ಮುಸ್ಕಾನ್ ಅಬ್ದುಲ್ಲಾಗೆ ಐಸಿಎಸ್‌ಇ ಹತ್ತನೆ ತರಗತಿ ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ಸ್ಥಾನ

Update: 2017-05-30 05:22 GMT

ಪುಣೆ, ಮೇ 30: ಐಸಿಎಸ್‌ಇ ಹತ್ತನೆ ತರಗತಿ ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ಸ್ಥಾನ ಪಡೆದಿರುವ ಮುಸ್ಕಾನ್ ಅಬ್ದುಲ್ಲಾ ಪಠಾಣ್ ಗೆ ತಾನು ಟಾಪರ್ ಎಂಬುದನ್ನು ನಂಬಲು 30 ನಿಮಿಷಗಳೇ ಬೇಕಾದವು. ಹದಪ್ಸರ್ ನಿವಾಸಿಯಾದ ಈ 15 ವರ್ಷದ ಬಾಲಕಿ ಪರೀಕ್ಷೆಯಲ್ಲಿ ಶೇ.99.4 ಅಂಕಗಳನ್ನು ಗಳಿಸಿದ್ದು, ತಾನು ಟಾಪರ್ ಹೌದೇ ಎಂಬ ಸುದ್ದಿಯನ್ನು ದೃಢಪಡಿಸಲು ಸಾಧ್ಯವಿರುವ ಎಲ್ಲಾ ವೆಬ್ ತಾಣಗಳನ್ನೂ ಜಾಲಾಡಿದ್ದಳು.

‘‘ಎಂಟನೆ ತರಗತಿ ತನಕ ನಾನು ನನ್ನ ಶಾಲೆಯ ಟಾಪ್ ಹತ್ತು ವಿದ್ಯಾರ್ಥಿಗಳಲ್ಲೂ ಒಬ್ಬಳಾಗಿರಲಿಲ್ಲ. ಆದರೆ ಒಂಬತ್ತನೇ ತರಗತಿಯಲ್ಲಿ ನಾನು ಶಾಲೆಯ ಟಾಪರ್ ಆಗಿಬಿಟ್ಟೆ. ಆಗ ನಾನು ಹತ್ತನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಆಗಬೇಕೆಂಬ ಉದ್ದೇಶದಿಂದ ಕಲಿಯಲಾರಂಭಿಸಿದೆ. ಆದರೆ ನಾನು ದೇಶಕ್ಕೇ ಮೊದಲ ಸ್ಥಾನ ಪಡೆಯುತ್ತೇನೆಂದು ತಿಳಿದಿರಲಿಲ್ಲ. ಅವರು ನನಗೆ ಈ ಬಗ್ಗೆ ಹೇಳಿದಾಗ ‘ಅದು ಹೇಗೆ ಸಾಧ್ಯ’ ಎಂದುಕೊಂಡೆ. ನನ್ನ ಶಾಲೆಯಿಂದಲೇ ಕರೆ ಬರುವ ತನಕ ನಾನು ನಂಬಲಿಲ್ಲ’’ ಎನ್ನುತ್ತಾಳೆ ಮುಸ್ಕಾನ್.

ವೈದ್ಯೆಯಾಗಬೇಕೆಂಬ ಕನಸು ಹೊತ್ತಿರುವ ಮುಸ್ಕಾನ್ ಳ ತಾಯಿ ಶಕೀರಾ ಕೂಡ ಒಬ್ಬರು ವೈದ್ಯೆಯಾಗಿದ್ದಾರೆ. ತಂದೆ ಅಬ್ದುಲ್ಲಾ ಪಠಾಣ್ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ. ಮುಸ್ಕಾನ್ ಈಗಾಗಲೇ ನೀಟ್ ಪರೀಕ್ಷೆಗಾಗಿ ತಯಾರಿ ನಡೆಸಲು ಟ್ಯುಟೋರಿಯಲ್ ಒಂದನ್ನು ಸೇರಿದ್ದಾಳೆ.

‘‘ನಮ್ಮ ಕುಟುಂಬದಲ್ಲಿ ಒಟ್ಟು 14 ವೈದ್ಯರಿದ್ದಾರೆ. ಅವರಲ್ಲೊಬ್ಬರು ಮಹಾರಾಷ್ಟ್ರದಲ್ಲಿದ್ದು, ಚಿನ್ನದ ಪದಕ ವಿಜೇತರಾಗಿದ್ದಾರೆ. ಆದುದರಿಂದ ಮುಸ್ಕಾನ್ ವೈದ್ಯೆಯಾಗಬೇಕೆಂಬ ಕನಸು ಹೊತ್ತಿರುವುದು ಸಹಜ’’ ಎಂದು ಆಕೆಯ ತಂದೆ ಹೇಳುತ್ತಾರೆ.

ಪುಣೆಯ ಹಚ್ಚಿಂಗ್ಸ್ ಸ್ಕೂಲ್ ವಿದ್ಯಾರ್ಥಿನಿಯಾಗಿರುವ ಮುಸ್ಕಾನ್ ಇಂಗ್ಲಿಷಿನಲ್ಲಿ 99, ಹಿಂದಿಯಲ್ಲಿ 97, ಸಮಾಜ ವಿಜ್ಞಾನದಲ್ಲಿ 99, ಗಣಿತ, ವಿಜ್ಞಾನ ಹಾಗೂ ವಾಣಿಜ್ಯ ವಿಷಯಗಳಲ್ಲಿ 100 ಅಂಕಗಳನ್ನು ಗಳಿಸಿದ್ದಾಳೆ.

ತನ್ನ ನಿರ್ವಹಣೆಯಿಂದ ಮುಸ್ಕಾನ್ ಗೆ ಖುಷಿಯಾಗಿದ್ದರೂ ಬಹಳಷ್ಟು ಶ್ರಮಪಟ್ಟು ಓದಿದ್ದ ಸಮಾಜ ವಿಜ್ಞಾನದಲ್ಲಿ ಆಕೆಗೆ ಶೇ.100 ಅಂಕ ದೊರೆತಿಲ್ಲವೆಂಬ ನಿರಾಸೆಯಿದೆ.

ಉತ್ತಮ ಈಜುಪಟು ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿಯೂ ಆಗಿರುವ ಮುಸ್ಕಾನ್ ಕಲಿಕೆಯ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿಯಿಂದ ಭಾಗವಹಿಸುತ್ತಾಳೆ. ತಾನು ಪ್ರತೀದಿನ ಐದರಿದ ಆರು ಗಂಟೆಗಳ ತನಕ ಓದಿರುವುದಾಗಿ ಹೇಳುವ ಮುಸ್ಕಾನ್, ತೀರಾ ಒತ್ತಡದಿಂದ ಕಲಿಕೆ ನಡೆಸದಂತೆ ಇತರ ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಾಳೆ.

ಮುಸ್ಕಾನ್ ಳ ಹೆತ್ತವರಿಗೂ ತಮ್ಮ ಬಂಧು, ಬಳಗ ಸ್ನೇಹಿತ ವರ್ಗದಿಂದ ಶುಭಾಶಯ ಕೋರುವ ಕರೆಗಳು ಬರುತ್ತಲೇ ಇದ್ದು, ತಮ್ಮ ಮಗಳು ಟಾಪರ್ ಆಗುತ್ತಾಳೆಂದು ತಾವು ನಿರೀಕ್ಷಿಸಿರಲೇ ಇಲ್ಲ ಎಂದು ಹೇಳುತ್ತಾರೆ.

ಮುಂಬೈಯಲ್ಲಿ ಕೆಲಸ ಮಾಡುವ ಮುಸ್ಕಾನ್ ತಂದೆ ವಾರಾಂತ್ಯದಲ್ಲಿ ಮನೆಗೆ ಬರುತ್ತಾರೆ. ಆಕೆಯ ಪರೀಕ್ಷೆಯ ಸಮಯ ರಜೆ ಹಾಕಿ ಮನೆಯಿಂದ ಒಂದು ಗಂಟೆ ಪ್ರಯಾಣವಿರುವ ಪರೀಕ್ಷಾ ಕೇಂದ್ರಕ್ಕೆ ಆಕೆಯನ್ನು ತಲುಪಿಸಿ ಅಲ್ಲಿಂದ ಹಿಂದಕ್ಕೆ ತರುವ ಸಲುವಾಗಿ ರಜೆ ಹಾಕಿದ್ದರು.

ಮುಖ್ಯ ಪರೀಕ್ಷೆಯ ಮುನ್ನ ನಡೆದ ಪೂರ್ವತಯಾರಿ ಪರೀಕ್ಷೆಯಲ್ಲಿ ತಾನು ಶೇ.60 ಅಂಕಗಳನ್ನು ಪಡೆದು ತರಗತಿಯಲ್ಲಿ ಮೂರನೇ ಸ್ಥಾನ ಪಡೆದಿದ್ದನ್ನು ನೆನಪಿಸುತ್ತಾಳೆ ಮುಸ್ಕಾನ್. ದೃಢಚಿತ್ತತೆಯಿಂದ ಹಾಗೂ ಏಕಾಗ್ರತೆಯಿಂದ ಓದಿದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಮುಸ್ಕಾನ್ ಉದಾಹರಣೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News