ಸುಳ್ಳು ಸುದ್ದಿ ಓದಿ ಅರುಂಧತಿಯನ್ನು ಜೀಪಿಗೆ ಕಟ್ಟಲು ಹೊರಟಿದ್ದ ಪರೇಶ್ ರಾವಲ್

Update: 2017-05-24 13:36 GMT

ನವದೆಹಲಿ, ಮೇ 24: ಖ್ಯಾತ ಲೇಖಕಿ ಅರುಂಧತಿ ರಾಯ್ ಇತ್ತೀಚೆಗೆ ಶ್ರೀನಗರಕ್ಕೆ ಭೇಟಿ ನೀಡಿದ್ದಾರೆನ್ನಲಾದ ಸಂದರ್ಭ ಅವರು ನೀಡದೇ ಇದ್ದ ಸಂದರ್ಶನವೊಂದರ ಬಗ್ಗೆ ವರದಿಯಾಗಿದ್ದ ಒಂದು ಸುಳ್ಳು ಸುದ್ದಿಯನ್ನು ನಂಬಿ ಬಿಜೆಪಿ ಸಂಸದ ಹಾಗೂ ನಟ ಪರೇಶ್ ರಾವಲ್ ‘‘ಕಾಶ್ಮೀರದಲ್ಲಿ ಕಲ್ಲು ತೂರಾಟಗಾರನ ಬದಲು ಅರುಂಧತಿ ರಾಯ್ ಅವರನ್ನು ಜೀಪಿಗೆ ಕಟ್ಟಬೇಕು’’ ಎಂದು ಟ್ವೀಟ್ ಮಾಡಿ ವಿವಾದಕ್ಕೀಡಾಗಿದ್ದಾರೆಂಬ ಮಾಹಿತಿ ಹೊರ ಬಿದ್ದಿದೆ. ತಮ್ಮ ಟ್ವೀಟಿನಿಂದಾಗಿ ಪರೇಶ್ ರಾವಲ್ ಸಾಕಷ್ಟು ಮಂದಿಯ ವಿರೋಧ ಕಟ್ಟಿಕೊಳ್ಳಬೇಕಾಗಿಯೂ ಬಂದಿದೆಯಲ್ಲದೆ ಟ್ವಿಟ್ಟರಿಗರಿಂದ ಟೀಕಾಪ್ರಹಾರವನ್ನೇ ಎದುರಿಸುತ್ತಿದ್ದಾರಲ್ಲದೆ ಅವರ ಬೆಂಬಲಿಗರು ಹಾಗೂ ವಿರೋಧಿಗಳ ನಡುವೆ ಟ್ವಿಟ್ಟರ್ ಯುದ್ಧವೇ ನಡೆಯುತ್ತಿದೆ.

ಆದರೆ ದಿ ವೈರ್ ನೊಂದಿಗೆ ಮಾತನಾಡಿದ ಅರುಂಧತಿ ರಾಯ್ ಎಲ್ಲವನ್ನೂ ‘ಅಸಂಬದ್ಧ’ವೆಂದು ಬಣ್ಣಿಸಿದ್ದು ತಾನು ಇತ್ತೀಚೆಗೆ ಶ್ರೀನಗರಕ್ಕೆ ಹೋಗಿಯೇ ಇಲ್ಲ ಹಾಗೂ ಕಳೆದ ವರ್ಷ ಔಟ್ ಲುಕ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದನ್ನು ಹೊರತುಪಡಿಸಿ ಕಾಶ್ಮೀರದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಹೇಳಿದ್ದಾರೆ.

ದಿ ನ್ಯಾಷನಲಿಸ್ಟ್ ಇದರ ಫೇಸ್ ಬುಕ್ ಪುಟವೊಂದರಲ್ಲಿ ‘‘70 ಲಕ್ಷ ಸೈನಿಕರಿರುವ ಭಾರತೀಯ ಸೇನೆಗೆ ಕಾಶ್ಮೀರದಲ್ಲಿನ ಆಜಾದಿ ಗ್ಯಾಂಗನ್ನು ಸೋಲಿಸಲು ಆಗುತ್ತಿಲ್ಲ " ಅರುಂಧತಿ ರಾಯ್ ಪಾಕಿಸ್ತಾನಿ ದೈನಿಕವೊಂದಕ್ಕೆ ಹೇಳಿಕೆ ನೀಡಿದ್ದಾರೆ’’ ಎಂದು ಬರೆದಿತ್ತು. ಇದನ್ನು ಪರೇಶ್ ರಾವಲ್ ಟ್ವೀಟ್ ಮಾಡಿದ್ದರು. ಈ ಸುದ್ದಿಯ ಮೂಲ ಬಲಪಂಥೀಯ ನಕಲಿ ಸುದ್ದಿಗಳ ತಾಣವಾಗಿರುವ ಪೋಸ್ಟ್ ಕಾರ್ಡ್.ನ್ಯೂಸ್ ಆಗಿದ್ದು ಅದು ಮೇ 17ರಂದು ಇದೇ ಶೀರ್ಷಿಕೆಯಡಿಯಲ್ಲಿ ಲೇಖನವನ್ನು ಐಶ್ವರ್ಯಾ ಎಸ್ ಎಂಬ ಹೆಸರಿನೊಂದಿಗೆ ಪ್ರಕಟಿಸಿತ್ತು.

ಪೋಸ್ಟ್ ಕಾರ್ಡ್. ನ್ಯೂಸ್ ಈ ಲೇಖನದ ಆಧಾರಕ್ಕೆ ಯಾವುದೇ ಲಿಂಕ್ ನೀಡದೇ ಹೋದರೂ ಇಂತಹುದೇ ಒಂದು ಲೇಖನ ಅದೇ ದಿನ ಆನಂದ್ ಎಂಬವರ ಹೆಸರಿನಲ್ಲಿ ಇನ್ನೊಂದು ಹಿಂದುತ್ವವಾದಿ ನಕಲಿ ಸುದ್ದಿ ತಾಣ ಸತ್ಯವಿಜಯಿ.ಕಾಂನಲ್ಲಿ ಪ್ರಕಟವಾಗಿತ್ತಲ್ಲದೆ ದಿಇಂಡಿಯನ್‌ವಾಯ್ಸೊ. ಕಾಂ ನಲ್ಲಿ ಅಂಕಿತಾ ಕೆ ಎಂಬ ಹೆಸರಿನಲ್ಲಿ ಪ್ರಕಟವಾಗಿತ್ತು.

ಹೀಗೆ ಹಲವು ಬಲಪಂಥೀಯ ಸುಳ್ಳು ಸುದ್ದಿಗಳ ತಾಣವು ಇಂತಹುದೇ ಸುದ್ದಿ ಪ್ರಕಟಿಸಿದ್ದರೆ ಇಂಟರ್ನೆಟ್‌ಹಿಂದು.ಇನ್ ಸ್ವಲ್ಪ ವಿಭಿನ್ನವಾಗಿ ಬರೆದಿದ್ದು ಟೈಮ್ಸ್ ಆಫ್ ಇಸ್ಲಾಮಾಬಾದ್ ಸುದ್ದಿಯೊಂದರ ಲಿಂಕ್ ನೀಡಿತ್ತು. ಈ ಪಾಕಿಸ್ತಾನದ ಪತ್ರಿಕೆ ಮೇ 16ರಲ್ಲಿ ಮೇಲಿನ ಶೀರ್ಷಿಕೆಯಲ್ಲಿಯೇ ಸುದ್ದಿ ಪ್ರಕಟಿಸಿತ್ತಲ್ಲದೆ ಕೆಳಗೆ ಕೇವಲ ‘ನ್ಯೂಸ್ ಡೆಸ್ಕ್’ ಎಂದು ಬರೆದಿತ್ತು ಹಾಗೂ ಅರುಂಧತಿ ಇತ್ತೀಚೆಗೆ ಶ್ರೀನಗರಕ್ಕೆ ಹೋಗಿದ್ದಾಗ ಹೇಳಿಕೆ ನೀಡಿದ್ದರೆಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News