ಬಾಹುಬಲಿ 2 ಯಾವ ದಾಖಲೆಯನ್ನೂ ಮುರಿದಿಲ್ಲ : ಗದರ್ ಚಿತ್ರದ ನಿರ್ದೇಶಕ ಅನಿಲ್ ಶರ್ಮಾ

Update: 2017-05-23 06:47 GMT

ಮುಂಬೈ,ಮೇ 23 : ಭಾರೀ ಸೂಪರ್ ಹಿಟ್ ಚಿತ್ರವೆಂದು ಬಿಂಬಿತವಾಗಿರುವ ‘ಬಾಹುಬಲಿ 2: ದಿ ಕಂಕ್ಲೂಶನ್’ ವಾಸ್ತವವಾಗಿ ಇನ್ನೂ ಯಾವುದೇ ಹೊಸ ದಾಖಲೆ ನಿರ್ಮಿಸಿಲ್ಲ, ಎಂದು ‘ಗದರ್’ ಚಿತ್ರದ ನಿದೇಶಕ ಅನಿಲ್ ಶರ್ಮಾ ಹೇಳಿಕೊಂಡಿದ್ದಾರೆ. ‘‘ಇದು ಕೇವಲ ಸಮಯದ ಪ್ರಭಾವ. 2001ರಲ್ಲಿ ಗದರ್- ಏಕ್ ಪ್ರೇಮ್ ಕಥಾ ಬಿಡುಗಡೆಯಾದಾಗ ಅದು ರೂ. 265 ಕೋಟಿ ಬಾಚಿತ್ತು. ಈಗಿನ ಲೆಕ್ಕಾಚಾರದ ಪ್ರಕಾರ ಅದು ರೂ 5,000 ಕೋಟಿಗೆ ಸಮ,’’ ಎಂದು ಶರ್ಮಾ ಹೇಳುತ್ತಾರೆ.

ತಮ್ಮ ಪುತ್ರ ಉತ್ಕರ್ಷ್ ನ ಪ್ರಥಮ ಚಿತ್ರ ‘ಜೀನಿಯಸ್’ ಇದರ ಅದ್ದೂರಿ ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದ ಶರ್ಮ ಪತ್ರಕರ್ತರೊಡನೆ ಮಾತನಾಡುತ್ತಾ ಮೇಲಿನಂತೆ ಹೇಳಿದರು.

‘ಗದರ್’ ಹೊರತಾಗಿ ‘ಅಪ್ನೆ’ ಮುಂತಾದ ಹಿಟ್ ಚಿತ್ರಗಳನ್ನು ನೀಡಿರುವ ಶರ್ಮ ಅವರನ್ನು ಬಾಹುಬಲಿ-2 ಚಿತ್ರ ರೂ.1000 ಕೋಟಿ ಬಾಚಿ ಹೊಸ ದಾಖಲೆಯನ್ನು ಸ್ಥಾಪಿಸಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದ್ದರು. ಹಲವು ಬಾರಿ ಅದೇ ಪ್ರಶ್ನೆಯನ್ನು ಕೇಳಿದ ನಂತರ ಪ್ರತಿಕ್ರಿಯಿಸಿದ ಅವರು ‘‘ನನ್ನನ್ನು ಈ ವಿಷಯದಲ್ಲಿ ಎಳೆದು ತರಬೇಡಿ. ಒಳ್ಳೆಯ ಚಿತ್ರಗಳು ಬಂದಾಗ ದಾಖಲೆಗಳು ಮುರಿಯುತ್ತವೆ. ಆದರೆ ಬಾಹುಬಲಿ 2 ವಿಚಾರ ಹೇಳುವುದಾದರೆ ಅದು ಇನ್ನೂ ಯಾವುದೇ ಹೊಸ ದಾಖಲೆ ನಿರ್ಮಿಸಿಲ್ಲ,’’ ಎಂದರು.

‘‘ಟಿಕೆಟ್ ದರಗಳು ಕೇವಲ ರೂ .25 ಇದ್ದಾಗ 2001ರಲ್ಲಿ ಗದರ್ ರೂ 265 ಕೋಟಿ ಗಳಿಸಿತ್ತು. ಈ ರೀತಿ ಲೆಕ್ಕ ಹಾಕಿದರೆ ಈ ಮೊತ್ತ ಈಗಿನ ರೂ 5000 ಕೋಟಿಗೆ ಸಮ. ಇದೇ ಲೆಕ್ಕಾಚಾರದಂತೆ ಬಾಹುಬಲಿ 2 ಬಗ್ಗೆ ಹೇಳುವುದಾದರೆ ಅದು ರೂ 1,500 ಕೋಟಿ ಗಳಿಸಿದೆ. ಆದುದರಿಂದ ಯಾವುದೇ ದಾಖಲೆಯನ್ನು ಅದು ಮುರಿದಿಲ್ಲ’’ ಎಂದರು ಶರ್ಮಾ.

ಶರ್ಮಾ ಅವರ ಪುತ್ರ ಉತ್ಕರ್ಷ್ ‘ಗದರ್’ ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದರು. ಮುಹೂರ್ತ ಸಮಾರಂಭಧಲ್ಲಿ ಹಿರಿಯ ನಟ ಧರ್ಮೇಂದ್ರ, ನಟಿ ಹೇಮಾಮಾಲಿನಿ ಕೂಡ ಪಾಲ್ಗೊಂಡು ಚಿತ್ರಕ್ಕೆ ಶುಭಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News