ಲೋಕಾಯುಕ್ತದಲ್ಲಿ ಗಣ್ಯರ ವಿರುದ್ಧ ದೂರುಗಳು ದಾಖಲು: ನಿಯಮಗಳ ಪ್ರಕಾರ ವಿಲೇವಾರಿ ನ್ಯಾ. ಪಿ.ವಿಶ್ವನಾಥ್ ಶೆಟ್ಟಿ
ಬೆಂಗಳೂರು, ಮೇ 24: ಲೋಕಾಯುಕ್ತದಲ್ಲಿ ಮುಖ್ಯಮಂತ್ರಿ ಸೇರಿ ಹಲವು ಗಣ್ಯ ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದ್ದು, ಯಾವುದೇ ಒತ್ತಡಕ್ಕೂ ಮಣಿಯದೆ ನಿಯಮಗಳ ಪ್ರಕಾರ ಕೈಗೆತ್ತಿಕೊಂಡು ವಿಲೇವಾರಿ ಮಾಡಲಾಗುವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೂವರೆ ವರ್ಷದಿಂದ ಲೋಕಾಯುಕ್ತ ಹುದ್ದೆ ಖಾಲಿ ಇತ್ತು. ಹೀಗಾಗಿ, ಸಾವಿರಾರು ದೂರುಗಳು ವಿಲೇವಾರಿ ಆಗಿಲ್ಲ. ಎಲ್ಲ ಪ್ರಕರಣಗಳ ತನಿಖೆ ನಡೆಯುತ್ತಿದ್ದು, ಅಧಿಕಾರಿಗಳ ಬಳಿ ಪ್ರಕರಣಗಳ ದಾಖಲೆಗಳಿವೆ. ಎಲ್ಲವನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿ ಆಪ್ತರು ಅಥವಾ ಗಣ್ಯ ವ್ಯಕ್ತಿಗಳು ಎಂಬುದು ಇಲ್ಲಿ ಗಣನೆಗೆ ಬರುವುದಿಲ್ಲ. ಅಗತ್ಯ ದಾಖಲೆ ಸಾಕ್ಷಾಧಾರ ಮತ್ತು ದಾಖಲೆಗಳನ್ನು ಇಟ್ಟುಕೊಂಡು ತನಿಖೆ ಮಾಡಬೇಕಾಗಿರುವುದರಿಂದ ತ್ವರಿತಗತಿಯಲ್ಲಿ ಕೇಸ್‌ಗಳನ್ನು ತನಿಖೆ ಮಾಡಲು ಸಾಧ್ಯವಿಲ್ಲ. ಎಲ್ಲವೂ ನಿಯಮಗಳ ಪ್ರಕಾರ ನಡೆಯುತ್ತದೆ ಎಂದು ತಿಳಿಸಿದರು.
ನಾನು ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ಅಧೀನದಲ್ಲಿ ಹಿರಿಯ ಅಧಿಕಾರಿಗಳು ಇದ್ದಾರೆ. ಉಳಿದಿರುವ ಎಲ್ಲ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥ ಮಾಡುತ್ತೇವೆ ಎಂದು ಪ್ರ ಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.