ಅನಲ ಮಹಿಳೆಯ ಕಣ್ಣೀರ ಕಥೆ

Update: 2017-05-28 08:34 GMT

ಸಾಗರವನ್ನು, ಬಾನಂಗಳವನ್ನು, ಕನಸನ್ನು, ಕಲ್ಪನೆಯನ್ನು ಬಂಧಿಸಿಡಲು ಸಾಧ್ಯವೇ?....ಹೆಣ್ತನ ಎನ್ನುವುದು ಪ್ರಕೃತಿಯ ಸ್ವಚ್ಛಂದ ಸೊಬಗು. ಇಂತಹ ಚೆಲುವನ್ನು ಆನಂದಿಸಲಾರದವನಲ್ಲಿ ಪುರುಷ ಅಹಂಕಾರ ಹೆಪ್ಪುಗಟ್ಟಿರುತ್ತದೆ.

ಹೆಣ್ಣು ಹಾಗೂ ಪ್ರಕೃತಿಯ ವಿನಾಶಕ್ಕೆ ಪುರುಷನ ಸಂಕುಚಿತತೆ, ಸ್ವಾರ್ಥ, ಅಹಂ ಹೇಗೆ ಕಾರಣವಾಗಿವೆ ಎಂಬುದನ್ನು ನಿರ್ದೇಶಕಿ ಸಂಜ್ಯೋತಿ ‘ಅನಲ’ ಸಿನೆಮಾದ ಮೂಲಕ ಕಟ್ಟಿಕೊಟ್ಟಿದ್ದಾರೆ. ಮತ್ತು ವೀಕ್ಷಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಗಂಡು-ಹೆಣ್ಣಿನ ನಡುವೆ ಇರುವ ತಾರತಮ್ಯವೇ ‘ಅನಲ’ ಸಿನೆಮಾದ ಕೇಂದ್ರ ಬಿಂದುವಾಗಿದ್ದರೂ ಅದನ್ನು ವಿವಿಧ ಪ್ರತಿಮೆಗಳ ಮೂಲಕ ಅಭಿವ್ಯಕ್ತಿಸಿರುವ ರೀತಿ ಗಂಡು-ಹೆಣ್ಣೆಂಬ ಮಿತಿಯ ಚೌಕಟ್ಟನ್ನು ಮೀರಿ ಹಲವು ಮಜಲುಗಳಲ್ಲಿ ಚಿಂತಿಸುವಲ್ಲಿ ಯಶಸ್ವಿಯಾಗಿದೆ.

‘ಅನಲ’ ಸಿನೆಮಾ ಕೇವಲ 30 ನಿಮಿಷಗಳ ಕಿರುಚಿತ್ರವಾದರೂ ಅದು ನಮ್ಮಳಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಲೇ ವಿಸ್ತಾರತೆಯನ್ನು ಪಡೆದುಕೊಳ್ಳುತ್ತದೆ. ಈ ಸಿನೆಮಾದಲ್ಲಿ ಕಣ್ಣಿಗೆ ಕಾಣುವಷ್ಟು ಸಾಗರ, ವಿಶಾಲವಾದ ಬಾನಂಗಳವನ್ನು ಹೆಣ್ಣಿಗೆ ಹೋಲಿಸಲಾಗಿದೆ. ಅನಾದಿ ಕಾಲದಿಂದಲೂ ಈ ಪುರುಷ ಅಹಂಕಾರ ಹೆಣ್ಣನ್ನು ಹೇಗೆ ಬಂಧಿಸಿಡಲಾಗಿದೆಯೋ ಅದೇ ರೀತಿಯಲ್ಲಿ ಸಾಗರ, ಬಾನಂಗಳವನ್ನು ನಿಯಂತ್ರಿಸಲು ಹೊರಟಿದ್ದಾನೆ ಎಂಬುದನ್ನು ಹೆಣ್ಣಿನ ಕಾಲಿಗೆ ನುಣುಪಾದ ಹಗ್ಗದಲ್ಲಿ ಕಟ್ಟಿಹಾಕಿರುವ ದೃಶ್ಯವು ನೋಡುಗರಿಗೆ ಹಲವು ಬಗೆಯಲ್ಲಿ ಚಿಂತನೆಗೆ ಹಚ್ಚುತ್ತದೆ. ಹೆಣ್ಣಿನ ಪ್ರತೀ ಮಾತು, ಪ್ರತೀ ನಡವಳಿಕೆಯನ್ನು ಅನಾದಿ ಕಾಲ ದಿಂದಲೂ ಕಟ್ಟುಪಾಡುಗಳಿಗೆ ಒಳಪಡಿಸಿ ನಿಯಂತ್ರಿಸಲಾಗಿದೆ. ಹಾಗೂ ಈ ಕಟ್ಟುಪಾಡಿನಲ್ಲಿ ಕೊಂಚ ಏರುಪೇರಾದರೂ ಆ ಹೆಣ್ಣನ್ನು ಅಸಹಜವಾಗಿ ನೋಡುವ ಮೂಲಕ ಅವಮಾನ ಹಾಗೂ ಭಯ ಹುಟ್ಟಿಸುವ ಮೂಲಕ ಪುನಃ ಚೌಕಟ್ಟಿನೊಳಗಿಡುವಂತೆ ಪುರುಷ ಪ್ರಧಾನ ವ್ಯವಸ್ಥೆ ಸದಾ ಒತ್ತಡ ಹಾಕುತ್ತದೆ.

ಹೆಣ್ಣನ್ನು ದೈಹಿಕವಾಗಿ ಬಂಧಿಸಿಡಬಹುದೇ ಹೊರತು ಅವಳ ಸ್ವಚ್ಛಂದವಾದ ಕನಸನ್ನು ಹಾಗೂ ಕಲ್ಪನೆಗಳನ್ನಲ್ಲ. ಹೆಣ್ಣು ಪ್ರಕೃತಿಯಷ್ಟೇ ನಿರ್ಮಲ ಹಾಗೂ ಸಹನಶೀಲಳು. ಇದನ್ನೇ ಬಲಹೀನತೆಯೆಂದು ಪುರುಷ ಪ್ರಧಾನ ವ್ಯವಸ್ಥೆ ದುರುಪಯೋಗ ಪಡಿಸಿಕೊಂಡು ಸಮಾಜದಲ್ಲಿ ಅಶಾಂತ ವಾತಾವರಣವನ್ನು ಹರಡುತ್ತಿರುವುದರ ಕುರಿತು ‘ಅನಲ’ ಸಿನೆಮಾ ವೀಕ್ಷಕರಿಗೆ ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿದೆ.

ಸಿನೆಮಾ: ಅನಲ
ಚಿತ್ರಕತೆ-ಸಂಭಾಷಣೆ-ನಿರ್ದೇಶನ: ಸಂಜ್ಯೋತಿ

ಸಹ ನಿರ್ಮಾಪಕ: ನಿತಿನ್

ಛಾಯಾಗ್ರಹಣ-ಜಿ.ಆರ್.ವಿಶ್ವನಾಥ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News