ಧೋಲಾ-ಸದಿಯಾ ಸೇತುವೆಗೆ ತೆರಳಲು ಅನುಮತಿ ವಂಚಿತ ಅಸ್ಸಾಂ ಮಾಜಿ ಸಿಎಂ
ಗುವಾಹಟಿ,ಮೇ 22: ತಿನ್ಸುಕಿಯಾ ಜಿಲ್ಲೆಯ ಧೋಲಾ-ಸದಿಯಾದಲ್ಲಿ ನಿರ್ಮಿಸ ಲಾಗಿರುವ ದೇಶದ ಅತ್ಯಂತ ಉದ್ದದ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಮೇ 26ರಂದು ಉದ್ಘಾಟಿಸಲಿದ್ದಾರೆ. ಇಲ್ಲಿ ವಿಷಯ ಇದಲ್ಲ....ಪ್ರಧಾನಿಯ ರಕ್ಷಣೆಯ ಹೊಣೆಯನ್ನು ಹೊತ್ತಿರುವ ಎಸ್‌ಪಿಜಿ ಅಧಿಕಾರಿಗಳು ಸೋಮವಾರ ಬೆಳಿಗ್ಗೆ ಅಲ್ಲಿಗೆ ತೆರಳಿದ್ದ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರಿಗೆ ‘ಭದ್ರತಾ ಕಾರಣ’ ನೀಡಿ ಸೇತುವೆಯ ಸಮೀಪಕ್ಕೂ ಹೋಗಲು ಅವಕಾಶ ನೀಡಿಲ್ಲ.
2011ರಲ್ಲಿ ಕೇಂದ್ರ ಮತ್ತು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದ್ದಾಗ ಈ ಸೇತುವೆಯ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. ಮೇ 26ರಂದು ಮೋದಿಯವರು ಇಲ್ಲಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಎಸ್‌ಪಿಜಿ ಸೇತುವೆಯ ಇಡೀ ಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.
ಭದ್ರತಾ ಕಾರಣಗಳು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ನೆಪವೊಡ್ಡಿ ಅವರು ಸೇತುವೆಯ ಬಳಿಗೆ ತೆರಳಲು ನನಗೆ ಅವಕಾಶ ನೀಡಲಿಲ್ಲ. ನಾನೇನು ಭಯೋತ್ಪಾದಕನೇ ಅಥವಾ ಕಾನೂನು ಭಂಜಕನೇ? ಸೇತುವೆಗೆ ಭೇಟಿ ನೀಡಲು ಅವರು(ಎಸ್‌ಪಿಜಿ) ನನಗೇಕೆ ಅವಕಾಶ ನೀಡುತ್ತಿಲ್ಲ ಎಂದು ಗೊಗೊಯ್ ಪ್ರಶ್ನಿಸಿದರು. ವ್ಯಂಗ್ಯವೆಂದರೆ ಸ್ವತಃ ಗೊಗೊಯ್ ಝಡ್ ಪ್ಲಸ್ ಭದ್ರತೆಯನ್ನು ಹೊಂದಿದ್ದಾರೆ.
ಬ್ರಹ್ಮಪುತ್ರಾ ನದಿಗೆ ಅಡ್ಡವಾಗಿ ಈ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದು ಮತ್ತು ನಿರ್ಮಾಣ ಕಾಮಗಾರಿಯನ್ನು ನಡೆಸಿ ಸೇತುವೆಯನು ಪೂಣಗೊಳಿಸಿದ್ದು ಕಾಂಗ್ರೆಸ್ ಸರಕಾರ. ಆದರೆ ಈಗ ಬಿಜೆಪಿ ಭಾರೀ ಸದ್ದುಗದ್ದಲದೊಂದಿಗೆ ಅದನ್ನು ಉದ್ಘಾಟಿಸಿ ಸೇತುವೆಯ ಸಂಪೂರ್ಣ ಹೆಗ್ಗಳಿಕೆಯನ್ನು ತಾನು ಪಡೆದುಕೊಳ್ಳಲು ಯತ್ನಿಸುತ್ತಿದೆ ಎಂದು ಗೊಗೊಯ್ ಆರೋಪಿಸಿದರು.
ಇದು ನಾವು ಸಸಿಯೊಂದನ್ನು ನೆಟ್ಟು ಪೋಷಿಸಿದಂತೆ ಮತ್ತು ಈಗ ಅವರು ಹಣ್ಣು ತಿನ್ನುವಂತಿದೆ. ಅವರು ಹಣ್ಣನ್ನು ತಿನ್ನಲಿ,ಬಿಡಿ. ಆದರೆ ನಾನು ಇಲ್ಲಿಗೆ ಬಂದು ನನ್ನ ಮರವನ್ನೂ ನೋಡಬಾರದೇ ಎಂದು ಹಿರಿಯ ಕಾಂಗ್ರೆಸ್ ನಾಯಕ ಗೊಗೊಯ್ ಪ್ರಶ್ನಿಸಿದರು.
ರಾಜಕೀಯ ಒಳಸಂಚಿನಿಂದಾಗಿ ತನ್ನನ್ನು ಸೇತುವೆಯ ಬಳಿಗೆ ತೆರಳಲು ಬಿಟ್ಟಿಲ್ಲ ಎಂದೂ ಅವರು ಆರೋಪಿಸಿದರು.
ಉದ್ಘಾಟನೆಯ ಸಲುವಾಗಿ ಸೇತುವೆಯನ್ನು ಮುಚ್ಚಲಾಗಿದೆ. ಎಸ್‌ಪಿಜಿ ಅಲ್ಲಿ ಭದ್ರತಾ ತಪಾಸಣೆಗಳನ್ನು ಕೈಗೊಂಡಿದೆ. ಕಾರ್ಮಿಕರನ್ನು ಹೊರತುಪಡಿಸಿ ಬೇರೆ ಯಾರಿಗೂ ಸೇತುವೆಯತ್ತ ತೆರಳಲು ಅವಕಾಶ ನೀಡುವುದಿಲ್ಲ ಎಂದು ಎಸ್‌ಪಿಜಿ ತಿಳಿಸಿದೆ ಎಂದು ತಿನ್ಸುಕಿಯಾ ಜಿಲ್ಲಾಧಿಕಾರಿ ರಂಜನ್ ಚಕ್ರವರ್ತಿ ಅವರು ಈ ಬಗ್ಗೆ ಪ್ರಶ್ನಿಸಿದ ಸುದ್ದಿಗಾರರಿಗೆ ಸಮಜಾಯಿಷಿ ನೀಡಿದರು.