ಕಾಶ್ಮೀರಿ ವಿದ್ಯಾರ್ಥಿಗಳು ಸಿಆರ್ ಪಿಎಫ್ ಯೋಧನನ್ನು ಕೊಲ್ಲುತ್ತಿರುವ ವೀಡಿಯೋದ ಅಸಲಿಯತ್ತು ಇಲ್ಲಿದೆ
ಹೊಸದಿಲ್ಲಿ, ಮೇ 29: “ನವಾಡದಲ್ಲಿ ಮುಸ್ಲಿಮರಿಂದ ಹಿಂದೂ ಯುವಕನ ಹತ್ಯೆ” ಹಾಗೂ “ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರಿಂದ ಹಿಂದೂ ಯುವಕನ ಹತ್ಯೆ” ಎನ್ನುವ ತಲೆಬರಹದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋವೊಂದು ಮತ್ತೊಮ್ಮೆ ಕಾಣಿಸಿಕೊಂಡಿದ್ದು, ಈ ಬಾರಿ ಅದಕ್ಕೆ “ಕಾಶ್ಮೀರಿ ವಿದ್ಯಾರ್ಥಿಗಳಿಂದ ಸಿಆರ್ ಪಿಎಫ್ ಜವಾನನ ಹತ್ಯೆ” ಎಂದು ಹೆಸರಿಡಲಾಗಿದೆ!. ಇದೀಗ ಈ ವಿಡಿಯೋದ ಅಸಲಿಯತ್ತನ್ನು Alt News ಬಹಿರಂಗಪಡಿಸಿದೆ.
ವಾಟ್ಸ್ಯಾಪ್ ನಲ್ಲಿ ಹರಿದಾಡಿದ ಈ ವಿಡಿಯೋ ನಂತರ ಫೇಸ್ಬುಕ್ ನಲ್ಲೂ ವೈರಲ್ ಆಗಿದ್ದು, 35 ಸಾವಿರ ಬಾರಿ ಶೇರ್ ಆಗಿ, ಈ ಸುದ್ದಿಯನ್ನು ಓದಿದ್ದ ಅಷ್ಟೂ ಮಂದಿಗೂ ತಪ್ಪು ಸಂದೇಶ ರವಾನೆಯಾಗಿದೆ. ಇನ್ನು ವಾಟ್ಸ್ಯಾಪ್ ನಲ್ಲಿ ಹರಿದಾಡಿದ ಈ ಸುದ್ದಿಯ ಒಕ್ಕಣೆ ಈ ರೀತಿಯಿದೆ.
“ಶ್ರೀನಗರದಲ್ಲಿ ಕಲಿಯುತ್ತಿರುವ ನನ್ನ ಸ್ನೇಹಿತನೊಬ್ಬ ಈ ವಿಡಿಯೋ ಕಳುಹಿಸಿದ್ದಾನೆ. ಇದು ಇವತ್ತು ನಡೆದ ಘಟನೆಯಾಗಿದ್ದು, ನ್ಯೂಸ್ ಚಾನೆಲ್ ಗಳಿಗೆ ತಲುಪುವಂತೆ ನೋಡಿಕೊಳ್ಳಿ. ಕಾಶ್ಮೀರದ ವಿದ್ಯಾರ್ಥಿಗಳು ಸಿಆರ್ ಪಿಎಫ್ ಯೋಧನಿಗೆ ಥಳಿಸುತ್ತಿದ್ದಾರೆ. ಗೆಳೆಯರೇ ಮಾನವೀಯತೆಯ ನೆಲೆಯಲ್ಲಿ ಸಾಧ್ಯವಾದಷ್ಟು ಗ್ರೂಪ್ ಗಳಿಗೆ ಈ ವಿಡಿಯೋ ಕಳುಹಿಸಿ.”
ಆದರೆ ಸತ್ಯಾಂಶಗಳನ್ನು ಅರಿಯದ ಹಲವರು ಈ ವಿಡಿಯೋವನ್ನು ತಮ್ಮ ಟೈಮ್ ಲೈನ್ ಗಳಲ್ಲೂ ಶೇರ್ ಮಾಡಿದ್ದರು. ಆದರೆ ಈ ಘಟನೆಗೂ ಮೇಲೆ ಹೇಳಿರುವಂತಹ ತಲೆಬರಹಕ್ಕೂ ಯಾವುದ ಸಂಬಂಧವಿರಲಿಲ್ಲ. ಈ ಮೊದಲು ಎರಡು ಬಾರಿ ಇದೇ ವಿಡಿಯೋ ಬೇರೆ ಬೇರೆ ಹೆಸರಿನಲ್ಲಿ ಶೇರ್ ಆಗಿದ್ದಾಗ Alt News ಈ ಬಗ್ಗೆ ವರದಿ ಮಾಡಿತ್ತು.
ಅವಾಮಿ ಲೀಗ್ ನಾಯಕ ಮೊನೀರ್ ಹುಸೈನ್ ಸರ್ಕಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಬೇಕಾಗಿದ್ದ ಅಬು ಸೈಯದ್ ಎಂಬಾತನ ಮೇಲೆ ತಂಡವೊಂದು ನಡೆಸಿದ್ದ ದಾಳಿಯ ವಿಡಿಯೋ ಇದಾಗಿತ್ತು. ಬಾಂಗ್ಲಾದೇಶದ ಕೂಮಿಲ್ಲಾ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು.