ಮಾರಿಷಸ್‌ಗೆ 500 ಮಿಲಿಯನ್ ಡಾಲರ್ ನೆರವು: ಭಾರತದ ಘೋಷಣೆ
ಹೊಸದಿಲ್ಲಿ, ಮೇ 27: ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಸಂಬಂಧವನ್ನು ವೃದ್ಧಿಸಿಕೊಳ್ಳಲು ಭಾರತ ಮತ್ತು ಮಾರಿಷಸ್ ರಾಷ್ಟ್ರಗಳು ನಿರ್ಧರಿಸಿರುವಂತೆಯೇ, ಮಾರಿಷಸ್‌ಗೆ 500 ಮಿಲಿಯನ್ ಡಾಲರ್ ನೆರವು ನೀಡುವುದಾಗಿ ಭಾರತ ಘೋಷಿಸಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಜಗನ್ನಾಥ್ ಮಧ್ಯೆ ನಡೆದ ವ್ಯಾಪಕ ಮಾತುಕತೆಯ ಬಳಿಕ ಎರಡೂ ದೇಶಗಳ ಮಧ್ಯೆ ಕಡಲವ್ಯಾಪ್ತಿಯ ಭದ್ರತೆಯ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಹಿಂದೂ ಮಹಾಸಾಗರದಲ್ಲಿ ಎದುರಾಗುವ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಬೆದರಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕೆಂದು ಒಮ್ಮತದ ಅಭಿಪ್ರಾಯಕ್ಕೆ ತಾವಿಬ್ಬರು ಬಂದಿರುವುದಾಗಿ ಮೋದಿ ತಿಳಿಸಿದರು. ಉಭಯ ರಾಷ್ಟ್ರಗಳ ನಡುವೆ ನಾಲ್ಕು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಅಲ್ಲದೆ ವ್ಯಾಪಾರ ಮತ್ತು ಹೂಡಿಕೆ ಕ್ಷೇತ್ರದಲ್ಲಿ ಸಹಕಾರ ಸಂಬಂಧ ವೃದ್ಧಿಸಲು ಉಭಯ ರಾಷ್ಟ್ರಗಳು ನಿರ್ಧರಿಸಿವೆ. ಮಾರಿಷಸ್‌ನಲ್ಲಿ ಇದೀಗ ಸಾಗುತ್ತಿರುವ ಅಭಿವೃದ್ಧಿ ಕಾರ್ಯದಲ್ಲಿ ಸಕ್ರಿಯ ಪಾತ್ರ ವಹಿಸಲು ಭಾರತಕ್ಕೆ ಹೆಮ್ಮೆ ಎನಿಸುತ್ತಿೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.