ಬಹರೈನ್ ಶೇಖ್ ವಿರುದ್ಧ 42.5 ಮಿ. ಡಾಲರ್ ಮೊಕದ್ದಮೆ: ಶಾರುಖ್ ಖಾನ್ ಗೂ ಈ ಪ್ರಕರಣಕ್ಕೂ ಏನು ಸಂಬಂಧ ಗೊತ್ತೇ ?
ಮುಂಬೈ, ಮೇ.29 : ಬಾಲಿವುಡ್ ತಾರೆಯರ ಜತೆ ಭೇಟಿಗೆ ಸಂಬಂಧಿತ ಒಪ್ಪಂದವೊಂದರಿಂದ ಹಿಂದೆ ಸರಿದ ಬಹರೈನಿನ ರಾಜಮನೆತನದ ಸದಸ್ಯರೊಬ್ಬರನ್ನು ಅಂತಾರಾಷ್ಟ್ರೀಯ ಉದ್ಯಮಿಯೊಬ್ಬರು ಲಂಡನ್ನಿನ ನ್ಯಾಯಾಲಯಕ್ಕೆ ಎಳೆದಿದ್ದಾರೆ.
ಈಜಿಪ್ಟ್ ಉದ್ಯಮಿ ಅಹ್ಮದ್ ಅಬ್ದೆಲ್ ಅಬ್ದಲ್ಲಾಹ್ ಎಂಬವರು ಆರೋಪಿಸಿದಂತೆ ಬಹರೈನಿನ ಈಗಿನ ಸುಲ್ತಾನನ ದೂರದ ಸಂಬಂಧಿಯೆಂದು ಹೇಳಲಾದ ಶೇಖ್ ಹಮದ್ ಇಸಾ ಲಿ ಅಲ್ ಖಲೀಫಾ ಎಂಬವರು ತನಗೆ 26 ಮಂದಿ ಬಾಲಿವುಡ್ ತಾರೆಯರ ಹೆಸರುಗಳ ಪಟ್ಟಿ ನೀಡಿ ಅವರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದರೂ ಶಾರುಖ್ ಖಾನ್ ಸಹಿತ ನಾಲ್ಕು ಮಂದಿಯನ್ನು ಭೇಟಿಯಾದ ನಂತರ ಆತ ಹಿಂದೆ ಸರಿದ ಕಾರಣ ಈ ಭೇಟಿಯನ್ನು ಆಯೋಜಿಸಿದ್ದ ಅಹ್ಮದ್ ಇದೀಗ 42.5 ಮಿಲಿಯನ್ ಡಾಲರ್ ಪರಿಹಾರ ಕೇಳುತ್ತಿದ್ದಾರೆ.
ಇತ್ತೀಚೆಗೆ ಲಂಡನ್ ಹೈಕೋರ್ಟ್ ತನ್ನ ವಿರುದ್ಧದ ಸಿವಿಲ್ ಮೊಕದ್ದಮೆ ಸಂಬಂಧಿತ ವಿಚಾರಣೆಗೆ ತಡೆಯಾಜ್ಞೆ ವಿಧಿಸುವಂತೆ ಕೋರಿದ್ದು ಇದಕ್ಕೆ ಅವಕಾಶ ನಿರಾಕರಿಸಿದ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ಇಂಗ್ಲೆಂಡಿನಲ್ಲಿ ನಡೆಯಬಹುದೇ ಹೊರತು ಬಹರೈನಿನಲ್ಲಲ್ಲ ಎಂದು ಹೇಳಿದೆ.
ಈ ಮೌಖಿಕ ಒಪ್ಪಂದದಂತೆ ಬಾಲಿವುಡ್ ನಟರು ಈ ಬಹರೈನ್ ನಾಗರಿಕನನ್ನು 15ರಿಂದ 25 ನಿಮಿಷಗಳ ಕಾಲ ಭೇಟಿಯಾಗಬೇಕಿತ್ತು ಹಾಗೂ ಪ್ರತಿ ಭೇಟಿಗೆ 1.5 ಮಿಲಿಯನ್ ಡಾಲರ್ ಎಂದು ನಿಗದಿ ಪಡಿಸಲಾಗಿತ್ತು. ಪ್ರತಿ ಮೂರನೇ ಸಭೆಗೆ 5 ಲಕ್ಷ ಡಾಲರ್ ಬೋನಸ್ ಎಂದೂ ನಿಗದಿಪಡಿಸಲಾಗಿತ್ತು. ಆದರೆ ತಾನು ಯಾವುದೇ ಒಪ್ಪಂದಕ್ಕೆ ಬಂದಿರಲಿಲ್ಲ ಎಂದು ಶೇಖ್ ಹಮದ್ ಹೇಳಿಕೊಂಡಿದ್ದಾರೆ.