ಅಲ್ಪಸಂಖ್ಯಾತರ ಆಯೋಗಕ್ಕೆ ಐವರು ಸದಸ್ಯರ ನೇಮಕ

Update: 2017-05-24 16:02 GMT

ಹೊಸದಿಲ್ಲಿ,ಮೇ 24: ಕೇಂದ್ರವು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಕ್ಕೆ ಐವರು ಸದಸ್ಯರನ್ನು ನೇಮಕಗೊಳಿಸಿದೆ. ಆಯೋಗದಲ್ಲಿ ಸದಸ್ಯ ಸ್ಥಾನಗಳು ಖಾಲಿಯಿದ್ದ ಹಿನ್ನೆಲೆ ಯಲ್ಲಿ ಸರಕಾರವು ಪ್ರತಿಪಕ್ಷಗಳಿಂದ ಟೀಕೆಗಳಿಗೆ ಗುರಿಯಾಗಿತ್ತು.

ಅಲ್ಪಸಂಖ್ಯಾತ ಸಮುದಾಯಗಳ ಹಿತಾಸಕ್ತಿಗಳ ರಕ್ಷಣೆಯ ಹೊಣೆಯನ್ನು ಹೊತ್ತಿರುವ ಆಯೋಗದಲ್ಲಿ ಈ ವರ್ಷದ ಮಾರ್ಚ್‌ನಲ್ಲಿ ಒಬ್ಬನೇ ಒಬ್ಬ ಸದಸ್ಯನಿರಲಿಲ್ಲ. ಹಿಂದಿನ ಯುಪಿಎ ಸರಕಾರವು ನೇಮಕಗೊಳಿಸಿದ್ದ ಎಲ್ಲ ಏಳೂ ಸದಸ್ಯರು 2015,ಮಾ.9ರಿಂದ ಈ ವರ್ಷದ ಮಾ.9 ನಡುವೆ ನಿವೃತ್ತರಾಗಿದ್ದರು.

ಉತ್ತರ ಪ್ರದೇಶದ ಸಾಮಾಜಿಕ ಕಾರ್ಯಕರ್ತ ಖೈರುಲ್ ಹಸನ್ ಅವರು ಆಯೋಗದ ಅಧ್ಯಕ್ಷರಾಗಲಿದ್ದಾರೆ ಎಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದಲ್ಲಿನ ಮೂಲಗಳು ತಿಳಿಸಿವೆ.

ಕೇರಳದ ಸಾಮಾಜಿಕ ಕಾರ್ಯಕರ್ತ ಹಾಗೂ ಬಿಜೆಪಿ ನಾಯಕ ಜಾರ್ಜ್ ಕುರಿಯನ್, ಮಾಜಿ ಮಹಾರಾಷ್ಟ್ರ ಸಚಿವೆ ಸುಲೇಖಾ ಕುಂಭಾರೆ, ಗುಜರಾತ್‌ನ ಜೈನ ಪ್ರತಿನಿಧಿ ಸುನಿಲ್ ಸಿಂಘಿ ಮತ್ತು ಉದ್ವಾದ್ ಅಥೋರ್ನನ್ ಅಂಜುಮನ್‌ನ ಮುಖ್ಯಗುರು ವಡಾ ದಸ್ತೂರ್ಜಿ ಖುರ್ಷಿದ್ ಅವರು ಆಯೋಗದ ಇತರ ಸದಸ್ಯ ರಾಗಿರುತ್ತಾರೆ. ಇತರ ಇಬ್ಬರು ಸದಸ್ಯರನ್ನು ಒಂದೆರಡು ದಿನಗಳಲ್ಲಿ ನೇಮಕಗೊಳಿಸ ಲಾಗುವುದು ಎಂದು ಮೂಲಗಳು ತಿಳಿಸಿದವು.

 2014,ಜನವರಿಯಲ್ಲಿ ಜೈನರನ್ನು ಅಲ್ಪಸಂಖ್ಯಾತ ಸಮುದಾಯವೆಂದು ಅಧಿಸೂಚನೆ ಹೊರಡಿಸಿದ ಬಳಿಕ ಇದೇ ಮೊದಲ ಬಾರಿಗೆ ಜೈನರೋರ್ವರು ಆಯೋಗದ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಈವರೆಗೆ ನಿವೃತ್ತ ನ್ಯಾಯಾಧೀಶರು ಅಥವಾ ಅಧಿಕಾರಿಗಳು ಆಯೋಗದ ಅಧ್ಯಕ್ಷ ಅಥವಾ ಸದಸ್ಯರಾಗಿರುತ್ತಿದ್ದರು, ಬಹುಶಃ ಇದೇ ಮೊದಲ ಬಾರಿಗೆ ಎಲ್ಲ ಸದಸ್ಯರೂ ವಾಸ್ತವಗಳನ್ನು ಅರಿತಿರುವ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ ಎಂದೂ ಮೂಲಗಳು ತಿಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News