ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಅರಾಜಕತೆ: ರಾಹುಲ್ ಗಾಂಧಿ

Update: 2017-05-22 15:10 GMT

 ಹೊಸದಿಲ್ಲಿ, ಮೇ 22: ರಾಜಸ್ತಾನದಿಂದ ಆರಂಭವಾಗಿ ಉ.ಪ್ರದೇಶ, ಹರ್ಯಾನ ಮತ್ತು ಈಗ ಜಾರ್ಖಂಡ್- ಹೀಗೆ ಬಿಜೆಪಿ ಆಡಳಿತದ ರಾಜ್ಯಗಳು ಅನಾಯಕತ್ವ ಮತ್ತು ಅರಾಜಕತೆಯ ಸ್ಥಿತಿಗೆ ತಲುಪಿರುವ ಬಗ್ಗೆ ಪ್ರಧಾನಿ ಉತ್ತರ ನೀಡುವರೇ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಜಾರ್ಖಂಡ್‌ನಲ್ಲಿ ಏಳು ಮಂದಿ ಅಮಾಯಕರಿಗೆ ಚಿತ್ರಹಿಂಸೆ ನೀಡಿದ ಘಟನೆಯ ಕುರಿತ ಭಯಾನಕ ವಿವರ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವಂತೆಯೇ, ಇದನ್ನು ಖಂಡಿಸಿ ಟ್ವೀಟ್ ಮಾಡಿರುವ ರಾಹುಲ್, ಇನ್ನಾದರೂ ಪ್ರಧಾನಿ ವೌನ ಮುರಿಯುವರು ಎಂದು ಆಶಿಸುತ್ತೇನೆ ಎಂದಿದ್ದಾರೆ.

 ಮೋದಿ ಬಗ್ಗೆ ರಾಹುಲ್ ಟ್ವಿಟರ್‌ನಲ್ಲಿ ಟೀಕೆ ಮಾಡುತ್ತಿರುವಂತೆಯೇ ಟ್ವಿಟರ್‌ನಲ್ಲಿ ‘ಚಿತ್ರಹಿಂಸೆ ದೊಂಬಿ ಸರಕಾರ’ ಎಂಬ ‘ಹ್ಯಾಷ್‌ಟ್ಯಾಗ್’ಲ್ಲಿ ಚರ್ಚೆ ವೇಗ ಪಡೆದುಕೊಂಡಿದೆ.

  ಮೇ 22ರಂದು ಬಿಜೆಪಿ ಆಡಳಿತದ ಜಾರ್ಖಂಡ್‌ನಲ್ಲಿ ಮಕ್ಕಳನ್ನು ಕಳವು ಮಾಡುವ ಜಾಲದವರು ಎಂಬ ಶಂಕೆಯಿಂದ ಗುಂಪೊಂದು ಏಳು ಮಂದಿ ಅಮಾಯಕರನ್ನು ನಿರ್ದಯವಾಗಿ ಥಳಿಸಿ ಚಿತ್ರಹಿಂಸೆ ನೀಡಿತ್ತು. (ಇವರಲ್ಲಿ ನಾಲ್ವರು ಮುಸ್ಲಿಮರು, ಮೂವರು ಹಿಂದೂ ಧರ್ಮೀಯರು). ಬಿಜೆಪಿ ಆಡಳಿತವಿರುವ ಇನ್ನೊಂದು ರಾಜ್ಯವಾದ ರಾಜಸ್ತಾನದಲ್ಲಿ ಕಳೆದ ಎಪ್ರಿಲ್‌ನಲ್ಲಿ ಜಾನುವಾರು ಅಕ್ರಮ ಸಾಗಾಟಗಾರರೆಂದು ತಪ್ಪು ತಿಳಿದು ನಾಲ್ವರು ಹೈನುಗಾರರ ಮೇಲೆ ಗುಂಪೊಂದು ಆಕ್ರಮಣ ಮಾಡಿ ಅಮಾನುಷವಾಗಿ ಥಳಿಸಿತ್ತು. ಹಲ್ಲೆಗೊಳಗಾದವರ ಪೈಕಿ 50ರ ಹರೆಯದ ಪಹ್ಲುಖಾನ್ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

  ಉ.ಪ್ರದೇಶದಲ್ಲಿ ಮೇ ತಿಂಗಳ ಆರಂಭದಲ್ಲಿ ನಡೆದ ಘಟನೆಯಲ್ಲಿ, ಅಂತರ್ಜಾತೀಯ ವಿವಾಹವಾದ ದಂಪತಿಗೆ ರಕ್ಷಣೆ ನೀಡಿದರೆಂಬ ಶಂಕೆಯಲ್ಲಿ ಗುಲಾಂ ಮುಹಮ್ಮದ್ ಎಂಬ ವೃದ್ಧರೋರ್ವರಿಗೆ ಚಿತ್ರಹಿಂಸೆ ನೀಡಲಾಗಿತ್ತು. ಉ.ಪ್ರದೇಶದಲ್ಲಿ ಕಳೆದ ಎರಡು ತಿಂಗಳಲ್ಲಿ ಸಹಾರನ್‌ಪುರ ಪ್ರಕರಣದ ಸೇರಿದಂತೆ ಲವು ಹಿಂಸಾಚಾರದ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News