ಜಪಾನ್ ಮಹಿಳೆಗೆ ಲೈಂಗಿಕ ಕಿರುಕುಳ: ಅಪರಾಧಿಗೆ 2 ವರ್ಷ ಜೈಲು

Update: 2017-05-28 17:31 GMT

ಮಧ್ಯಪ್ರದೇಶ, ಮೇ 28: ಪ್ರವಾಸಿ ಜಪಾನ್ ಮಹಿಳೆಯೋರ್ವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯೋರ್ವನಿಗೆ ಛತ್ತರ್ ಪುರ ಜಿಲ್ಲೆಯ ರಾಜ್ ನಗರ್ ನ ನ್ಯಾಯಾಲಯವೊಂದು 2 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.

ಮೇ 7ರಂದು ಖುಜುರಾಹೋಗೆ ಆಗಮಿಸಿದ್ದ ಜಪಾನೀ ಮಹಿಳೆಗೆ ರಾಮ್ ರತನ್ ಸೋನಿ ಎಂಬಾತ ತಾನು ಯೋಗ ಗುರು ಎಂದು ಹೇಳಿ ಪರಿಚಯ ಮಾಡಿಕೊಂಡಿದ್ದ. ನಂತರ ಚೌಸತ್ ಯೋಗಿನಿ ದೇವಸ್ಥಾನ ಹಾಗೂ ದುಲ್ಹಾ ದೇವ್ ದೇವಸ್ಥಾನದಲ್ಲಿ ಚಿಕಿತ್ಸೆ ನೀಡುವ ನೆಪದಲ್ಲಿ ಮಹಿಳೆಯನ್ನು ಅಸಭ್ಯವಾಗಿ ಮುಟ್ಟಿದ್ದ ಎನ್ನಲಾಗಿದೆ.

ನಂತರ ಆಕೆಯನ್ನು ಖಾಸಗಿ ಹೊಟೇಲೊಂದಕ್ಕೆ ಕರೆದೊಯ್ದ ಆರೋಪಿ ಅಲ್ಲಿ ಮಹಿಳೆಯ ಖಾಸಗಿ ಭಾಗಗಳನ್ನು ಸ್ಪರ್ಶಿಸಿದ್ದಾನೆ, ಈ ಸಂದರ್ಭ ಮಹಿಳೆ ಬೊಬ್ಬೆ ಹೊಡೆದಿದ್ದು, ಹೊಟೇಲ್ ಸಿಬ್ಬಂದಿ ಮಹಿಳೆಯನ್ನು ರಕ್ಷಿಸಿದ್ದಾರೆ. ಬೆದರಿದ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಮಹಿಳೆಗೆ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ನೀಡಿದ್ದಾರೆ.

ನಂತರ ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 2000 ರೂ, ದಂಡ ವಿಧಿಸಿ ತೀರ್ಪಿತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News