ಆದಿತ್ಯನಾಥ್ ಭೇಟಿಗೆ ಮೊದಲು ಸೋಪ್, ಸಾಬೂನು ಬಳಸಿ ಶುಚಿಯಾಗಿ: ದಲಿತರಿಗೆ ಸೂಚನೆ

Update: 2017-05-26 12:01 GMT

ಲಕ್ನೋ, ಮೇ 26: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ರನ್ನು ಭೇಟಿಯಾಗುವ ಮೊದಲು ಸೋಪ್ ಹಾಗೂ ಶ್ಯಾಂಪೂಗಳನ್ನು ಬಳಸಿ ಶುಚಿಯಾಗಬೇಕು ಎಂದು ದಲಿತರಿಗೆ ಅಧಿಕಾರಿಗಳು ನಿರ್ದೇಶನ ನೀಡಿದ ಘಟನೆ ನಡೆದಿದೆ.

ಕುಶಿನಗರದ ಮೈನ್ಪುರ್ ಕೋಟ್ ಗ್ರಾಮದ “ಮುಶಾರ್ ಬಸ್ತಿ”ಗೆ ಆದಿತ್ಯನಾಥ್ ಗುರುವಾರ ಭೇಟಿ ನೀಡಿದ್ದು, ಈ ಸಂದರ್ಭ ಅವರನ್ನು ಭೇಟಿಯಾಗುವ “ಮುಶಾರ್” ಸಮುದಾಯದ ಜನರು ಶುಚಿಯಾಗಿರಬೇಕೆಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ವರ್ಷಗಳಿಂದ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದ ಈ ಪ್ರದೇಶಕ್ಕೆ ಅಧಿಕಾರಿಗಳು ಭೇಟಿಯಿತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿರುವುದನ್ನು ಕಂಡು ಗ್ರಾಮಸ್ಥರು ಆಶ್ಚರ್ಯಚಕಿತರಾಗಿದ್ದರು. “ಹೊಸ ಶೌಚಾಲಯ, ಧೂಳು ತುಂಬಿದ್ದ ರಸ್ತೆಗಳ ಕಾಯಕಲ್ಪ, ಬೀದಿ ದೀಪಗಳ ಅಳವಡಿಕೆಯಂತಹ ಕೆಲಸಗಳು ಅಲ್ಪ ಸಮಯದೊಳಗಾಗಿ ನಡೆಯಿತು” ಎನ್ನುತ್ತಾರೆ ಇಲ್ಲಿನ ನಿವಾಸಿಯೊಬ್ಬರು.

“ಇಷ್ಟೇ ಅಲ್ಲದೆ ನಮಗೆ ಶ್ಯಾಂಪೂ, ಸಾಬೂನು ಹಾಗೂ ಸುಗಂಧದ್ರವ್ಯಗಳನ್ನು ನೀಡಿ ಮುಖ್ಯಮಂತ್ರಿಯನ್ನು ಭೇಟಿಯಾಗುವ ಮೊದಲು ಶುಚಿಯಾಗಿರಬೇಕು ಎಂದು ಸೂಚಿಸಲಾಯಿತು” ಎಂದು ಗ್ರಾಮಸ್ಥರು ಹೇಳಿದ್ದಾರೆ.

ಇಂತಹದ್ದೇ ಘಟನೆ ಕೆಲ ದಿನಗಳ ಹಿಂದೆ ಸಮೀಪದ ದಿಯೋರಿಯಾ ಜಿಲ್ಲೆಯಲ್ಲೂ ನಡೆದಿತ್ತು. ಆದಿತ್ಯನಾಥ್ ಹುತಾತ್ಮ ಸೈನಕ ಪ್ರೇಂ ಸಾಗರ್ ಮನೆಗೆ ಭೇಟಿ ನೀಡುವ ಮೊದಲು ಗ್ರಾಮದ ರಸ್ತೆ ಅಭಿವೃದ್ಧಿ ನಡೆಸಿ, ಬೀದಿದೀಪಗಳನ್ನು ಅಳವಡಿಸಲಾಗಿತ್ತು. ಅಷ್ಟೇ ಅಲ್ಲದೆ ಹುತಾತ್ಮ ಯೋಧನ ಮನೆಗೆ ಎಸಿ, ಕೂಲರ್ ಗಳನ್ನು ಅಳವಡಿಸಲಾಗಿತ್ತು. ಆದರೆ ಯೋಗಿ ಭೇಟಿಯ ನಂತರ ಅವುಗಳನ್ನು ತೆಗೆದುಕೊಂಡು ಹೋಗಿದ್ದು, ಭಾರೀ ವಿವಾದ ಸೃಷ್ಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News