ಯುಪಿಎ ಯೋಜನೆಗಳನ್ನು ಉದ್ಘಾಟಿಸಿದ್ದು, ಮರುನಾಮಕರಣ ಮಾಡಿದ್ದೇ ಮೋದಿ ಸರ್ಕಾರದ ಸಾಧನೆ : ಶಿವಸೇನೆ
ಮುಂಬೈ,ಮೇ 29 : ಕಳೆದ ಮೂರು ವರ್ಷಗಳ ತನ್ನ ಆಡಳಿತದಲ್ಲಿ ಕೇಂದ್ರದ ನರೇಂದ್ರ ಮೋದಿ ಸರಕಾರವು ನೋಟು ಅಮಾನ್ಯೀಕರಣವೊಂದನ್ನು ಹೊರತು ಪಡಿಸಿ ಈ ಹಿಂದಿನ ಯುಪಿಎ ಆಡಳಿತದ ಸಂದರ್ಭ ಆರಂಭಿಸಲಾದ ಯೋಜನೆಗಳನ್ನೇ ‘‘ಉದ್ಘಾಟಿಸಿದೆ ಹಾಗೂ ಪುನರ್ ನಾಮಕರಣ ಮಾಡಿದೆ’’ ಎಂದು ಬಿಜೆಪಿಯ ಪ್ರಮುಖ ಮಿತ್ರ ಪಕ್ಷವಾದ ಶಿವ ಸೇನೆ ತನ್ನ ಮುಖವಾಣಿ ಸಾಮ್ನಾ ದಲ್ಲಿ ಹೇಳಿದೆ.
ನೋಟು ಅಮಾನ್ಯೀಕರಣದಿಂದಾಗಿ ಬಹುವಾಗಿ ಬಾಧಿತವಾದ ರೈತರು ಹಾಗೂ ಜನಸಾಮಾನ್ಯರನ್ನು ಸರಕಾರ ತನ್ನ ಮೂರನೇ ವರ್ಷಾಚರಣೆಯಲ್ಲಿ ಭಾಗಿಯಾಗಿಸಿದೆಯೇ ಎಂದು ಶಿವ ಸೇನೆ ಪ್ರಶ್ನಿಸಿದೆ. ಅಮಾನ್ಯೀಕರಣ ಹೊರತು ಪಡಿಸಿ ಸರಕಾರ ಏನೂ ಹೊಸದನ್ನು ಮಾಡಿಲ್ಲ ಎಂದೂ ಅದು ಹೇಳಿಕೊಂಡಿದೆ. ಬಹಳಷ್ಟು ಪ್ರಚಾರದೊಂದಿಗೆ ಕೆಲ ದೊಡ್ಡ ಯೋಜನೆಗಳನ್ನು ಪ್ರಾರಂಭಿಸಲಾಗಿತ್ತಾದರೂ ವಾಸ್ತವವಾಗಿ ಈ ಯೋಜನೆಗಳನ್ನು ಪುನರ್ ನಾಮಕರಣಗೊಳಿಸಲಾಗಿದೆ ಎಂದು ಅಸ್ಸಾಂನ ಭುಪೇನ್ ಹಜಾರಿಕಾ ಧೋಲ-ಸದಿಯ ಸೇತುವೆ ಹಾಗೂ ಜಮ್ಮು ಕಾಶ್ಮೀರದ ಚೆನನಿ-ನಶ್ರಿ ಯೋಜನೆಯನ್ನು ಉಲ್ಲೇಖಿಸಿ ಶಿವಸೇನೆ ಹೇಳಿದೆ.
ಮೋದಿ ಸರಕಾರದ ‘ದಿಟ್ಟ ಮತ್ತು ಮಹತ್ವಾಕಾಂಕ್ಷೆಯ’ ನೋಟು ಅಮಾನ್ಯೀಕರಣ ನಿರ್ಧಾರವು ಉದ್ಯೋಗ ಕಡಿತಗಳನ್ನುಂಟು ಮಾಡಿ ಅನಾನುಕೂಲ ಸೃಷ್ಟಿಸಿದೆ ಎಂದು ಸೇನೆ ಹೇಳಿದೆ.
ನೋಟು ಅಮಾನ್ಯೀಕರಣ ಕ್ರಮಕ್ಕಾಗಿ ಸೇನೆ ರಿಸರ್ವ್ ಬ್ಯಾಂಕನ್ನೂ ತರಾಟೆಗೆ ತೆಗೆದುಕೊಂಡಿದ್ದು ರೈತರು ಕಷ್ಟದಿಂದ ಸಂಪಾದಿಸಿದ ಹಣವನ್ನು ಕಸದ ಬುಟ್ಟಿಗೆ ಎಸೆಯಲು ಆರ್‌ಬಿಐಗೆ ಅಧಿಕಾರ ನೀಡಿದವರ್ಯಾರು ಎಂದು ಪ್ರಶ್ನಿಸಿದೆ.