ಜಿಲ್ಲಾಧಿಕಾರಿ ಕಚೇರಿಯಲ್ಲೇ ಆತ್ಮಾಹುತಿಗೆ ಯತ್ನ

Update: 2017-05-30 04:13 GMT

ಕರೀಂ ನಗರ, ಮೇ 30: ಜನರು ತಮ್ಮ ಅಹವಾಲುಗಳನ್ನು ನೇರವಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ತೆಲಂಗಾಣ ಸರ್ಕಾರ ಕ್ರಮ ಕೈಗೊಂಡಿದ್ದು, ಇದಕ್ಕಾಗಿ ’ಪ್ರಜಾವಾಣಿ’ ಎಂಬ ಅಹವಾಲು ಸ್ವೀಕಾರ ಘಟಕ ಆರಂಭಿಸಿದೆ. ಆದರೆ ಈ ಕೇಂದ್ರಕ್ಕೆ 32 ಬಾರಿ ಭೇಟಿ ನೀಡಿದರೂ ಸಮಸ್ಯೆ ಬಗೆಹರಿಯದೇ ಹತಾಶರಾದ 70 ವರ್ಷದ ಹಿರಿಯ ನಾಗರಿಕರೊಬ್ಬರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿದ ಘಟನೆ ನಡೆದಿದೆ.

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿ ಸೋಮವಾರ 'ಪ್ರಜಾವಾಣಿ' ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯುತ್ತದೆ. ಆದರೆ ಕಳೆದ ಕೆಲ ತಿಂಗಳುಗಳಲ್ಲಿ 32 ಬಾರಿ ಈ ಕೇಂದ್ರಕ್ಕೆ ಭೇಟಿ ನೀಡಿದರೂ, ತಮ್ಮ ದೂರು ಪರಿಹಾರವಾಗುವ ನಿರೀಕ್ಷೆಯೇ ಇಲ್ಲ ಎಂದು ಹತಾಶರಾದ ತರಕಾರಿ ವ್ಯಾಪಾರಿ ಕನ್ನಂ ವೆಂಕಟಯ್ಯ ಎಂಬುವವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಮುಂದಾದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ವೆಂಕಟಯ್ಯ ಅವರಿಗೆ ಹುಟ್ಟೂರು ರಾಂಪುರ ಗ್ರಾಮದಲ್ಲಿ 35 ಗುಂಟೆ ಜಮೀನು ಇದೆ. ಆದರೆ ಅವರ ಸಂಬಂಧಿಕರು ಅದನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಸಮುದಾಯದ ಮುಖಂಡರ ಮಧ್ಯಪ್ರವೇಶದ ಬಳಿಕವೂ ಅದನ್ನು ವಾಪಸ್ ಪಡೆಯಲು ವಿಫಲರಾದ ಅವರು, ಜಿಲ್ಲಾಡಳಿತದ ಮೊರೆ ಹೋಗಿದ್ದರು. ತಮ್ಮ ಭೂಮಿ ಮರಳಿ ಪಡೆಯಲು ಹರಸಾಹಸ ಮಾಡಿದ ಅವರು 32 ಬಾರಿ ಈ ಕೇಂದ್ರಕ್ಕೆ ಭೇಟಿ ನೀಡಿದರೂ ಸ್ಪಂದನೆ ದೊರಕಲಿಲ್ಲ. ಆದರೆ ಇಂಥ ಘಟನೆ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಜಿಲ್ಲಾ ಕಂದಾಯ ಅಧಿಕಾರಿ ಆಯೆಷಾ ಮಸ್ರತ್ ಖಾನ್ ಹೇಳಿದ್ದಾರೆ.

ಕರೀಂನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂಥ ಆತ್ಮಹತ್ಯೆ ಯತ್ನ ನಡೆಯುತ್ತಿರುವುದು ಕಳೆದ ಒಂದು ತಿಂಗಳಲ್ಲಿ ಇದು ಎರಡನೇ ಬಾರಿ. ಅಂಗವಿಕಲರೊಬ್ಬರನ್ನು ವಿವಾಹವಾದ ಜಾನಕಿ ಎಂಬ ಮಹಿಳೆ ಉದ್ಯೋಗ ನೀಡುವಂತೆ ಜಿಲ್ಲಾಡಳಿತಕ್ಕೆ ಮಾಡಿಕೊಂಡ ಮನವಿ ವಿಫಲವಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News