ಬಳಕೆಯಾಗದ "ನಿರ್ಭಯ ನಿಧಿ": ಮಹಿಳೆಯರ ಸುರಕ್ಷತೆಯ ಯೋಜನೆಯನ್ನು ಕಡೆಗಣಿಸಿದ ರಾಜ್ಯ ಸರಕಾರಗಳು

Update: 2017-05-22 03:37 GMT

ಹೊಸದಿಲ್ಲಿ, ಮೇ 22: ದೆಹಲಿಯಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆಗೆ ನಾಲ್ಕು ವರ್ಷ ಸಂದಿದ್ದರೂ, ಮಹಿಳೆಯರ ಸುರಕ್ಷೆ ಸ್ಥಿತಿ ಮಾತ್ರ ಇನ್ನೂ ಹಲವು ರಾಜ್ಯಗಳಲ್ಲಿ ದಯನೀಯ ಸ್ಥಿತಿಯಲ್ಲೇ ಇದೆ. ಮಹಿಳೆಯರ ಸುರಕ್ಷೆಗಾಗಿ ಕಾಯ್ದಿರಿಸಿರುವ 3,000 ಕೋಟಿ ರೂ.ಯ ನಿರ್ಭಯ ನಿಧಿಯನ್ನು ಬಹುತೇಕ ರಾಜ್ಯ ಸರಕಾರಗಳು ಸಮರ್ಪಕವಾಗಿ ಬಳಸಿಕೊಳ್ಳದಿರುವುದು ಬೆಳಕಿಗೆ ಬಂದಿದೆ.

ಈ ನಿಧಿಯಿಂದ ನೆರವು ಪಡೆಯಲು ರಾಜ್ಯ ಸರಕಾರಗಳು, ಮಹಿಳೆಯರು ಅತ್ಯಾಚಾರ ಹಾಗೂ ಇತರ ಅಪರಾಧಗಳ ವಿರುದ್ಧ ಸಂಪೂರ್ಣ ಸುರಕ್ಷೆ ಪಡೆಯುವ ದೃಷ್ಟಿಕೋನದ ಪ್ರಸ್ತಾಪವನ್ನು ಕೇಂದ್ರಕ್ಕೆ ಸಲ್ಲಿಸಬೇಕು. ಆದರೆ ಕೆಲ ರಾಜ್ಯಗಳು ಮಾತ್ರ ಇಂಥ ಪ್ರಸ್ತಾಪ ಸಲ್ಲಿಸಿವೆ. ಕೆಲ ರಾಜ್ಯಗಳು ನಿಧಿಯಿಂದ ನೆರವು ಪಡೆದಿದ್ದರೂ, ಅದರ ಅನುಷ್ಠಾನ ಅಸಮರ್ಪಕವಾಗಿದೆ.

ದಕ್ಷಿಣ ರಾಜ್ಯಗಳ ಪೈಕಿ ತಮಿಳುನಾಡು ಈ ಸಂಬಂಧ ಕೇಂದ್ರಕ್ಕೆ ಯಾವುದೇ ಪ್ರಸ್ತಾಪ ಸಲ್ಲಿಸಿಲ್ಲ. ಆಂಧ್ರ ಸರಕಾರ ಕಳೆದ ವರ್ಷ ಪ್ರಸ್ತಾಪ ಸಲ್ಲಿಸಿದ್ದು, ಕೆಲವೆಡೆಗಳಲ್ಲಿ ಪೈಲಟ್ ಯೋಜನೆಯಾಗಿ ಕೈಗೊಳ್ಳಲು ಉದ್ದೇಶಿಸಿದೆ. ಒಡಿಶಾ ಕೂಡಾ ಅನುಮೋದನೆಗೆ ಕಾಯುತ್ತಿದೆ.

ನಿರ್ಭಯಾ ಪ್ರಕರಣದ ಬಳಿಕ ನೇಮಕಗೊಂಡ ಜೆ.ಎಸ್.ವರ್ಮಾ ಸಮಿತಿ ಮಹಿಳೆಯರ ಸುರಕ್ಷೆಗಾಗಿ ಹಲವು ಶಿಫಾರಸ್ಸುಗಳನ್ನು ಮಾಡಿತ್ತು. ಇದರಲ್ಲಿ ಪೊಲೀಸ್ ಠಾಣೆಗಳಲ್ಲಿ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಸಿಸಿಟಿವಿ ಕಣ್ಗಾವಲು, ಕಾನೂನಾತ್ಮಕ ಕ್ರಮಗಳಲ್ಲಿ ಸುಧಾರಣೆ, ಪಠ್ಯದಲ್ಲಿ ಲಿಂಗ ಸಂವೇದನೆಯಂತಹ ಅಂಶಗಳನ್ನು ಸೇರಿಸುವುದು ಮತ್ತಿತರ ಕ್ರಮಗಳು ಸೇರಿವೆ. ಆದರೆ ಈ ಯಾವ ಕ್ರಮಕ್ಕೂ ರಾಜ್ಯ ಸರಕಾರಗಳು ಮುಂದಾಗಿಲ್ಲ. ಕರ್ನಾಟಕದಲ್ಲಿ 6,211 ಬಸ್ಸುಗಳ ಪೈಕಿ ಕೇವಲ 500 ಬಸ್ಸುಗಳಿಗೆ ಸಿಸಿಟಿವಿ ಕಣ್ಗಾವಲು ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News