×
Ad

ಕಸಾಯಿಖಾನೆಗೆ ಗೋ ಸಾಗಾಟ ನಿಷೇಧ: ವಿವಾದದಿಂದ ದೂರ ಉಳಿದ ಕಾಂಗ್ರೆಸ್

Update: 2017-05-29 09:43 IST

ತಿರುವನಂತಪುರಂ, ಮೇ 29: ಜಾನುವಾರು ಸಂತೆಗಳಲ್ಲಿ ಗೋವುಗಳನ್ನು ಕಸಾಯಿಖಾನೆಗೆ  ಮಾರಾಟ ಮಾಡುವುದನ್ನು ನಿಷೇಧಿಸಿ ಕೇಂದ್ರ ಸರಕಾರ ಹೊರಡಿಸಿರುವ ಅಧಿಸೂಚನೆ ವಿರುದ್ಧ ಕೇರಳದಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆಗೆ ಇಳಿದಿದ್ದರೆ, ಪಕ್ಷದ ವರಿಷ್ಠರು ಮಾತ್ರ ವಿವಾದದ ಬಗ್ಗೆ ಕಾದು ನೋಡುವ ಕ್ರಮ ಅನುಸರಿಸಲು ನಿರ್ಧರಿಸಿದ್ದಾರೆ.

ಕೇಂದ್ರದ ಆದೇಶವನ್ನು ವಿರೋಧಿಸಿ ಶನಿವಾರ ಸಂಜೆ ಆಡಳಿತಾರೂಢ ಎಲ್‌ಡಿಎಫ್ ಹಾಗೂ ವಿರೋಧ ಪಕ್ಷವಾದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಯುವ ಕಾರ್ಯಕರ್ತರು ಕಣ್ಣೂರಿನಲ್ಲಿ ಸಾರ್ವನಿಕವಾಗಿಯೇ ಗೋಮಾಂಸದಿಂದ ಅಡುಗೆ ಸಿದ್ಧಪಡಿಸಿ ವಿತರಿಸುವ ಬೀಫ್ ಉತ್ಸವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಈ ಕ್ರಮವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, "ಬರ್ಬರ ಹಾಗೂ ಸ್ವೀಕಾರರ್ಹವಲ್ಲದ ಕ್ರಮ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ" ಎಂದು ಬಣ್ಣಿಸುವುದರೊಂದಿಗೆ ಕಾಂಗ್ರೆಸ್ ನಡೆ ಕುತೂಹಲಕ್ಕೆ ಕಾರಣವಾಗಿದೆ.

ಎನ್‌ಡಿಎ ಸರಕಾರದ ನಿರ್ಧಾರದ ವಿರುದ್ಧ ವಿರೋಧ ಪಕ್ಷಗಳು ಮತ್ತು ಸ್ವತಃ ಕಾಂಗ್ರೆಸ್ ಕೂಡಾ ಟೀಕಾಪ್ರಹಾರ ನಡೆಸಿದ್ದರೆ, ಇದನ್ನು ರಾಹುಲ್ ಖಂಡಿಸಿರುವುದು, ಪಕ್ಷ ವಿವಾದದಿಂದ ಅಂತರ ಕಾಯ್ದುಕೊಳ್ಳುತ್ತದೆ ಎನ್ನುವುದನ್ನು ಬಿಂಬಿಸಿದೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960ರ ಅನ್ವಯ ಯುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

"ಕಾನೂನನ್ನು ಯಾರೇ ಉಲ್ಲಂಘಿಸಿದರೂ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ ಪಕ್ಷ ಅದನ್ನು ಬೆಂಬಲಿಸುವುದಿಲ್ಲ. ವಿಡಿಯೊದಲ್ಲಿರುವ ವ್ಯಕ್ತಿ ಕಾಂಗ್ರೆಸ್ ಪಕ್ಷದವನೇ ಅಥವಾ ಅಲ್ಲವೇ ಎನ್ನುವುದನ್ನು ಮೊದಲು ದೃಢಪಡಿಸಿಕೊಳ್ಳಬೇಕು" ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಾಂಘ್ವಿ ಹೊಸದಿಲ್ಲಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News