ತನ್ನದೇ ಶವಪೆಟ್ಟಿಗೆಯ ಮುಂದೆ!

Update: 2017-05-24 19:07 GMT

‘‘ಪ್ರತಾಪ ಸಿಂಹ ನಮ್ಮ ಊರಿನ ಸಿಂಹದ ಮರಿ. ಭಾರತ ಮಾತೆಯ ರಕ್ಷಣೆಗಾಗಿ ಹಗಲಿರುಳು ಗಡಿಯಲ್ಲಿ ಹೋರಾಡುತ್ತಿರುವ ಹಿಂದೂ ತರುಣ. ಸದಾ ಕಾಲು ಕೆದರಿ ಜಗಳಕ್ಕೆಳೆಯುವ ಪಾಕಿಸ್ತಾನ ಇಂದು ಬಾಯಿ ಮುಚ್ಚಿ ಕುಳಿತಿದ್ದರೆ ಅದರಲ್ಲಿ ನಮ್ಮ ಊರಿನ ತರುಣ ಪ್ರತಾಪ ಸಿಂಹನ ಘರ್ಜನೆಯ ಕಾರಣವೂ ಇದೆ. ಅದೆಷ್ಟೋ ಬಾರಿ ಪಾಕಿಸ್ತಾನಿಗಳು ಹಾರಿಸಿದ ಗುಂಡೇಟಿನಿಂದ ನಮ್ಮ ಊರಿನ ಮಗನಾದ ಪ್ರತಾಪ ಸಿಂಹ ಕೂದಲೆಳೆಯ ಅಂತರದಿಂದ ಪಾರಾಗಿದ್ದಾನೆ....ತನ್ನ ಧೈರ್ಯ, ಶೌರ್ಯಗಳ ಮೂಲಕ ಅದೆಷ್ಟೋ ಪಾಕಿಸ್ತಾನಿ ವಿದ್ರೋಹಿಗಳ ಸೊಕ್ಕಡಗಿಸಿದ್ದಾನೆ. ಆದರೆ ಇಂದು ಸೆಕ್ಯುಲರ್ ಸೋಗು ಹಾಕುತ್ತಿರುವ ರಾಜಕಾರಣಿಗಳಿಂದಾಗಿ ಈ ನಮ್ಮ ಪ್ರತಾಪಸಿಂಹನಂತಹ ಸಾವಿರಾರು ಹುಡುಗರ ತ್ಯಾಗ, ಬಲಿದಾನಗಳು ವ್ಯರ್ಥವಾಗುತ್ತಿವೆ....ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಣೆಯಾಗಲಿ...ಪಾಕಿಸ್ತಾನ ಭಾರತದ ಅಖಂಡ ಭಾಗ...’’

ಗುರೂಜಿ ಭಾಷಣ ಮಾಡುತ್ತಿದ್ದರೆ ಪಪ್ಪು ಕುಳಿತಲ್ಲೇ ಅದನ್ನು ದಿಗ್ಭ್ರಾಂತನಾಗಿ ಆಲಿಸುತ್ತಿದ್ದ. ಅದಾಗಷ್ಟೇ ಸುಬ್ಬಣ್ಣ ಮೇಷ್ಟ್ರು ಪಪ್ಪುವಿಗೆ ಸನ್ಮಾನ ಮಾಡಿದ್ದರು. ಎಲ್ಲರೂ ಪ್ರತಾಪಸಿಂಹನಿಗೆ ಮತ್ತು ಭಾರತ ಮಾತೆಗೆ ಜಯಘೋಷ ಕೂಗಿದ್ದರು. ವೇದಿಕೆಯಲ್ಲಿ ಪ್ರತಾಪ ಸಿಂಹನ ಪಕ್ಕದಲ್ಲೇ ಚುನಾವಣಾ ಅಭ್ಯರ್ಥಿ ಕೂತಿದ್ದರು. ಆತ ಆಗಾಗ ಪಪ್ಪುವಿನೆಡೆಗ ಬಾಗಿ ಅದೇನೇನೋ ಹಂಚಿಕೊಳ್ಳುತ್ತಿದ್ದ. ಪಪ್ಪುವಿನ ಜೊತೆಗೆ ಭಾರೀ ಪರಿಚಯವಿರುವಂತೆ ನಗು ನಗುತ್ತಾ ಮಾತನಾಡುತ್ತಿದ್ದ. ಆದರೆ ಪಪ್ಪುವಿಗೆ ಅದಾವುದೂ ಅರ್ಥವಾಗುತ್ತಿರಲಿಲ್ಲ. ಅವನಿಗೆ ಇರಿಸುಮುರಿಸಾಗುತ್ತಿತ್ತು. ಯಾರೋ ತನ್ನ ಕೈಕಾಲುಗಳನ್ನು, ನಾಲಗೆಯನ್ನು ಕಟ್ಟಿ ಹಾಕಿದಂತೆ. ಕಣ್ಣನ್ನೂ ಕಟ್ಟಿ ಗಡಿಯಲ್ಲಿ ಬಿಟ್ಟು ಬಿಟ್ಟಂತೆ....ಎಲ್ಲಿಂದ ಯಾರೆಡೆಗೆ ಗುಂಡು ಹಾರುತ್ತಿದೆಯೆನ್ನುವುದೂ ತಿಳಿಯಲಾಗದೆ ಪಪ್ಪು ಕಂಗಾಲಾದ.

ಗುರೂಜಿ ಮಾತು ಆವೇಶದಿಂದ ಕಂಪಿಸುತ್ತಿತ್ತು. ಪದಪದಗಳಲ್ಲೂ ಕಿಡಿ ಹಾರುತ್ತಿತ್ತು. ಗುರೂಜಿ ಯಾಕೆ ಇಷ್ಟು ಆವೇಶಗೊಂಡಿದ್ದಾರೆ ಎನ್ನುವುದು ಅವನಿಗೆ ಅರ್ಥವಾಗಲಿಲ್ಲ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಗುರೂಜಿಯ ಇಂತಹದೇ ಭಾಷಣವನ್ನು ಜಾನಕಿಯ ಜೊತೆಗೆ ಕೇಳಿದ ನೆನಪಾಯಿತು ಅವನಿಗೆ.

‘ಹುತಾತ್ಮಗೊಂಡ ನನ್ನ ಶವಪೆಟ್ಟಿಗೆಯ ಮುಂದೆ ಇವ ರೆಲ್ಲರೂ ನೆರೆದಿಲ್ಲವಷ್ಟೇ?’ ಎನ್ನುವುದನ್ನು ಮಗದೊಮ್ಮೆ ಪಪ್ಪು ಸ್ಪಷ್ಟಪಡಿಸಿಕೊಂಡ. ಯಾಕೋ ವೆಂಕಟನ ಶವ ಪೆಟ್ಟಿಗೆ ಅವನ ಕಣ್ಣ ಮುಂದೆ ಬಂತು. ಅವನ ಮುಖ ನೋಡುವುದಕ್ಕಾಗಿ ಸಾಕಷ್ಟು ಪ್ರಯತ್ನಿಸಿದ್ದೆ. ನನ್ನ ಕಣ್ಣಿಗೆ ಅದು ಎಟಕಿರಲಿಲ್ಲ. ಜಾನಕಿ ಅವನ ಮುಖವನ್ನು ನೋಡಿ ರಬಹುದೇ? ವೆಂಕಟನ ದೇಹವನ್ನು 25 ಗುಂಡುಗಳು ಸೀಳಿದ್ದು ನಿಜವೇ?

ಗುರೂಜಿ ಮಾತುಗಳು ಮುಂದುವರಿಯುತ್ತಿತ್ತು ‘‘....ಎಳೆಯ ಹುಡುಗ ಪ್ರತಾಪ ಸಿಂಹನ ತ್ಯಾಗ ಅರ್ಥಪೂರ್ಣವಾಗಬೇಕಾದರೆ ನಮ್ಮಾಳಗೆ ಹಿಂದುತ್ವ ಜಾಗೃತವಾಗಬೇಕು....ಈ ಚುನಾವಣೆಯಲ್ಲಿ ಹಿಂದುತ್ವವನ್ನು ಗೆಲ್ಲಿಸುವ ಮೂಲಕ ಡೋಂಗಿ ಸೆಕ್ಯುಲರ್‌ವಾದಿಗಳಿಗೆ ಪಾಠ ಕಲಿಸಬೇಕು....’’

ಕೊಡಗಿನ ಅಪ್ಪಯ್ಯ ಹೇಳಿದಂತೆ ವೆಂಕಟನದು ಆತ್ಮ ಹತ್ಯೆಯೋ ಅವಾ ಜಾನಕಿ ಹೇಳಿದಂತೆ ಕೊಲೆಯೋ?

ಆತ್ಮಹತ್ಯೆ ಮತ್ತು ಕೊಲೆಯ ನಡುವೆ ಏನು ವ್ಯತ್ಯಾಸ? ವೆಂಕಟನ ಮನೆಗೆ ಅಂದು ಭೇಟಿ ಕೊಡದೆ ನಾನು ವಾಪಾಸು ಮರಳಿದ್ದೇಕೆ? ಆತ ಜಾತಿಯಲ್ಲಿ ಮಾದಿಗನಂತೆ. ವೆಂಕಟನ ಮನೆಗೆ ಗುರೂಜಿ ಭೇಟಿ ನೀಡಿರಬಹುದೇ?

ಕೋವಿಯಿಂದ ಸಿಡಿಯುವ ಗುಂಡಿನ ಮಳೆಯಂತೆ ಚಪ್ಪಾಳೆ ಸದ್ದು. ಗುರೂಜಿಯ ಭಾಷಣ ಮುಗಿಯಿತು. ಇದೀಗ ಚುನಾವಣಾ ಅಭ್ಯರ್ಥಿ ಭಾಷಣಕ್ಕೆ ಎದ್ದು ನಿಂತರು.

ಭಾಷಣದುದ್ದಕ್ಕೂ ಅಭ್ಯರ್ಥಿ ಪ್ರತಾಪ ಸಿಂಹನ ಹೆಸರನ್ನು ಉಲ್ಲೇಖಿಸುತ್ತಿದ್ದ. ಪ್ರತಾಪ ಸಿಂಹ ಬಾಲ್ಯದಿಂದಲೇ ಪರಿಚಯ ಎಂಬಂತೆ ತಮ್ಮ ನಡುವಿನ ಆತ್ಮೀಯ ಸಂಬಂಧಗಳನ್ನು ಬಣ್ಣಿಸುತ್ತಿದ್ದರೆ, ಪಪ್ಪು ಏನೇನೂ ಅರ್ಥವಾಗದೆ ಅದನ್ನು ಕೇಳಿಸಿಕೊಳ್ಳುತ್ತಿದ್ದ.

ಕಾರ್ಯಕ್ರಮ ಮುಗಿದಾಗ ಪಪ್ಪು ಸುಸ್ತಾಗಿ ಬಿಟ್ಟಿದ್ದ. ಹೊರ ಬಂದವನೇ ನಿರಾಳವಾಗಿ ಉಸಿರು ಬಿಟ್ಟ. ಶಾಲೆಯ ಜಗಲಿಯಲ್ಲಿ ನಿಂತು ಅಂಗಳವನ್ನೊಮ್ಮೆ ದಿಟ್ಟಿಸಿ ನೋಡಿದ. ಅದೇ ಅಂಗಳದಲ್ಲಿ ತಾನೇ ನಾನು ಮತ್ತು ಜಾನಕಿ ಸಾಲಿನಲ್ಲಿ ನಿಂತು ವೆಂಕಟನ ಮೃತದೇಹಕ್ಕೆ ನಮಸ್ಕರಿಸಿದ್ದು?

ಇತ್ತ ಅನಂತ ಭಟ್ಟರು ಮಗನಿಗೆ ಹೊದಿಸಿದ ಶಾಲು, ಹಾರ ಇವೆಲ್ಲವನ್ನು ಚೀಲದಲ್ಲಿ ತುಂಬಿಸಿಕೊಂಡರು.

‘‘ಮೇಷ್ಟ್ರೇ...ನಾನು ಪುತ್ತೂರಿನವರೆಗೆ ಹೋಗಿ ಬರುತ್ತೇನೆ...ಪ್ರತಾಪ ಎಲ್ಲಿದ್ದಾನೆ...ಅವನಿಗೂ ತಿಳಿಸಿ ಬಿಡಿ...ನಾಳೆ ಸಿಗುತ್ತೇನೆ...’’ ಎಂದು ಗುರೂಜಿ ಚುನಾವಣಾ ಅಭ್ಯರ್ಥಿಯ ಜೊತೆೆ ಕಾರು ಹತ್ತಿದರು.

ಅನಂತ ಭಟ್ಟರು ಹೊರಗೆ ಬಂದಾಗ ಮಗ ಕಾಣುತ್ತಿಲ್ಲ.

‘‘ಪಪ್ಪು...’’ ಎಂದು ಕರೆದರು.

 ಊಹುಂ...ಅವನಲ್ಲೆಲ್ಲೂ ಕಾಣಲಿಲ್ಲ. ಸಭೆಗೆ ಬಂದವರೆಲ್ಲ ಒಬ್ಬೊಬ್ಬರಾಗಿ ನಿರ್ಗಮಿಸತೊಡಗಿದರು. ಪರಿಚಿತರು ನಮಸ್ಕರಿಸಿದರೆ, ಪ್ರತಿ ನಮಸ್ಕರಿಸುತ್ತಿದ್ದರೂ ಕಣ್ಣುಗಳು ಮಗನನ್ನು ಹುುಕುತ್ತಿತ್ತು. ಜಗಲಿಯುದ್ದಕ್ಕೂ ಕಣ್ಣಾಯಿಸಿದರು.

ಅಷ್ಟರಲ್ಲಿ ಯಾರೋ ‘‘ಮಗನನ್ನು ಹುಡುಕುತ್ತಿದ್ದೀರಾ ಭಟ್ರೆ? ಶಾಲೆಯ ಹಿಂದುಗಡೆ ಎಲ್ಲೋ ಕಂಡಂತಾಯಿತು...’’ ಎಂದರು.

ಶಾಲೆಯ ಹಿಂದುಗಡೆ ಯಾಕೆ ಹೋದ? ಎಂದು ಅನಂತ ಭಟ್ರು ಜಗಲಿಯನ್ನು ಒತ್ತಿಕೊಂಡಿರುವ ಓಣಿಯಲ್ಲಿ ನಡೆದು ಶಾಲೆಯ ಹಿಂಭಾಗಕ್ಕೆ ಬಂದರು.

ನೋಡಿದರೆ ಶಾಲೆಯ ಹಿಂಬದಿಯ ಕಿಟಕಿ ಪಕ್ಕ ನಿಂತು ಮಾಡಿನ ಕಡೆಗೇ ಮಗ ನೋಡುತ್ತಿದ್ದ. ಅವನ ಹತ್ತಿರ ಒಬ್ಬ ಹುಡುಗ ನಿಂತಿದ್ದ. ಪಪ್ಪು ಅವನಲ್ಲಿ ಏನೋ ವಿಚಾರಿಸುತ್ತಿದ್ದ. ಅನಂತಭಟ್ಟರು ಮಗನ ಬಳಿ ಧಾವಿಸಿದರು.

‘‘ಗೋಡೆಯ ಮಾಡಿನ ಮೂಲೆಯಲ್ಲಿ ಆರು ಪಾರಿವಾಳಗಳಿದ್ದವು.. ನೋಡಿದ್ದೀಯಾ?’’ ಪಪ್ಪು ಬಾಲಕನ ಬಳಿ ಕೇಳುತ್ತಿದ್ದ.

ಬಾಲಕ ಏನೂ ಅರ್ಥವಾಗದೇ ಪಪು್ಪವಿನ ಮುಖವನ್ನೇ ನೋಡತೊಡಗಿದ.

‘‘ಪಾರಿವಾಳಗಳಲ್ಲಿ ಒಂದು ಪಾರಿವಾಳ ನಮಾಜು ಮಾಡುತ್ತಿತ್ತು...ನೋಡಿದ್ದೀಯಾ? ಅದು ಮುಸ್ಲಿಮ್ ಪಾರಿವಾಳ...’’ ಪಪ್ಪು ಮನವರಿಕೆ ಮಾಡಿಸಲು ಪ್ರಯತ್ನಿಸುತ್ತಿದ್ದ. ಬಾಲಕ ಕಿಸಕ್ಕನೆ ನಕ್ಕ.

 ‘‘ಪಪ್ಪು, ಏನೋ ಅದು? ನೀನು ಇಲ್ಲೇನು ಮಾಡು ತ್ತಿದ್ದೀಯ? ...’’ ಎಂದು ಮಗನ ಬಳಿ ಧಾವಿಸಿದರು.

‘‘ಅಪ್ಪಾ...ಇಲ್ಲಿ ನಾಲ್ಕು ಪಾರಿವಾಳಗಳಿದ್ದವು......’’ ಪಪ್ಪು ತನಗೆ ತಾನೇ ಮತ್ತೇನನ್ನೋ ಗೊಣಗತೊಡಗಿದ.

‘‘ಬಾ..ಬೇಗ...ಗುರೂಜಿ ಪುತ್ತೂರು ಕಡೆ ಹೋದರು. ನಾವು ಮನೆಗೆ ಹೋಗೋಣ. ಅಲ್ಲಿ ತಾಯಿ ಕಾಯುತ್ತಾ ಇರುತ್ತಾಳೆ....’’ ಅನಂತಭಟ್ಟರು ಮಗನನ್ನು ಎಳೆದುಕೊಂಡು ಹೋದರು.

ಮನೆ ತಲುಪಿದಾಗ ಲಕ್ಷ್ಮಮ್ಮ ಇವರಿಬ್ಬರನ್ನು ಸ್ವಾಗತಿಸಲು, ಅಂಗಳದಲ್ಲೇ ಕಾದಿದ್ದರು. ಮಗನನ್ನು ನೋಡಿ ಅವರ ಮುಖ ಅರಳಿತು.

‘‘ಊರಿನ ಜನರ ದೃಷ್ಟಿಯೆಲ್ಲ ನನ್ನ ಮಗನ ಮೇಲೆ ಬಿದ್ದಿರಬೇಕು...’’ ಎಂದು ಲಕ್ಷಮ್ಮ ಮಗನ ಮುಖ ಸವರಿದರು.

‘‘ಸುಸ್ತಾಗಿದೆ ಅಮ್ಮ. ನನಗೆ ಸ್ವಲ್ಪ ನಿದ್ದೆ ಮಾಡಬೇಕು...’’ ಎಂದವನೇ ತಾಯಿಯಿಂದ ಬಿಡಿಸಿಕೊಂಡು ಒಳಹೋದ.

‘‘ಸ್ವಲ್ಪ ಮಲಗಲಿ. ತುಂಬಾ ಸುಸ್ತಾಗಿದ್ದಾನೆ....’’ ಎಂದು ಅನಂತಭಟ್ಟರು ತನ್ನ ಕೈಯಲ್ಲಿದ್ದ ಶಾಲು, ಹಾರಗಳ ಚೀಲವನ್ನು ಪತ್ನಿಯ ಕೈಗೆ ನೀಡಿದರು.

ಮಗನ ಮುಖ ಕಳಾಹೀನವಾಗಿರುವುದನ್ನು ತಾಯಿ ಗುರುತಿಸಿದ್ದರು.

ಪಪ್ಪುವಿಗೆ ಎಚ್ಚರವಾದಾಗ, ಸನ್ಮಾನದಲ್ಲಿ ಸಿಕ್ಕಿದ ಹಾರ, ಶಾಲುಗಳನ್ನು ಮುಂದಿಟ್ಟುಕೊಂಡು ಲಕ್ಷ್ಮಮ್ಮ ಸಂಭ್ರಮ ಪಡುತ್ತಿದ್ದರು. ಪಪ್ಪು ನಿದ್ದೆಯಿಂದ ಎದ್ದು ಕುಳಿತಂತೆ ಅವರ ಸಂಭ್ರಮ ಇನ್ನಷ್ಟು ಹೆಚ್ಚಿತು. ‘‘ಪಪ್ಪು...ಈ ಶಾಲು ಪಟ್ಟೆ ಸೀರೆಯಂತಿದೆ ಕಣೋ...’’ ಎಂದು ಹೊದ್ದುಕೊಂಡರು.

‘‘ಹಾರ ಗಂಧದ್ದು ಕಣೋ....’’ ಎಂದು ಕೊರಳಿಗೆ ಹಾಕಿಕೊಂಡರು.

ಅವರ ಸಂಭ್ರಮಕ್ಕೆ ಇನ್ನೊಂದು ಕಾರಣವಿತ್ತು. ಅನಂತ ಭಟ್ಟರು ನಾಳೆ ಮದುವೆ ಬ್ರೋಕರ್ ಪದ್ಮನಾಭರನ್ನು ಬರ ಹೇಳಿದ್ದರು. ಆಸುಪಾಸಿನಲ್ಲೆಲ್ಲ ಬ್ರಾಹ್ಮಣ ಜೋಡಿಗಳನ್ನು ಸೇರಿಸುವಲ್ಲಿ ಪದ್ಮನಾಭರು ಹೆಸರು ವಾಸಿಗಳಾಗಿದ್ದರು. ಇಪ್ಪತ್ತು, ಮೂವತ್ತು ವರ್ಷಗಳಿಂದ ಇದನ್ನೇ ವೃತ್ತಿಯಾಗಿ ಮಾಡಿಕೊಂಡು ಬಂದವರು. ಈಗ ಇಳಿ ವಯಸ್ಸು. ಆದರೂ ಒಳ್ಳೆಯ ಸಂಪ್ರದಾಯದ ಮನೆತನದ ಹುಡುಗಿ ಬೇಕು ಎಂದು ಯಾರಿಗಾದರು ಅನ್ನಿಸಿದರೆ ತಕ್ಷಣ ಅವರಿಗೆ ನೆನಪಾಗುವುದು ಪದ್ಮನಾಭ. ಪಪ್ಪು ಆಗಮಿಸುವ ಒಂದು ವಾರಕ್ಕೆ ಮೊದಲು ಅನಂತಭಟ್ಟರು ಪದ್ಮನಾಭರನ್ನು ನೆನಪಿಸಿಕೊಂಡರು. ಸಂಗೀತ ವಿದ್ವಾನ್ ನರಸಿಂಹಯ್ಯರ ಮಗಳು ಶಿವರಂಜಿನಿಯನ್ನು ಪ್ರತಾಪನಿಗೆ ತರುವ ಕುರಿತಂತೆ ಪದ್ಮನಾಭರಲ್ಲಿ ಪ್ರಸ್ತಾಪ ಇಟ್ಟಿದ್ದರು. ತಾನು ನರಸಿಂಹಯ್ಯರಲ್ಲಿ ಮಾತನಾಡಿ ಈ ಬಗ್ಗೆ ಅವರ ಅನಿಸಿಕೆಯ ಜೊತೆಗೆ ಬರುವೆ ಎಂದು ಪದ್ಮನಾಭರು ಹೇಳಿದ್ದರು.

ಶಿವರಂಜಿನಿಯನ್ನು ಪ್ರತಾಪನಿಗೆ ಮದುವೆ ಮಾಡುವ ಕನಸು ಲಕ್ಷ್ಮಮ್ಮನದ್ದು. ಅದು ಇಂದಿನ ಕನಸೇ ಅಲ್ಲ. ಪ್ರತಾಪ ತನ್ನ ತಾತನಂತೆ ಸಂಗೀತ ವಿದ್ವಾಂಸನಾಗ ಬೇಕು ಎನ್ನುವ ಅವರ ಒಳ ಆಸೆ ಈಡೇರಿರಲಿಲ್ಲ. ಸಂಗೀತ ಪರಿಸರದ ಜೊತೆಗೇ ಬೆಳೆದಿರುವ ಶಿವರಂಜಿನಿಯನ್ನಾ ದರೂ ತನ್ನ ಸೊಸೆ ಮಾಡಿಕೊಳ್ಳಬೇಕು ಎಂಬುದು ಅವರ ಇಂಗಿತವಾಗಿತ್ತು. ಹಾಗೆ ನೋಡಿದರೆ ಬಾಲ್ಯದಲ್ಲಿ ಸಂಗೀತ ಕಲಿಯಲು ಬಂದ ಪ್ರತಾಪನಲ್ಲಿ ನರಸಿಂಹಯ್ಯ ನಕ್ಕು ಹೇಳಿದ್ದರು ‘‘ಲೋ ಪಪ್ಪು, ನೀನೇನಾದರೂ ಸಂಗೀತ ಕಲಿತು ವಿದ್ವಾನ್ ಆದರೆ ನಿನಗೆ ನನ್ನ ಮಗಳನ್ನೇ ಮದುವೆ ಮಾಡಿ ಕೊಡುತ್ತೇನೆ...’’. ಅದಿನ್ನೂ ಲಕ್ಷಮ್ಮನಿಗೆ ನೆನಪಿನಲ್ಲಿತ್ತು.

ಸಂಗೀತ ವಿದ್ವಾನ್ ಆಗದಿದ್ದರೆ ಏನಾಯಿತು, ನನ್ನ ಮಗ ಈಗ ದೇಶ ಕಾಯುವ ಯೋಧ. ಎಲ್ಲೆಡೆ ಆತನಿಗೆ ಗೌರವ, ಘನತೆಯಿದೆ. ದೇಶ ಪ್ರತೀ ದಿನ ಅವನನ್ನು ನೆನೆಯುತ್ತದೆ. ಇಂತಹ ಗಂಡನನ್ನು ಪಡೆಯಲು ಅವರ ಮಗಳು ಪುಣ್ಯ ಮಾಡಿರಬೇಕು.

‘‘ಲೋ ಪಪ್ಪು, ನೀನು ನಮ್ಮ ರಂಜಿನಿಯನ್ನು ನೋಡಿದ್ದೀಯಾ?’’ ಲಕ್ಷ್ಮಮ್ಮ ಥಟ್ಟನೆ ಕೇಳಿದರು.

‘‘ಯಾವ ರಂಜಿನಿ ಅಮ್ಮ?’’

‘‘ಅದೇ ಕಣೋ...ಸಂಗೀತ ವಿದ್ವಾನ್ ನರಸಿಂಹಯ್ಯರ ಮಗಳು...’’

‘‘ಯಾವಾಗಲೋ ಸಣ್ಣದಿರುವಾಗ ನೋಡಿದ್ದು ಅಮ್ಮಾ...’’

‘‘ಅಯ್ಯೋ ಈಗ ದೇವತೆ ದೇವತೆಯಂತಿದ್ದಾಳೆ ಕಣೋ....ಅವಳು ತುಂಬಾ ಚೆಂದ ಹಾಡುತ್ತಾಳೆ...ಊರಲ್ಲಿ ಒಂದೆರಡು ಕಚೇರಿಯನ್ನು ನಡೆಸಿಕೊಟ್ಟಿದ್ದಾಳೆ...ಜಾನಕಿಯಂತಹ ನೂರು ಜಾನಕಿಯರು ಸೇರಿದರೂ ನಮ್ಮ ರಂಜಿನಿಗೆ ಸರಿಗಟ್ಟುವುದಿಲ್ಲ...ಮನೆಗೆಲಸವೆಂದರೆ ಅಚ್ಚುಕಟ್ಟು...’’

‘‘ಅದಕ್ಕೇನಮ್ಮ ಈಗ?’’

‘‘ಅದಕ್ಕೇನು ಅಂದರೆ?...ನರಸಿಂಹಯ್ಯರಿಗೆ ನಿನ್ನ ಮೇಲೆ ಕಣ್ಣು ಬಿದ್ದಿದೆ....ತನ್ನ ಮಗಳನ್ನು ಕೊಡುವುದಿದ್ದರೆ ದೇಶ ಕಾಯುವ ಸೈನಿಕನಿಗೆ ಮಾತ್ರ ಎಂದು ಹಟ ಹಿಡಿದಿದ್ದಾರೆ...’’

ಪಪ್ಪು ಮರು ಮಾತನಾಡಲಿಲ್ಲ. ಅಪ್ಪಯ್ಯ ಹೇಳಿದ್ದು ನೆನಪಾಯಿತು ‘‘ಜಾನಕಿಯಲ್ಲದಿದ್ದರೆ ಇನ್ನೊಬ್ಬಳು. ಮದುವೆಯಾಗಿಯೇ ವಾಪಸ್ ಬಾ...’’

‘‘ಒಮ್ಮೆ ಹುಡುಗಿಯನ್ನು ನೋಡು...ಮತ್ತೆ ನೀನೇ ಅವಳ ಹಿಂದೆ ಬೀಳುತ್ತೀಯ’’ ತಾಯಿ ನಕ್ಕು ಹೇಳಿದರು.

(ರವಿವಾರದ ಸಂಚಿಕೆಗೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News