ಯತ್ನಿಸಿ ರಾಯುಡುಗೆ ಕ್ಯಾಚ್ ನೀಡಿದರು. 19.4ನೆ ಓವರ್‌ನಲ್ಲಿ ವಾಷಿಂಗ್ಟನ್ ಸುಂದರ್ ಮತ್ತು  ಕ್ರಿಸ್ಟಿಯನ್ 1 ಲೆಗ್‌ಬೈ ಗಳಿಸಿದರು. 19.5ನೆ ಓವರ್‌ನಲ್ಲಿ ಕ್ರಿಸ್ಟಿಯನ್ ಮೂಲಕ ಎರಡು ರನ್ ಬಂತು. ಕೊನೆಯ ಎಸೆತದಲ್ಲಿ ಕ್ರಿಸ್ಟಿಯನ್ 3 ರನ್ ಗಳಿಸುವ ಯತ್ನದಲ್ಲಿ ರನೌಟಾಗುವುದರೊಂದಿಗೆ ಮುಂಬೈ ಗೆಲುವು ಸಾಧಿಸಿತು.

ಸ್ಮಿತ್ 51ರನ್, ರಹಾನೆ 44ರನ್, ಎಂ.ಎಸ್. ಧೋನಿ 10 ರನ್ ಗಳಿಸಿದರು. ಇದಕ್ಕೂ ಮೊದಲು ಮುಂಬೈ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 129 ರನ್ ಗಳಿಸಿತ್ತು. ಟಾಸ್ ಜಯಿಸಿ ಪುಣೆಗೆ ದೊಡ್ಡ ಮೊತ್ತದ ಸವಾಲನ್ನು ವಿಧಿಸುವ ಯೋಜನೆಯೊಂದಿಗೆ ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ತಂಡಕ್ಕೆ ಪುಣೆಯ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ.

ಜೈದೇವ್ ಉನದ್ಕಟ್ ಮತ್ತು ವಾಷಿಂಗ್ಟನ್ ಸುಂದರ್ ಅವರು ಮುಂಬೈ ತಂಡಕ್ಕೆ ಪ್ರಹಾರ ನೀಡಿದರು. ಉನದ್ಕಟ್ ದಾಳಿಗೆ ಸಿಲುಕಿದ ಮುಂಬೈ ತಂಡ 3 ಓವರ್‌ಗಳಲ್ಲಿ 9 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು.

ಕೃನಾಲ್ ಪಾಂಡ್ಯ 47 ರನ್(38ಎ, 3ಬೌ, 2ಸಿ) ಗಳಿಸಿರುವುದು ತಂಡದ ಪರ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್. ಪಾಂಡ್ಯ ಮತ್ತು ಜಾನ್ಸನ್ 8ನೆ ವಿಕೆಟ್‌ಗೆ 5.5 ಓವರ್‌ಗಳಲ್ಲಿ ದಾಖಲಿಸಿದ 50 ರನ್‌ಗಳ ನೆರವಿನಲ್ಲಿ ಮುಂಬೈ ತಂಡದ ಸ್ಕೋರ್ 125ರ ಗಡಿ ದಾಟಿತು. ಜಾನ್ಸನ್ ಔಟಾಗದೆ 13ರನ್ ಗಳಿಸಿದರು. ಇವರನ್ನು ಹೊರತುಪಡಿಸಿದರೆ ಅಂಬಟಿ ರಾಯುಡು (12), ನಾಯಕ ರೋಹಿತ್ ಶರ್ಮ (24), ಕರ್ಣ್ ಶರ್ಮ (10) ಎರಡಂಕೆಯ ಸ್ಕೋರ್ ಜಮೆ ಮಾಡಿದರು.

ಉನದ್ಕಟ್, ಝಾಂಪಾ ಮತ್ತು ಕ್ರಿಸ್ಟಿಯನ್ ತಲಾ 2 ವಿಕೆಟ್ ಹಂಚಿಕೊಂಡರು. ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ ವಿಕೆಟ್ ಪಡೆಯದಿದ್ದರೂ ಮುಂಬೈಗೆ ಕಡಿಮೆ ರನ್ ಬಿಟ್ಟುಕೊಟ್ಟರು. ಸುಂದರ್ 4 ಓವರ್‌ಗಳಲ್ಲಿ 13 ಮತ್ತು ಠಾಕೂರ್ 2 ಓವರ್‌ಗಳಲ್ಲಿ 7 ರನ್ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News