×
Ad

ಕೇರಳಕ್ಕೆ ಇಂದು ಮುಂಗಾರು ಮಳೆ ನಿರೀಕ್ಷೆ

Update: 2017-05-30 09:10 IST

ಹೊಸದಿಲ್ಲಿ, ಮೇ 30: ನೈರುತ್ಯ ಮುಂಗಾರು ಮಾರುತ ಮಂಗಳವಾರ ಕೇರಳದ ಕರಾವಳಿ ಹಾಗೂ ಈಶಾನ್ಯ ಭಾರತಕ್ಕೆ ಏಕಕಾಲಕ್ಕೆ ಅಪ್ಪಳಿಸುವ ನಿರೀಕ್ಷೆ ಇದೆ ಎಂದು ಭಾರತದ ಹವಾಮಾನ ಮುನ್ಸೂಚನೆ ಇಲಾಖೆ ಹೇಳಿದೆ.

ಸಾಮಾನ್ಯವಾಗಿ ಕೇರಳಕ್ಕೆ ಮುಂಗಾರು ಪ್ರವೇಶಿಸಿದ ಕೆಲ ದಿನಗಳ ಬಳಿಕ ಈಶಾನ್ಯ ರಾಜ್ಯಗಳಿಗೆ ಮುಂಗಾರು ಆಗಮನವಾಗುತ್ತದೆ. ಆದರೆ ಮೋರಾ ಚಂಡಮಾರುತ ಬಂಗಾಳ ಕೊಲ್ಲಿಯಿಂದ ಉತ್ತರಕ್ಕೆ ಚಲಿಸುತ್ತಿರುವ ಹಿನ್ನೆಲೆಯಲ್ಲಿ ಕೇರಳದ ಜತೆಜತೆಗೇ ಈಶಾನ್ಯ ರಾಜ್ಯಗಳಿಗೂ ಮುಂಗಾರು ಪ್ರವೇಶಿಸಲಿದೆ.

ಮೋರಾ ಇನ್ನಷ್ಟು ತೀವ್ರಗೊಂಡು, ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ನಾಳೆ ಮಧ್ಯಾಹ್ನ ವೇಳೆಗೆ ಭೀಕರ ವಾಯುಭಾರ ಕುಸಿತಕ್ಕೆ ಕಾರಣವಾಗಲಿದೆ. ಬಳಿಕ ಅದು ಈಶಾನ್ಯ ರಾಜ್ಯಗಳ ಉತ್ತರ ದಿಕ್ಕಿನತ್ತ ಚಲಿಸಲಿದೆ ಎಂದು ಅಂದಾಜು ಮಾಡಲಾಗಿದೆ. ಮಂಗಳವಾರ ಹಾಗೂ ಬುಧವಾರ ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಪಶ್ಚಿಮ ಬಂಗಾಳ ಹಾಗೂ ಅಂಡಮಾನ್ ನಿಕೋಬಾರ್ ದ್ವೀಪದ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

"ಮಂಗಳವಾರ ಕೇರಳ ಹಾಗೂ ಈಶಾನ್ಯ ರಾಜ್ಯಗಳಿಗೆ ಮುಂಗಾರು ಪ್ರವೇಶವಾಗಲಿದ್ದು, ಮುಂದಿನ 24 ಗಂಟೆಗಳಲ್ಲಿ ತಮಿಳುನಾಡಿನ ಕೆಲ ಪ್ರದೇಶಕ್ಕೂ ಇದು ಚಲಿಸಲಿದೆ. ಸಾಮಾನ್ಯವಾಗಿ ಜೂನ್ 1ರಂದು ಕೇರಳಕ್ಕೆ ಮುಂಗಾರು ಪ್ರವೇಶವಾಗಲಿದ್ದು, ಈ ಬಾರಿ ಎರಡು ದಿನ ಮುಂಚಿತವಾಗಿ ಆಗಮಿಸುವ ಸಾಧ್ಯತೆ ಇದೆ" ಎಂದು ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರದ ಮುಖ್ಯಸ್ಥ ಎಂ.ಮಹೋಪಾತ್ರ ಸ್ಪಷ್ಟಪಡಿಸಿದ್ದಾರೆ.

ಜೂನ್ ಮೊದಲ ವಾರ ಮುಂಗಾರು ಮಾರುತ ಪಶ್ಚಿಮ ಕರಾವಳಿ ಹಾಗೂ ದಕ್ಷಿಣ ಪರ್ಯಾಯ ದ್ವೀಪದಲ್ಲಿ ಹರಡುವ ಸಾಧ್ಯತೆ ಇದ್ದು, ಕರ್ನಾಟಕದ ಒಳನಾಡು ಹಾಗೂ ಮಹಾರಾಷ್ಟ್ರದಲ್ಲಿ ಮಳೆಯಾಗಲಿದೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News