ಸಚಿನ್ ಎ ಬಿಲಿಯನ್ ಡ್ರೀಮ್ಸ್: ಸ್ಫೂರ್ತಿದಾಯಕ ಜೀವನಗಾಥೆ

Update: 2017-05-27 18:32 GMT

ಕಳೆದ ಮೂರ್ನಾಲ್ಕು ವರ್ಷಗಳಿಂದೀಚೆಗೆ ಕ್ರೀಡಾಪಟುಗಳ ಜೀವನಕಥೆಯ ಐದಾರು ಹಿಂದಿ ಸಿನೆಮಾಗಳು ತೆರೆಕಂಡಿವೆ. ಜನರೂ ಇವನ್ನು ಮೆಚ್ಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ಸಚಿನ್ ಜೀವನ-ಸಾಧನೆಯ ‘ಸಚಿನ್ ಎ ಬಿಲಿಯನ್ ಡ್ರೀಮ್ಸ್’ ಸಿನೆಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಸಚಿನ್ ಸಿನೆಮಾವನ್ನು ಇತರ ಕ್ರೀಡಾಪಟುಗಳ ಚಿತ್ರಗಳಿಗೆ ಹೋಲಿಸಲಾಗದು.

ಇದನ್ನು ಡಾಕ್ಯುಮೆಂಟರಿ ಎನ್ನುವುದೇ ಸೂಕ್ತ. ಸಚಿನ್ ಬಾಲ್ಯದ ದಿನಗಳಲ್ಲಿ ಮಾತ್ರ ಕೆಲವು ಪಾತ್ರಧಾರಿಗಳು ಕಾಣಿಸಿಕೊಳ್ಳುತ್ತಾರಷ್ಟೆ. ಉಳಿದಂತೆ ಸಚಿನ್ ತಮ್ಮ ಬದುಕಿನ ಬಗ್ಗೆ ಹೇಳುತ್ತಾ ಹೋದಂತೆ ಹಿನ್ನೆಲೆಯಲ್ಲಿ ವೀಡಿಯೋಗಳು ಕಾಣಿಸುತ್ತವೆ. ಸಚಿನ್ ವೈಯಕ್ತಿಕ ಬದುಕನ್ನು ಚಿತ್ರಿಸುವಾಗ ಅವರ ತಾಯಿ, ಪತ್ನಿ, ಸಹೋದರ, ಸಹೋದರಿ ಮತ್ತಿತರರು ಮಾತನಾಡುತ್ತಾರೆ. ಕ್ರಿಕೆಟ್ ಜೀವನದ ಬಗ್ಗೆ ಸಚಿನ್ ಸಹಪಾಠಿಗಳು ಸೇರಿದಂತೆ ಹಿರಿಯ ಕ್ರಿಕೆಟಿಗರು ತೆರೆಗೆ ಬರುತ್ತಾರೆ.

ಸಚಿನ್ ಬಾಲ್ಯದಿಂದ ಚಿತ್ರ ಆರಂಭವಾಗುತ್ತದೆ. ಅಣ್ಣ ಅಜಿತ್‌ನಿಂದ ಸಿಗುವ ಮೊದಲ ಪ್ರೋತ್ಸಾಹ, ಕೋಚ್ ರಮಾಕಾಂತ್ ಅಚ್ರೇಕರ್ ಅವರ ಪ್ರೀತಿಗೆ ಪಾತ್ರವಾಗಿದ್ದು, ಮನೆಯವರೆಲ್ಲರೂ ಸಚಿನ್ ಕ್ರಿಕೆಟ್ ಕೆರಿಯರ್‌ಗೆ ಬೆಂಗಾವಲಾಗಿ ನಿಂತ ಸನ್ನಿವೇಶಗಳನ್ನು ಚೆನ್ನಾಗಿ ಚಿತ್ರಿಸಲಾಗಿದೆ. ಮಕ್ಕಳು ಇಷ್ಟಪಡುವ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪೋಷಕರು ಅವರಿಗೆ ಅವಕಾಶ ಮಾಡಿಕೊಡಬೇಕೆನ್ನುವ ಪಾಠವೂ ಇಲ್ಲಿದೆ. ಮುಂದೆ ಸಚಿನ್ ಸ್ಥಳೀಯ ತಂಡಗಳಿಗೆ ಮತ್ತು ರಣಜಿಗೆ ಆಡಿದ್ದಾಗಿನ ದಿನಗಳು ಮತ್ತು ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ದಿನಗಳನ್ನು ವೀಡಿಯೊ ಕ್ಲಿಪಿಂಗ್‌ಗಳು ಮತ್ತು ಪೇಪರ್ ಕಟಿಂಗ್‌ಗಳ ಮೂಲಕ ನಿರೂಪಿಸಲಾಗಿದೆ. ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ವೃತ್ತಿ ಬದುಕು ಸದಾ ಏರುಗತಿಯಲ್ಲೇನೂ ಇರಲಿಲ್ಲ.

ಸಾಮಾನ್ಯರ ಬದುಕಿನಂತೆ ಸಚಿನ್ ಕೂಡ ಏಳುಬೀಳುಗಳನ್ನು ಕಂಡವರೆ. ಚಿತ್ರದಲ್ಲಿ ಕೂಡ ಈ ಅಂಶಗಳನ್ನು ಯಾವುದೇ ಉತ್ಪ್ರೇಕ್ಷೆ ಇಲ್ಲದೆ ತೋರಿಸಿದ್ದಾರೆ. ಸ್ವತಃ ಸಚಿನ್ ತಮ್ಮ ಕ್ರಿಕೆಟ್ ಬದುಕಿನ ಸಂಕಷ್ಟದ ದಿನಗಳನ್ನು ಹೇಳುತ್ತಲೇ ಆ ಹಂತಗಳನ್ನು ಯಶಸ್ವಿಯಾಗಿ ದಾಟಿದ ಬಗೆಯನ್ನೂ ವಿವರಿಸುತ್ತಾರೆ. ಒಂದೆರಡು ಸೋಲುಗಳಿಂದ ಎದೆಗುಂದುವವರಿಗೆ ಅವರ ಮಾತುಗಳು ಉತ್ಸಾಹ ತುಂಬುವಂತಿವೆ. ತಮ್ಮ ಮೊದಲ ಭೇಟಿ, ಮದುವೆ, ಪರಸ್ಪರರ ಬಗೆಗಿನ ಪ್ರೀತಿ-ವಿಶ್ವಾಸದ ಸಚಿನ್ ಮತ್ತು ಅಂಜಲಿ ದಂಪತಿ ಮಾತುಗಳು ಮುದ ನೀಡುತ್ತವೆ.

ಹೆಚ್ಚು ವಿವಾದಗಳನ್ನು ಕೆದಕುವುದಕ್ಕೆ ಹೋಗದಿದ್ದರೂ ಹೇಳದೆಯೂ ಬಿಟ್ಟಿಲ್ಲ. ಕ್ರಿಕೆಟ್ ಬೆಟ್ಟಿಂಗ್ ದಂಧೆ, ಕೋಚ್ ಗ್ರೆಗ್ ಚಾಪೆಲ್ ಅವರ ಸಣ್ಣತನಗಳು, ಕ್ರಿಕೆಟರ್ ಅಝರುದ್ದೀನ್ ಅವರಿಗೆ ತಮ್ಮ ಮೇಲಿದ್ದ ಅಸಮಾಧಾನಗಳನ್ನು ಸೂಚ್ಯವಾಗಿ ಸಚಿನ್ ಪ್ರಸ್ತಾಪಿಸುತ್ತಾರೆ. ಸಚಿನ್ ವೃತ್ತಿ ಬದುಕಿನ ಜತೆ ಆಯಾ ಸಂದರ್ಭದಲ್ಲಿ ದೇಶದಲ್ಲಾದ ಮಹತ್ವದ ಬೆಳವಣಿಗೆಗಳನ್ನು ಸಮೀಕರಿಸುವ ನಿರ್ದೇಶಕರ ತಂತ್ರವನ್ನು ಮೆಚ್ಚಿಕೊಳ್ಳಬಹುದು. ಹಿನ್ನೆಲೆ ಸಂಗೀತದಲ್ಲಿ ಎ.ಆರ್.ರೆಹಮಾನ್ ಅವರ ಎಂದಿನ ಮ್ಯಾಜಿಕ್ ಕಾಣಿಸುವುದಿಲ್ಲ. ಒಟ್ಟಿನಲ್ಲಿ ಇನ್ನಷ್ಟು ಆಕರ್ಷಕವಾಗಿ ಮಾಡಬಹುದಾದ ಚಿತ್ರವನ್ನು ನಿರ್ದೇಶಕರು ಡಾಕ್ಯುಮೆಂಟರಿಗೆ ಸೀಮಿತಗೊಳಿಸಿದ್ದಾರೆ.

ನಿರ್ದೇಶನ: ಜೇಮ್ಸ್ ಎರ್ಸ್ಕಿನ್, ನಿರ್ಮಾಣ: ಕಾರ್ನಿವಾಲ್ ಮೋಷನ್ ಪಿಕ್ಚರ್ಸ್‌, ಸಂಗೀತ: ಎ.ಆರ್.ರೆಹಮಾನ್, ತಾರಾಗಣ: ಸಚಿನ್ ತೆಂಡೂಲ್ಕರ್, ಮಯೂರೆಷ್ ಪೆಮ್, ಅಜಿತ್ ತೆಂಡೂಲ್ಕರ್, ಅಂಜಲಿ ತೆಂಡೂಲ್ಕರ್, ಸಾರಾ ತೆಂಡೂಲ್ಕರ್ ಮತ್ತಿತರರು.

ರೇಟಿಂಗ್ - ***

* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News