ಗೋಹತ್ಯೆ ವಿವಾದ: ಒಗ್ಗಟ್ಟಿಗೆ ಕೇರಳ ಸಿಎಂ ಕರೆ

Update: 2017-05-30 03:33 GMT

ತಿರುವನಂತಪುರ, ಮೇ 30: ಜಾನುವಾರು ಸಂತೆಗಳಲ್ಲಿ, ಕಸಾಯಿಖಾನೆಗಳಿಗೆ ಹಸುಗಳ ಮಾರಾಟವನ್ನು ನಿಷೇಧಿಸುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ, "ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದದ್ದು; ಪ್ರಜಾಪ್ರಭುತ್ವ ವಿರೋಧಿ ಹಾಗೂ ಜಾತ್ಯತೀತ ತತ್ವಕ್ಕೆ ವಿರುದ್ಧವಾದದ್ದು" ಇದನ್ನು ವಿರೋಧಿಸಲು ಎಲ್ಲ ಮುಖ್ಯಮಂತ್ರಿಗಳು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಕರೆ ನೀಡಿದ್ದಾರೆ.

ಈ ಸಂಬಂಧ ರಾಜ್ಯಗಳ ಸಲಹೆ ಪಡೆಯದೇ ಕೇಂದ್ರ ಹೊರಡಿಸಿರುವ ಅಧಿಸೂಚನೆಯನ್ನು ವಾಪಸ್ ಪಡೆಯುವಂತೆ ಎಲ್ಲ ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಇದು ರಾಜ್ಯ ಶಾಸನ ಸಭೆಗಳ ಅಧಿಕಾರ ವ್ಯಾಪ್ತಿಯ ಸ್ಪಷ್ಟ ಉಲ್ಲಂಘನೆ ಎಂದು ಅವರು ಕೇಂದ್ರಕ್ಕೆ ಬರೆದ ಪತ್ರದಲ್ಲಿ ಆಕ್ಷೇಪಿಸಿದ್ದಾರೆ.

ಜನಪ್ರತಿನಿಧಿಗಳನ್ನೂ ಗಣನೆಗೆ ತೆಗೆದುಕೊಳ್ಳದೇ ಮತ್ತು ಸಾರ್ವಜನಿಕವಾಗಿ ವಿಷಯವನ್ನು ಚರ್ಚಿಸದೇ ಇಂಥ ವೈಪರೀತ್ಯದ ಕ್ರಮವನ್ನು ಜಾರಿಗೊಳಿಸಿರುವುದರಿಂದ ಗಂಭೀರ ಪರಿಣಾಮಗಳು ಎದುರಾಗಲಿವೆ. ಇದು ಸಂವಿಧಾನದ ಮೂಲ ಸ್ವರೂಪ ಎನಿಸಿದ ಪ್ರಜಾಪ್ರಭುತ್ವ ತತ್ವಗಳ ಅಣಕ ಎಂದು ಟೀಕಿಸಿದ್ದಾರೆ.

"ಈ ವಿಚಾರ ನೇರವಾಗಿ ರಾಜ್ಯ ಪಟ್ಟಿಯಲ್ಲಿ ಸೇರಿದ್ದು, ರಾಜ್ಯ ಶಾಸನ ಸಭೆಗಳ ವ್ಯಾಪ್ತಿಯಲ್ಲಿ ಬರುವಂಥದ್ದು. ಇದಕ್ಕೆ ಸಂಬಂಧಿಸಿದ ಕಾನೂನು ಹಾಗೂ ನೀತಿಗಳನ್ನು ಆಯಾ ರಾಜ್ಯಗಳ ಸಮಾಜಿಕ, ಆರ್ಥಿಕ ಅಂಶಗಳ ಆಧಾರದಲ್ಲಿ ರೂಪಿಸಲು ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡಬೇಕಿತ್ತು" ಎಂದು ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News