ಪಟಾಕಿ: ಸಿಡಿಯದ ಮದ್ದು

Update: 2017-05-27 18:29 GMT

ಯಶಸ್ವೀ ತೆಲುಗು ಸಿನೆಮಾ ‘ಪಟಾಸ್’ ರಿಮೇಕ್ ‘ಪಟಾಕಿ’. ದಿಟ್ಟ ಪೊಲೀಸ್ ಅಧಿಕಾರಿಯ ಕುಟುಂಬವೊಂದರ ಕತೆಯನ್ನು ತೆಳು ಹಾಸ್ಯದೊಂದಿಗೆ ಹೇಳುವ ಪ್ರಯತ್ನವಿದು. ತಂದೆಯ ಪೊಲೀಸ್ ನಿಷ್ಠೆಯೇ ಮಗನ ದ್ವೇಷಕ್ಕೆ ಕಾರಣವಾಗುವುದು, ಕತೆಯ ವಿಶಿಷ್ಟ ತಿರುವಿನಲ್ಲಿ ತನ್ನ ತಪ್ಪನ್ನು ಅರಿಯುವ ಮಗ ದುಷ್ಟರನ್ನು ಸದೆಬಡಿಯುವ ಸೇಡಿನ ಕಥಾನಕವೂ ಇಲ್ಲಿದೆ. ಭಿನ್ನ ಕತೆ ಇದ್ದರೂ ಬಿಗಿಯಾದ ನಿರೂಪಣೆಯಿಲ್ಲದೆ ಸಿನೆಮಾ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ. ಹೀರೋ ಗಣೇಶ್‌ಗೆ ಪೊಲೀಸ್ ಅಧಿಕಾರಿ ವೇಷ ತೊಡಿಸಲು ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕತೆಯೇನೋ ಚೆನ್ನಾಗಿದೆ. ಆದರೆ ಪ್ರೇಕ್ಷಕರನ್ನು ರಂಜಿಸುವಲ್ಲಿ ಅವರು ಎಡವಿದ್ದಾರೆ.

ಸಿನೆಮಾ ಆರಂಭವಾಗಿ ಮುಕ್ಕಾಲು ಗಂಟೆಯಾ ದರೂ ಕತೆ ಶುರುವಾಗುವುದೇ ಇಲ್ಲ. ಕಥಾನಾಯಕನ ವ್ಯಕ್ತಿತ್ವವನ್ನು ಅನಾವರಣಗೊಳಿಸಲು ವ್ಯಯಿಸುವ ಈ ಸನ್ನಿವೇಶಗಳಲ್ಲಿ ಪ್ರೇಕ್ಷಕರನ್ನು ನಗಿಸಲು ಯತ್ನಿಸಲಾಗಿದೆ. ಸೂಪರ್ ಹಿಟ್ ಹಿಂದಿ ಸಿನೆಮಾ ‘ದಬಾಂಗ್’ ಶೈಲಿಯ ಮೆಲೋಡ್ರಾಮಾ ಮತ್ತು ಹಾಸ್ಯವನ್ನು ಅಳವಡಿಸುವ ನಿರ್ದೇಶಕರ ಯೋಜನೆ ಕೈಗೂಡಿಲ್ಲ. ಹಾಗಾಗಿ ಸಿನೆಮಾ ನಿಂತಲ್ಲೇ ನಿಲ್ಲುತ್ತದೆ. ಮಧ್ಯಾಂತರದ ನಂತರದ ಕತೆ ವೇಗ ಪಡೆಯುತ್ತದಾದರೂ ಈಗಾಗಲೇ ನೋಡಿರುವ ನೂರಾರು ಸಿನೆಮಾಗಳ ಧಾಟಿಯ ಫೈಟಿಂಗ್, ಸೇಡಿನ ಸನ್ನಿವೇಶಗಳು ಪ್ರೇಕ್ಷಕರಿಗೆ ಹೊಸತೇನನ್ನೂ ದಾಟಿಸುವುದಿಲ್ಲ.

ಮಧ್ಯಾಂತರದವರೆಗೆ ಕಾಮಿಡಿ ಪೊಲೀಸ್ ಆಗಿ, ಆನಂತರ ದಿಟ್ಟ ಅಧಿಕಾರಿ ಯಾಗಿ ಗಣೇಶ್ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಅವರಿಗೆ ಜತೆಯಾಗುವ ನಾಲ್ವರು ಪೊಲೀಸರ ಪಾತ್ರಗಳಲ್ಲಿ ನಟಿಸಿರುವ ನಟರೂ ಓಕೆ. ಮೊದಲೆಲ್ಲಾ ಪೊಲೀಸ್ ಪಾತ್ರಗಳಲ್ಲಿ ತಮ್ಮದೇ ಆದ ಅಲೆ ಸೃಷ್ಟಿಸಿದ್ದ ಸಾಯಿಕುಮಾರ್ ಈಗ ಒಂದು ಸುತ್ತು ದಪ್ಪಗಾಗಿದ್ದಾರೆ. ಖಾಕಿ ತೊಟ್ಟಾಗ ಅವರು ಮೊದಲಿನ ಫಿಟ್‌ನೆಸ್‌ನಲ್ಲೇ ಇದ್ದರೆ ಚೆನ್ನಾಗಿರುತ್ತಿತ್ತು ಎಂದು ಅಭಿಮಾನಿಗಳಿಗೆ ಅನಿಸದಿರದು.

ನಾಯಕಿ ರನ್ಯಾ ರಾವ್‌ಗೆ ನಟನೆಗೆ ಹೆಚ್ಚೇನೂ ಅವಕಾಶವಿಲ್ಲ. ಖಳನಾಗಿ ಆಶಿಷ್ ವಿದ್ಯಾರ್ಥಿ ತಮ್ಮ ಎಂದಿನ ಮ್ಯಾನರಿಸಂನಲ್ಲಿ ಅಬ್ಬರಿಸುತ್ತಾರೆ. ಸಾಧು ಕೋಕಿಲ ಅವರಿಗೆ ಇಲ್ಲೊಂದು ಭಿನ್ನವಾದ ಪಾತ್ರವಿದ್ದು, ಅವರು ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋ ಜನೆಯಲ್ಲಿ ಎರಡು ಹಾಡುಗಳು ಚೆನ್ನಾಗಿದ್ದರೂ, ಥಿಯೇಟರ್‌ನಿಂದ ಹೊರಬರುವ ಹೊತ್ತಿಗೆ ಅವೂ ನೆನಪಾಗುವುದಿಲ್ಲ. ಹಾಸ್ಯ ಸನ್ನಿವೇಶಗಳಿಗಾಗಿ ಮಾಧ್ಯಮದವರನ್ನು ಹಗುರವಾಗಿ ಚಿತ್ರಿಸುವ ಉದ್ಧಟತನ ಬೇಡ ವಾಗಿತ್ತು. ಇಂತಹ ಎಡವಟ್ಟುಗಳ ಮಧ್ಯೆ ಸಿನೆಮಾ ಯಾವುದೇ ಒಂದು ನಿರ್ದಿಷ್ಟ ನೋಡುಗ ವರ್ಗವನ್ನೂ ತಾಕುವುದಿಲ್ಲ ಎನ್ನುವುದು ವಿಪರ್ಯಾಸ.

ನಿರ್ದೇಶನ : ಮಂಜು ಸ್ವರಾಜ್, ನಿರ್ಮಾಣ: ಎಸ್.ವಿ.ಬಾಬು, ಸಂಗೀತ : ಅರ್ಜುನ್ ಜನ್ಯ, ಛಾಯಾಗ್ರಹಣ: ವೆಂಕಟೇಶ್ ಅಂಗುರಾಜ್, ತಾರಾಗಣ : ಗಣೇಶ್, ಸಾಯಿಕುಮಾರ್, ರನ್ಯಾ ರಾವ್, ಸಾಧು ಕೋಕಿಲ, ಆಶಿಷ್ ವಿದ್ಯಾರ್ಥಿ ಮತ್ತಿತರರು.

ರೇಟಿಂಗ್ - **


* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News