ಕೇಜ್ರಿವಾಲ್,ಲಾಲು ವಿರುದ್ಧ ಸಾಕ್ಷ ಕೊಡಿ,ಕೇವಲ ಆರೋಪ ಬೇಡ:ಬಿಜೆಪಿ ಸಂಸದ ಸಿನ್ಹಾ

Update: 2017-05-22 08:42 GMT

ಹೊಸದಿಲ್ಲಿ,ಮೇ 22: ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ ಯಾದವ್ ಅವರಿಗೆ ಅವರು ನಿರೀಕ್ಷಿಸದ ಕಡೆಯಿಂದ ಬೆಂಬಲ ವ್ಯಕ್ತವಾಗಿದೆ.

 ಅದು ಕೇಜ್ರಿವಾಲ್,ಲಾಲು ಪ್ರಸಾದ್ ಅಥವಾ ಸುಶೀಲ ಮೋದಿ ಆಗಿರಲಿ...... ಎದುರಾಳಿಗಳಿಂದ ನಮ್ಮ ರಾಜಕೀಯ ನಾಯಕರ ವಿರುದ್ಧ ನಕಾರಾತ್ಮಕ ರಾಜಕೀಯ ಮತ್ತು ಕೆಸರೆರಚಾಟ ಸಾಕಷ್ಟಾಯಿತು ಎಂದು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರು ಸೋಮವಾರ ಟ್ವೀಟಿಸಿದ್ದಾರೆ.

ನಿಮ್ಮ ಆರೋಪಗಳಿಗೆ ಸಾಕ್ಷ ನೀಡಿ...ಅವುಗಳನ್ನು ಸಮರ್ಥಿಸಿಕೊಳ್ಳಿ ಇಲ್ಲವೇ ಬಾಯಿ ಮುಚ್ಚಿಕೊಳ್ಳಿ. ರಾತ್ರೋರಾತ್ರಿ ಕಥೆಗಳನ್ನು ಸೃಷ್ಟಿಸಿ ಮಾಧ್ಯಮಗಳಿಗೆ ರೋಚಕ ಸುದ್ದಿಗಳನ್ನು ನೀಡಬೇಕಿಲ್ಲ. ಈಗ ಆಗಿರುವುದು ಸಾಕಷ್ಟಾಗಿದೆ ಎಂದು ಅವರು ಕುಟುಕಿದ್ದಾರೆ.

ಎಲ್ಲ ರಾಜಕೀಯ ನಾಯಕರ.....ವಿಶೇಷವಾಗಿ ಕೇಜ್ರಿವಾಲ್ ಅವರ ಬಗ್ಗೆ ಅವರ ವಿಶ್ವಾಸಾರ್ಹತೆ,ಹೋರಾಟ ಮತ್ತು ಸಮಾಜಕ್ಕೆ ಬದ್ಧತೆಗಾಗಿ ನನಗೆ ಅತ್ಯಂತ ಗೌರವವಿದೆ. ನಮ್ಮ ಬಿಜೆಪಿ ಖಂಡಿತವಾಗಿಯೂ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಲ್ಲಿ ನಂಬಿಕೆಯನ್ನು ಹೊಂದಿದೆ. ಇವೆರಡೂ ಅಪರೂಪಕ್ಕೆ ಜೊತೆಯಾಗಿ ಸಾಗುತ್ತವೆಯಾದರೂ ಅವು ಜೊತೆಯಾಗಿ ಸಾಗಲೇಬೇಕು. ಆರೋಪವನ್ನು ರುಜುವಾತು ಮಾಡದಿದ್ದರೆ ಅದು ಕೇವಲ ಆರೋಪವಾಗಿಯೇ ಉಳಿಯುತ್ತದೆ ಎಂದು ಶತ್ರು ಟ್ವೀಟಿಸಿದ್ದಾರೆ.

ಕೇಜ್ರಿವಾಲ್ ಅವರು ತನ್ನ ಸಂಪುಟ ಸಹೋದ್ಯೋಗಿ ಸತ್ಯೇಂದ್ರ ಜೈನ್ ಅವರಿಂದ ಎರಡು ಕೋಟಿ ರೂ.ಗಳ ಲಂಚ ಪಡೆದಿದ್ದಾರೆ ಎಂದು ದಿಲ್ಲಿ ಸರಕಾರದ ಮಾಜಿ ಸಚಿವ ಕಪಿಲ್ ಮಿಶ್ರಾ ಆರೋಪಿಸಿದ್ದರೆ, ಲಾಲು ಪ್ರಸಾದ್‌ರ ಕುಟುಂಬವು ಅಕ್ರಮ ಸಂಪತ್ತನ್ನು ಗುಡ್ಡೆ ಹಾಕಿರುವ ಆರೋಪವನ್ನು ಹೊತ್ತಿದೆ. ಈ ಎರಡೂ ಪ್ರಕರಣಗಳಲ್ಲಿ ಪ್ರಮುಖ ಟೀಕಾಕಾರನಾಗಿರುವ ಬಿಜೆಪಿ ಉಭಯ ನಾಯಕರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿದೆ.

ಪಕ್ಷದ ನಿಲುವಿಗೆ ವಿರುದ್ಧವಾದ ಅಭಿಪ್ರಾಯಗಳಿಗೆ ಹೆಸರಾಗಿರುವ ಸಿನ್ಹಾ ಅವರನ್ನು ಬಿಜೆಪಿಯಲ್ಲಿ ಮೂಲೆಗುಂಪು ಮಾಡಲಾಗಿದೆ. ಅವರು ಈ ಹಿಂದೆಯೂ ಕೇಜ್ರಿವಾಲ್ ಮತ್ತು ಲಾಲುರನ್ನು ಹೊಗಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News