ಮೂರು ವರ್ಷದ ವೈಫಲ್ಯಗಳನ್ನು ಸ್ವತಃ ಪಟ್ಟಿ ಮಾಡಿದ ಮೋದಿ ಸರ್ಕಾರ !

Update: 2017-05-27 06:06 GMT

ಹೊಸದಿಲ್ಲಿ, ಮೇ 27: ಹೌದು, ಆ ಶೀರ್ಷಿಕೆ ಎಲ್ಲರನ್ನೂ ದಂಗಾಗಿಸಿತ್ತು ‘‘ತನ್ನ ಮೂರನೇ ವಾರ್ಷಿಕೋತ್ಸವದ ಸಂದರ್ಭ ಎನ್‌ಡಿಎ ಸರಕಾರ ತನ್ನ ವೈಫಲ್ಯಗಳನ್ನು ವರದಿಯೊಂದರಲ್ಲಿ ಪಟ್ಟಿ ಮಾಡಿದೆ.’’ ಖಂಡಿತಾ ಇದು ಸೆನ್ಸೇಶನಲ್ ಸುದ್ದಿಯಾಗಿತ್ತು. ಏಕೆಂದರೆ ಮೋದಿ ಸರಕಾರ ತನ್ನ ವೈಫಲ್ಯಗಳನ್ನು ಒಪ್ಪಿಕೊಳ್ಳುವ ವಿಚಾರದಲ್ಲಿ ಹಿಂದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಫೈನಾನ್ಶಿಯಲ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಹೀಗೆ ಬರೆಯಲಾಗಿತ್ತು.

‘‘ಇಂದು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮೂರು ವರ್ಷ ಪೂರೈಸಲಿರುವುದರಿಂದ ಬಿಜೆಪಿ ನೇತೃತ್ವದ ಆಡಳಿತವು ತನ್ನ ಯಶಸ್ಸು ಹಾಗೂ ಯಶಸ್ಸು ಮಾತ್ರವನ್ನು ಪ್ರದರ್ಶನ ಮಾಡುವ ಕಾರ್ಯ ಕೈಗೊಳ್ಳಬಹುದು. ವಿಪಕ್ಷಗಳ ನಾಯಕರು ಕೂಡ ಸರಕಾರದಿಂದ ಇದನ್ನೇ ನಿರೀಕ್ಷಿಸುತ್ತಿದ್ದಾರೆ. ಆದರೆ ವಿಪಕ್ಷಗಳಿಗೆ ನಿರಾಸೆಯುಂಟು ಮಾಡುವ ರೀತಿಯಲ್ಲಿ ಮೋದಿ ಸರಕಾರ ಕಳೆದ ಮೂರು ವರ್ಷಗಳಲ್ಲಿನ ತನ್ನ ಬಹುಚರ್ಚಿತ ವೈಫಲ್ಯಗಳನ್ನು ಪಟ್ಟಿ ಮಾಡಿದೆ. ರಾಷ್ಟ್ರಪತಿಗಳ ಸೆಕ್ರಟೇರಿಯಟ್ ಬಿಡುಗಡೆ ಮಾಡಿದ ಮೋದಿ ಸರಕಾರದ ಮೂರು ವರ್ಷಗಳ ರಿಪೋರ್ಟ್ ಕಾರ್ಡ್ ನಲ್ಲಿ ಸರಕಾರ ತನ್ನ ವೈಫಲ್ಯಗಳನ್ನು ಬೊಟ್ಟು ಮಾಡಿ ಸ್ವ ಟೀಕೆಯನ್ನು ಹೊಸ ಹಂತಕ್ಕೆ ಕೊಂಡೊಯ್ದಿದೆ.’’

ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲ್, ರೈತರ ಆತ್ಮಹತ್ಯೆಗಳು, ಗೋರಕ್ಷಕರ ಅಟ್ಟಹಾಸ, ಹೆಚ್ಚುತ್ತಿರುವ ರೈಲ್ವೆ ಅಪಘಾತಗಳು, ವಿದೇಶಾಂಗ ನೀತಿಗಳ ಟೀಕೆ, ಹೀಗೆ ವೈಫಲ್ಯಗಳ ಪಟ್ಟಿ ಬೆಳೆದಿತ್ತು.

ಈ ರಿಪೋರ್ಟ್ ಕಾರ್ಡ್, ಲೈವ್‌ಮಿಂಟ್ ಲೇಖನವೊಂದರಿಂದ ಎಂದು ಹಲವು ಟ್ವಿಟ್ಟರಿಗರು ಅಭಿಪ್ರಾಯ ಪಟ್ಟಿದ್ದರು. ಅಂತಿಮವಾಗಿ ತಿಳಿದು ಬಂದಿದ್ದೇನೆಂದರೆ ಪ್ರೆಸ್ ಇನ್ಫಾಮೇರ್ಶನ್ ಬ್ಯೂರೋದ ಪ್ರಮಾದದಿಂದ ಲೈವ್‌ಮಿಂಟ್ ಲೇಖನವೊಂದನ್ನು ರಾಷ್ಟ್ರಪತಿಗಳ ಸೆಕ್ರಟೇರಿಯಟ್ ನ ಅಧಿಕೃತ ಮಾಧ್ಯಮ ಪ್ರಕಟನೆ ಎಂದು ಅಪ್ ಲೋಡ್ ಮಾಡಲಾಗಿತ್ತು ಹಾಗೂ ಫೈನಾನ್ಶಿಯಲ್ ಎಕ್ಸ್ ಪ್ರೆಸ್ ಇದನ್ನು ಹಾಗೆಯೇ ಪ್ರಕಟಿಸಿತ್ತು. ನಂತರ ಪತ್ರಿಕೆ ಈ ಲೇಖನವನ್ನು ತನ್ನ ವೆಬ್ ಸೈಟ್ ನಿಂದ ಡಿಲೀಟ್ ಮಾಡಿ ಸ್ಪಷ್ಟೀಕರಣ ನೀಡಿದೆ.

ಆದರೆ ಪಿಐಬಿ ಮಾತ್ರ ಯಾವುದೇ ಸ್ಪಷ್ಟೀಕರಣ ಇಲ್ಲಿಯವರೆಗೆ ನೀಡಿಲ್ಲ. ಆದರೆ ಆ ಮಾಧ್ಯಮ ಪ್ರಕಟನೆ ಬಹಳ ದೂರ ಸಾಗಿದ್ದು, ಇಂಡಿಯಾ ಡಿಫೆನ್ಸ್ ಫೋರಂ ಹಾಗೂ ಪಾಕಿಸ್ತಾನ ಡಿಫೆನ್ಸ್ ಫೋರಂ ಸಹಿತ ಅನೇಕ ವೆಬ್ ಸೈಟ್ ಗಳಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News