ಆ್ಯಸಿಡ್ ಎರಚಿ ಮಾಜಿ ಪ್ರಿಯಕರನನ್ನು ಕೊಂದ ಯುವತಿ
ಹೈದರಾಬಾದ್, ಮೇ 24: ಬೇರೆ ಯುವತಿಯನ್ನು ಮದುವೆಯಾದ ಮಾಜಿ ಪ್ರಿಯಕರನನ್ನು ಯುವತಿಯೊಬ್ಬಳು ಆ್ಯಸಿಡ್ ಎರಚಿ ಕೊಲೆಗೈದ ಘಟನೆ ಗುಂಟೂರು ಜಿಲ್ಲೆಯ ವೆನಿಗಾಂಡ್ಲದಲ್ಲಿ ನಡೆದಿದೆ. ಆ್ಯಸಿಡ್ ದಾಳಿಯಿಂದ ಗಂಭೀರಾವಸ್ಥೆಯಲ್ಲಿದ್ದ ವ್ಯಕ್ತಿ ಗುಂಟೂರು ಸರಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಪಮುಲಪಡು ಗ್ರಾಮದ ಇಲ್ಯಾಸ್ ಹಾಗೂ ತಡಿಕೊಂಡ ಮಂಡಲದ ಹಿಮಾ ಬಿಂದು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಬಿಂದು ಖಾಸಗಿ ಕಾಲೇಜೊಂದರಲ್ಲಿ ಫಾರ್ಮಿಸಿ ಕೋರ್ಸ್ ಮಾಡುತ್ತಿದ್ದು, ಪದವಿ ಸಮಯದಿಂದಲೇ ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಇಲ್ಯಾಸ್ ಸೋಮವಾರ ಬೇರೆ ಯುವತಿಯೊಂದಿಗೆ ವಿವಾಹವಾಗಿದ್ದಾನೆ. ಇದರಿಂದ ಕೋಪಗೊಂಡ ಬಿಂದು ಮಾತುಕತೆ ನಡೆಸಬೇಕು ಎಂದು ಇಲ್ಯಾಸ್ ಗೆ ಕರೆ ಮಾಡಿದ್ದಾಳೆ. ಇದರಿಂದಾಗಿ ಇಲ್ಯಾಸ್ ತೆರಳಿದ್ದು, ಆತ ಹತ್ತಿರ ಬರುತ್ತಿದ್ದಂತೆ ಆಕೆ ಆ್ಯಸಿಡ್ ಎರಚಿದ್ದಾಳೆ ಎನ್ನಲಾಗಿದೆ.ಯುವತಿಯನ್ನು ಬಂಧಿಸಲು ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಿಂದು ಹಾಗೂ ಇಲ್ಯಾಸ್ ಪ್ರೇಮದ ಬಗ್ಗೆ ತಮಗೆ ಅರಿವಿರಲಿಲ್ಲ. ಆದರೆ ಮದುವೆಗೆ ಎರಡು ದಿನ ಮೊದಲು ಬಿಂದು ಇಲ್ಯಾಸ್ ನ ಸಹೋದರ ಅಲ್ಲಾಭಕ್ಷ್ ರನ್ನು ಭೇಟಿಯಾಗಿ ವಿಷಯ ತಿಳಿಸಿದ್ದಾಗಲೇ ಇದು ತಮ್ಮ ಅರಿವಿಗೆ ಬಂದಿತ್ತು ಎಂದು ಇಲ್ಯಾಸ್ ಕುಟುಂಬಸ್ಥರು ತಿಳಿಸಿದ್ದಾರೆ.
“ಈ ಬಗ್ಗೆ ನಮಗೆ ತಿಳಿದಿರಲಿಲ್ಲ. ಇಲ್ಯಾಸ್ ನನ್ನು ಕ್ಷಮಿಸುವಂತೆ ನಾನು ಆಕೆಯಲ್ಲಿ ಬೇಡಿಕೊಂಡಿದ್ದೆ. ಸೋಮವಾರ ನಡೆದ ಮದುವೆ ಸಮಾರಂಭದಲ್ಲೂ ಯಾವುದೇ ರೀತಿಯ ತೊಂದರೆಯನ್ನು ಆಕೆ ನೀಡಿರಲಿಲ್ಲ. ಆದರೆ ಮರುದಿನವೇ ಆಕೆ ದ್ವೇಷ ಸಾಧಿಸಿ, ನವವಧುವನ್ನು ವಿಧವೆ ಮಾಡಿದ್ದಾಳೆ” ಎಂದು ಇಲ್ಯಾಸ್ ರ ಸಹೋದರ ಅಲ್ಲಾಭಕ್ಷ್ ಪ್ರತಿಕ್ರಿಯಿಸಿದ್ದಾರೆ.