"ಖಾಲಿ ಹೊಟ್ಟೆಯಲ್ಲಿ ಕಾಲ ಕಳೆಯುವುದು ನನಗೆ ಸಮಸ್ಯೆಯೇ ಅಲ್ಲ": ಮುಹಮ್ಮದ್ ದೆಮ್ಮಲೆ

Update: 2017-05-30 08:28 GMT

"ಈ ಬಾರಿಯ ಕಡು ಬಿಸಿಲಲ್ಲಿ ರಮಝಾನ್‌ ಉಪವಾಸ ಆಚರಿಸುವುದು ಹೇಗೆ ಎಂದು ಕೆಲವರು ಕೇಳುವಾಗಲೆಲ್ಲಾ ನನಗೆ ಆಶ್ಚರ್ಯವಾಗುತ್ತದೆ. ಯಾಕೆಂದರೆ, ಕಡು ಬಿಸಿಲಿಗೂ ಉಪವಾಸಕ್ಕೂ ಸಂಬಂಧವೇ ಇಲ್ಲ. ಮಳೆಗಾಲ, ಚಳಿಗಾಲದಲ್ಲಿ ರಮಝಾನ್ ಎದುರಾದಾಗ ನಾವು ಯಾವ ಸಮಸ್ಯೆಯೂ ಇಲ್ಲದೆ ಉಪವಾಸ ಆಚರಿಸುತ್ತೇವೆಯೋ, ಬೇಸಿಗೆಗಾಲದಲ್ಲೂ ಉಪವಾಸ ಆಚರಿಸಲು ಮನಸ್ಸು ಗಟ್ಟಿ ಮಾಡಬೇಕು".

"ಹಾಗೆ ಹೇಳುವುದಾದರೆ ನನಗೆ ಜೀವನಪೂರ್ತಿ ಉಪವಾಸ ಎಂದರೆ ತಪ್ಪಾಗಲಾರದು. ನಮ್ಮದು ಬಡಕುಟುಂಬ. ನನ್ನ ತಂದೆ, ನನ್ನ ಅಜ್ಜ ಹೀಗೆ ಎಲ್ಲರೂ ಕೂಲಿ ಕೆಲಸ ಮಾಡಿಕೊಂಡೇ ಬದುಕು ಸಾಗಿಸಿದವರು. ನಾನೂ ಕೂಡ ಅಷ್ಟೇ, ಸಣ್ಣ ವಯಸ್ಸಿನಲ್ಲೇ ಕೂಲಿ ಕೆಲಸ ಮಾಡಿಕೊಂಡು ಬಂದೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿತ್ತು. ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಕಾಲ ಕಳೆಯುವುದು ನನಗೆ ಸಮಸ್ಯೆಯಾಗಲಿಲ್ಲ. ಈ ಬಡತನದ ಮಧ್ಯೆಯೂ ನಾನು ಸ್ವಲ್ಪ ಶಾಲೆ ಕಲಿತೆ, ಕುರ್ ಆನ್ ಓದಲು ಕಲಿತೆ. ದುಡಿಮೆ ಬಿಟ್ಟರೆ ನನಗೆ ಪ್ರಪಂಚ ಜ್ಞಾನ ಕಡಿಮೆ ಎನ್ನಬಹುದು. ಸುಮಾರು 35 ವರ್ಷಗಳ ಕಾಲ ನಾನು ಹಾಸನ ಜಿಲ್ಲೆಯ ಕೆಲವು ಕಡೆ ಕೂಲಿಯಾಳಾಗಿ, ಕಟ್ಟಡ ನಿರ್ಮಾಣದ ಮೇಸ್ತ್ರಿಯಾಗಿ ದುಡಿದೆ. ನನ್ನದು ಪತ್ನಿ, ಇಬ್ಬರು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳ ಚೆಂದದ ಸಂಸಾರ. ಸಂಸಾರ ಸಾಗಿಸಲು ಸಾಲ-ಸೋಲ ಮಾಡಿ ಮನೆ ಕಟ್ಟುವ ಗುತ್ತಿಗೆ ವಹಿಸಿಕೊಂಡರೂ ಅದು ಕೈಗೆ ಹತ್ತಲಿಲ್ಲ".

"ಪತ್ನಿ ಅಸೌಖ್ಯದಿಂದ ಹಾಸಿಗೆ ಹಿಡಿದಿದ್ದಾಳೆ. ಹೆಣ್ಮಕ್ಕಳಿಗೆ ಮದುವೆ ಮಾಡಿಕೊಟ್ಟೆ, ಒಬ್ಬ ಮಗನನ್ನು ವಿದೇಶಕ್ಕೆ ಕಳುಹಿಸಿಕೊಟ್ಟೆ. ಮಳೆ, ಬಿಸಿಲು, ಗಾಳಿ, ಚಳಿ ಎಂದು ನೋಡದೆ ರಮಝಾನ್‌ನಲ್ಲೂ ವಿಶ್ರಾಂತಿ ಪಡೆಯದೆ ವರ್ಷಪೂರ್ತಿ ಮೈಮುರಿದು ದುಡಿದ ತೃಪ್ತಿ ಇದೆ.  ಕಳೆದ 12 ವರ್ಷದಿಂದ ನಾನು ಇಂಜಿನಿಯರ್ ಅಯಾಝ್ ಬಳಿ ಬೆಳಗ್ಗೆ 8:30ರಿಂದ ಸಂಜೆ 5:30ರವರೆಗೆ ದುಡಿಯುತ್ತಿದ್ದೇನೆ. ಸುಡು ಬಿಸಿಲೇ ಇರಲಿ, ಚಳಿಯೇ ಇರಲಿ, ಮಳೆಯೇ ಸುರಿಯಲಿ, ಉಪವಾಸ ಅಂತ ನಾನು ದುಡಿಮೆಯಲ್ಲಿ ಹಿಂದೆ ಬೀಳುವುದಿಲ್ಲ. ಆದರೆ, ಅಯಾಝ್ ಅವರೇ ನನಗೆ ಹೆಚ್ಚು ಕೆಲಸ ಕೊಡುವುದಿಲ್ಲ. ಕಠಿಣ ಕೆಲಸ ಮಾಡಬೇಡಿ ಎಂದು ಸೂಚಿಸುತ್ತಾರೆ. ನಾನು ಪಡೆಯುವ ಸಂಬಳಕ್ಕಷ್ಟಾದರೂ ದುಡಿದರೆ ಮಾತ್ರ ನನ್ನ ಮನಸ್ಸಿಗೆ ತೃಪ್ತಿಯಾಗುತ್ತದೆ".

"ನನಗೀಗ 70 ವರ್ಷ ವಯಸ್ಸು. ವಯೋ ಸಹಜವಾಗಿ ಕೆಲಸ ಮಾಡುವಾಗ ನಿಶ್ಶಕ್ತಿಯುಂಟಾಗುತ್ತದೆ. ಒಮ್ಮೆ ಉಪವಾಸ ಸಂದರ್ಭ ಕೆಲಸ ಮಾಡುವಾಗ ಕುಸಿದು ಬಿದ್ದಿದ್ದೆ. ಆದರೂ ಉಪವಾಸ ಬಿಡಲಿಲ್ಲ. ಒಮ್ಮೆ ಉಪವಾಸ ಬಿಟ್ಟರೆ ಮತ್ತೆ ನನಗೆ ಅದೇ ಅಭ್ಯಾಸವಾಗಿ ಹೋಗಬಹುದು. ಆರಂಭದ ಮೂರ್ನಾಲ್ಕು ದಿನ ಉಪವಾಸ ಹಿಡಿದು ಕೆಲಸ ಮಾಡುವಾಗ ಸ್ವಲ್ಪ ಸುಸ್ತಾಗುತ್ತದೆ. ಬಳಿಕ ಎಲ್ಲ ಸಲೀಸಾಗುತ್ತದೆ. ಹಾಗೆ ನೋಡಿದರೆ, ಉಪವಾಸದಿಂದ ಹೊಟ್ಟೆ ಮಾತ್ರವಲ್ಲ ಮನಸ್ಸು ಕೂಡ ಶುದ್ಧವಾಗಿರುತ್ತದೆ. ಇದು ನಾನು ಕಂಡುಕೊಂಡ ಸತ್ಯ. ಎಷ್ಟೋ ಸಲ, ನನ್ನ ಮನಸ್ಸನ್ನು ಉಪವಾಸ ಹತೋಟಿಯಲ್ಲಿದೆ. ಈ ಸಂದರ್ಭ ಮನಸ್ಸು ಶುದ್ಧವಾಗಿರುವುದರಿಂದ ಹೆಚ್ಚು ಲವಲವಿಕೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ನನ್ನ ಜೊತೆಗಿರುವ ಕೆಲಸಗಾರರ ಸಹಕಾರ ಕೂಡ ಅಪಾರ. ಮಾತು ಮಾತಿಗೆ ‘ಮೊಮ್ಮದಾಕ... ಮೊಮ್ಮದಾಕ’ ಎಂದು ಕರೆಯುತ್ತಾರೆ. ಇದರಿಂದ ನಾವೆಲ್ಲಾ ಹಂಚಿಕೊಂಡು ಕೆಲಸ ಮಾಡುತ್ತಿದ್ದೇವೆ. ರಮಝಾನ್‌ನಲ್ಲಿ ಈ ಸ್ನೇಹ, ಪ್ರೀತಿ, ವಿಶ್ವಾಸ ತುಸು ಹೆಚ್ಚೆಂದರೆ ತಪ್ಪಾಗಲಾರದು".

 

-ಮುಹಮ್ಮದ್, (70 ವರ್ಷ), ಮಲ್ಲೂರು-ದೆಮ್ಮಲೆ  (ಮೇಸ್ತ್ರಿ ಕೆಲಸಗಾರ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News