'ದಿ ವಿಲನ್'ಗೆ ವಿಲನ್ ಆದ "ಬಿರುಗಾಳಿ"
ಬೆಂಗಳೂರು, ಮೇ 23: ಕಿಚ್ಚ ಸುದೀಪ್-ಶಿವರಾಜ್ ಕುಮಾರ್ ಅಭಿನಯದ, ಜೋಗಿ ಪ್ರೇಂ ನಿರ್ದೇಶನದ ಬಹು ನಿರೀಕ್ಷಿತ "ದಿ ವಿಲನ್" ಚಿತ್ರಕ್ಕೆ ಬಿರುಗಾಳಿ ವಿಲನ್ ಆಗಿ ಪರಿಣಮಿಸಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಬಳಿ ಕೆಲದಿನಗಳ ಹಿಂದಷ್ಟೇ ಕಿಚ್ಚ ಸುದೀಪ್ ಅಭಿನಯದ 'ದಿ ವಿಲನ್' ಚಿತ್ರ ಸೆಟ್ಟೇರಿತ್ತು. ಚೇಸಿಂಗ್, ಫೈಟಿಂಗ್ ಚಿತ್ರೀಕರಣಕ್ಕಾಗಿ ಅಥಣಿ ಸಮೀಪದ ರಾಮತೀರ್ಥ ಬಳಿ ಅದ್ಧೂರಿ ಸೆಟ್ ಹಾಕಲಾಗಿತ್ತು. ಈ ಸೆಟ್ ನಲ್ಲಿ ಕೆಲ ದಿನಗಳಿಂದ ಶೂಟಿಂಗ್ ಸಾಗಿದ್ದು, ವಿವಿಧ ಸನ್ನಿವೇಶಗಳ ಶೂಟಿಂಗ್ ನಡೆಯುತ್ತಿತ್ತು. ಸೋಮವಾರ ಸಂಜೆಯಾಗುತ್ತಿದ್ದಂತೆ ಸ್ಥಳದಲ್ಲಿ ಭಾರೀ ಬಿರುಗಾಳಿ ಬೀಸಿದ್ದು, ಸೆಟ್ ಗಳು ಧ್ವಂಸವಾದವು. ದುಬಾರಿ ವೆಚ್ಚದ ಸೆಟ್ ಗಳು ಉರುಳಿ ಬಿದ್ದಿದ್ದರಿಂದ ಭಾರೀ ನಷ್ಟ ಸಂಭವಿಸಿದೆ.
ಚಿತ್ರೀಕರಣ ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದರು. ನಟ ಕಿಚ್ಚ ಸುದೀಪ್ ಹಾಗೂ ಅನೇಕ ತಾರೆಯರು ಈ ಸಂದರ್ಭದಲ್ಲಿ ಶೂಟಿಂಗ್ ಸ್ಪಾಟ್ ನಲ್ಲೇ ಇದ್ದರು. ಬಿರುಗಾಳಿ ಹಾಗೂ ಮಳೆಯಿಂದ ಪಾರಾಗಲು ಸುದೀಪ್, ನಿರ್ದೇಶಕ ಪ್ರೇಮ್, ಸಾಹಸ ನಿರ್ದೇಶಕ ಮಾಸ್ ಮಾದ ಸೇರಿದಂತೆ ಎಲ್ಲರೂ ಹರಸಾಹಸವನ್ನೇ ಪಡಬೇಕಾಯಿತು. ಬಹುತೇಕ ಮಂದಿ ಶೀಟ್ ಗಳ ಕೆಳಗೆ ರಕ್ಷಣೆ ಪಡೆದರೆ, ಮೈದಾನದ ಸುತ್ತ ಜಮಾಯಿಸಿದ್ದ ಜನ, ಬಿರುಗಾಳಿಗೆ ಬೆದರಿ ದಿಕ್ಕಾಪಾಲಾಗಿ ಓಡಿದರು.
ಕೆಲ ದಿನಗಳ ಹಿಂದಷ್ಟೇ ಭಾರೀ ಮಳೆ ಯಶ್ ಅಭಿನಯದ 'ಕೆಜಿಎಫ್' ಚಿತ್ರದ ಶೂಟಿಂಗ್ ಗೆ ಅಡ್ಡಿಪಡಿಸಿತ್ತು. ದುಬಾರಿ ವೆಚ್ಚದ ಸೆಟ್ ಗಳು ನಾಶವಾಗಿದ್ದವು.