ದೈರ್ಯವಿದ್ದರೆ ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಿ: ಅಮಿತ್ ಶಾ ಗೆ ಉವೈಸಿ ಸವಾಲು
ಹೈದರಾಬಾದ್, ಮೇ 26: ಆಲ್ ಇಂಡಿಯನ್ ಮಜ್ಲಿಸೆ ಇತ್ತೇಹಾದುಲ್ ಮುಸ್ಲಿಮೀನ್(ಎಐಎಂಐಎಂ) ಅಧ್ಯಕ್ಷ ಹಾಗೂ ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಬಿಜೆಪಿ ಅಧ್ಯಕ್ಷ ಅಮಿತ್ ಶಾರಿಗೆ ಹೈದರಾಬಾದ್ ಲೋಕಸಭಾಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸವಾಲು ಹಾಕಿದ್ದಾರೆ.
" ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸುವುದು ಕೇಕ್ ತಿಂದಷ್ಟು ಸುಲಭವಿಲ್ಲ. ನೀವು ಹೈದರಾಬಾದ್‌ನಲ್ಲಿ ಚುನಾವಣೆ ಸ್ಪರ್ಧಿಸುವುದಾದರೆ ಸ್ವಾಗತ. ಆದರೆ ನೀವು ಬೇರೆ ಯಾರನ್ನೋ ಚುನಾವಣೆಗೆ ನಿಲ್ಲಿಸುವ ಯೋಜನೆ ಯಾಕೆ ಮಾಡುತ್ತಿದ್ದೀರಿ. ಬನ್ನಿ ನನ್ನ ವಿರುದ್ಧ ನೀವೆ ಸ್ಪರ್ಧಿಸಿರಿ" ಎಂದು ಹೇಳಿದ್ದಾರೆ.
ಅಮಿತ್ ಶಾ ಇತ್ತೀಚೆಗೆ ಹೈದರಾಬಾದ್ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ "ಉವೈಸಿ ಅದೇನು ಕೇಕ್ ತಿಂದಷ್ಟು ಸುಲಭವೇ. ನಾನು ಇಲ್ಲಿ ಹಲವು ವರ್ಷಗಳಿಂದ ಕೆಲಸಮಾಡಿದ್ದೇನೆ. ಆದರೆ ಶಾ ಇಲ್ಲಿ ಬಿಜೆಪಿಗೆಲ್ಲುತ್ತಿದೆ ಎನ್ನುತ್ತಿದ್ದಾರೆ" ಎಂದು ಛೇಡಿಸಿದ್ದಾರೆ.
2019 ಚುನಾವಣೆಯಲ್ಲಿ ತೆಲಂಗಾಣದಲ್ಲಿ ಬಿಜೆಪಿ ಸರಕಾರ ರಚಿಸುತ್ತದೆ ಎಂದಿರುವ ಶಾರನ್ನು " ನೀವು ಕನಸು ಕಾಣುತ್ತಿದ್ದೀರಿ" ಎಂದು ಉವೈಸಿ ಹೇಳಿದ್ದಾರೆ. ತೆಲಂಗಾಣಕ್ಕೆ ಕೇಂದ್ರ ಸರಕಾರ ಒಂದು ಲಕ್ಷ ಕೋಟಿ ರೂಪಾಯಿ ನೀಡಿದೆ ಎಂದು ಅಮಿತ್‌ಶಾ ಹೇಳಿದ್ದಾರೆ. ಇದು ಸರಿಯಲ್ಲ ಎಂದು ಸಂಸದ ಉವೈಸಿ ಸ್ಪಷ್ಟ ಪಡಿಸಿದ್ದು,
" ನೀವು ಒಂದು ಲಕ್ಷ ಕೋಟಿ ರೂಪಾಯಿ ನೀಡಿದ್ದೇವೆ ಎನ್ನುತ್ತೀರಿ. ನಿಮ್ಮ ಕಿಸೆಯಿಂದ ಕೊಟ್ಟಿದ್ದೀರಾ. ನಾವು ಭಿಕ್ಷುಕರಲ್ಲ . ಒಂದು ವೇಳೆ ನೀವು ನೀಡಿದರೂ ಅದನ್ನು ಪಡೆಯುವುದು ನಮ್ಮ (ತೆಲಂಗಾಣದ) ಸಂವಿಧಾನ ಬದ್ಧ ಹಕ್ಕು . ಅದು ತೆಲಂಗಾಣ ಸರಕಾರದ ಹಕ್ಕಾಗಿದೆ. ಒಂದುಲಕ್ಷ ಕೋಟಿ ರೂಪಾಯಿಯಲ್ಲ ತೆಲಂಗಾಣಕ್ಕೆ ಹತ್ತು ಲಕ್ಷ ಕೋಟಿ ರೂಪಾಯಿ ನೀಡಬೇಕು” ಎಂದು ಉವೈಸಿ ಆಗ್ರಹಿಸಿದ್ದಾರೆ.