ಅಶಿಸ್ತು ತೋರಿದರೆ ಸಂಘದಿಂದಲೇ ಡಿಬಾರ್: ಅಭಿಮಾನಿಗಳಿಗೆ ರಜನಿಕಾಂತ್ ಎಚ್ಚರಿಕೆ

Update: 2017-05-26 05:27 GMT

ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಕುರಿತಂತೆ ಇದೀಗ ಪರ-ವಿರೋಧ ಸಮರ ಸಾಗಿದೆ. ಅದರಲ್ಲೂ ರಜನಿಕಾಂತ್ ಅವರು ನೀಡಿದ ಕನ್ನಡ ಮೂಲದ ವಿಚಾರ ತಮಿಳುನಾಡಿನಲ್ಲಿ ಸಂಘರ್ಷವನ್ನು ಹುಟ್ಟು ಹಾಕಿದೆ.  

ಇದರಿಂದ ತೀವ್ರ ಮುಜುಗರಕ್ಕೊಳಗಾಗಿರುವ ರಜನಿಕಾಂತ್, ತನ್ನ ಅಭಿಮಾನಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಶಿಸ್ತು ತೋರಿದರೆ ಅಭಿಮಾನಿಗಳ ಸಂಘದಿಂದಲೇ ಡಿಬಾರ್ ಮಾಡಲಾಗುವುದು ಎಂದು ಅವರು ನೀಡಿರುವ ಎಚ್ಚರಿಕೆಯು ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. 

ಕೆಲ ದಿನಗಳ ಹಿಂದೆಯಷ್ಟೇ ರಜನಿಕಾಂತ್ ರಾಜಕೀಯ ಸೇರುವ ಇಂಗಿತ ವ್ಯಕ್ತಪಡಿಸಿದ್ದರು. ತಾನು ಕನ್ನಡ ನಾಡಿನವನಾಗಿದ್ದರೂ ಇದೀಗ ತಮಿಳಿಗ ಎಂದೂ ಹೇಳಿದ್ದರು. ಅದಾಗಲೇ ಭಾಷೆಯನ್ನು ಮುಂದಿಟ್ಟು ಒಂದು ಬಣ ರಜನಿಕಾಂತ್ ವಿರುದ್ದ ಪ್ರತಿಭಟನೆ ನಡೆಸಿದೆ. ಕನ್ನಡಿಗನಾಗಿರುವ ರಜನಿಕಾಂತ್ ತಮಿಳುನಾಡಲ್ಲಿ ರಾಜಕಾರಣ ಮಾಡಬಾರದು ಎಂದು ಎಚ್ಚರಿಕೆ ನೀಡಿದೆ. ಇದಕ್ಕೆ ಪ್ರತಿಯಾಗಿ ರಜನಿಕಾಂತ್ ಅಭಿಮಾನಿಗಳು ಹೋರಾಟದ ಅಖಾಡಕ್ಕಿಳಿದು ನಟನ ಪರ ಶಕ್ಕಿಪ್ರದರ್ಶನ ಮಾಡಿದ್ದಾರೆ.

ಈ ಬೆಳವಣಿಗೆ ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಇದೇ ಸಂದರ್ಭದಲ್ಲಿ ರಜನಿ ನಡೆ ಬಗ್ಗೆ ಟೀಕೆಗಳೂ ವ್ಯಕ್ತವಾಗಿವೆ. ಶತ್ರುಘ್ನ ಸಿನ್ಹಾ ಅವರು ಪ್ರತಿಕ್ರಿಯೆಯೊಂದನ್ನು ನೀಡಿ, ರಜನಿಕಾಂತ್ ರಾಜಕೀಯ ಪ್ರವೇಶ ಮಾಡುವುದು ಬೇಡ ಎಂದು ಸಲಹೆ ಮಾಡಿದ್ದಾರೆ. 

ಇವೆಲ್ಲದರ ನಡುವೆ ವಿರೋಧಿಗಳ ವಿರುದ್ಧ ಸಂಘರ್ಷಕ್ಕಿಳಿದಿರುವ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿರುವ ರಜನಿಕಾಂತ್ ತಮ್ಮ ವಿರುದ್ದ ಪ್ರತಿಭಟನೆ ನಡೆದರೆ ಅದಕ್ಕೆ ಪ್ರತಿಯಾಗಿ ಹೋರಾಟ ಮಾಡದಂತೆ ಸೂಚಿಸಿದ್ದಾರೆ. ಅದಾಗ್ಯೂ ಅಶಿಸ್ತು ತೋರಿದರೆ ಅಭಿಮಾನಿಗಳ ಸಂಘದಿಂದಲೇ ಡಿಬಾರ್ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ‌.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News