ಬೀಫ್ ಫೆಸ್ಟ್ ಬಗ್ಗೆ ಆಕ್ಷೇಪಿಸಲು ಗೋಹತ್ಯೆಯ ನಕಲಿ ಫೋಟೋ ಬಳಸಿದ ಕೇರಳ ಬಿಜೆಪಿ ನಾಯಕ !

Update: 2017-05-30 06:06 GMT

ತಿರುವನಂತಪುರಂ, ಮೇ 30: ಕೇರಳದ ಹಿರಿಯ ಬಿಜೆಪಿ ನಾಯಕ ಕೆ.ಸುರೇಂದ್ರನ್ ತಮ್ಮ ಅಧಿಕೃತ ಫೇಸ್ ಬುಕ್ ಪುಟದಲ್ಲಿ ಕೇರಳದ ಸಾರ್ವಜನಿಕ ಸ್ಥಳಗಳಲ್ಲಿ ಹತ್ಯೆಗೈಯಲಾಗಿತ್ತೆಂದು ಹೇಳಿಕೊಂಡು ಪೋಸ್ಟ್ ಮಾಡಿದ್ದ ಸತ್ತು ಬಿದ್ದ ದನಗಳು ಕಾಣಿಸುತ್ತಿರುವ ಫೋಟೋ ಒಂದು ವೈರಲ್ ಆಗಿದ್ದರೆ, ಇದೀಗ ಅವರು ನಕಲಿ ಫೋಟೋ ಬಳಸಿದ್ದರೆಂಬ ಮಾಹಿತಿ ಬಹಿರಂಗವಾಗಿದೆ.

ಸಾರ್ವಕನಿಕ ಸ್ಥಳಗಳಲ್ಲಿ ದನಗಳನ್ನು ಕಡಿಯಬಾರದೆಂಬ ಅವರ ಮಾತು ಒಪ್ಪತಕ್ಕಂತಹುದೇ ಆಗಿದ್ದರೂ ಅವರು ತಮ್ಮ ಫೇಸ್ ಬುಕ್ ಪೋಸ್ಟ್ ಗಾಗಿ ಉಪಯೋಗಿಸಿದ ಫೋಟೋ ಹಳೆಯದಾಗಿದ್ದು, ಕೇಂದ್ರ ಸರಕಾರದ ಗೋಹತ್ಯೆ ನಿಷೇಧ ನಿಯಮದ ವಿರುದ್ಧ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೂ ಅದಕ್ಕೂ ಏನೂ ಸಂಬಂಧವಿಲ್ಲ ಎಂದು ಆಲ್ಟ್ ನ್ಯೂಸ್ ವರದಿಯೊಂದು ಹೇಳಿದೆ. ಈ ಫೋಟೋ ಅನ್ನು ಹಲವಾರು ಬಾರಿ ಹಿಂದೆ ಕೂಡ ತಪ್ಪು ತಪ್ಪಾದ ಕ್ಯಾಪ್ಶನ್ ಗಳೊಂದಿಗೆ ಉಪಯೋಗಿಸಲಾಗಿದೆ ಎಂದೂ ಹೇಳಲಾಗಿದೆ.

ಅಕ್ಟೋಬರ್ 28, 2011ರಲ್ಲಿ ಇದೇ ಫೋಟೋವನ್ನು ಗೂಗಲ್ ಪ್ಲಸ್ ನಲ್ಲಿ ಸುಭಶಿಶ್ ಚಕ್ರವರ್ತಿ ಎಂಬವರು ‘‘ರಾಜಕುಮಾರಿ ಮಾಯಾವತಿ ಅವರ ಅನುಮತಿಯೊಂದಿಗೆ ಉತ್ತರಪ್ರದೇಶದಲ್ಲಿ ಗೋ ಹತ್ಯೆ, ಈ ರೀತಿ, ಬಹಿರಂಗವಾಗಿ’’ ಎಂದು ಬರೆದಿದ್ದರು.

ಫೋಟೋವನ್ನು ಹೆಚ್ಚಿನ ರೆಸೊಲ್ಯೂಶನ್ ನಲ್ಲಿ ಗಮನಿಸಿದಾಗ ಹಿನ್ನೆಲೆಯಲ್ಲಿರುವ ಅಂಗಡಿಗಳ ನಾಮಫಲಕದಲ್ಲಿ ಬಂಗಾಳಿ ಭಾಷೆಯಲ್ಲಿ ಬರೆಯಲಾಗಿದ್ದು, ಈ ದನಗಳನ್ನು ಪಶ್ಚಿಮ ಬಂಗಾಳ ಯಾ ಬಾಂಗ್ಲಾದೇಶದಲ್ಲಿ ಈದ್ ಸಂದರ್ಭ ಬಲಿ ನೀಡಲಾಗಿರಬಹುದು ಎಂದು ಅಂದಾಜಿಸಬಹುದಾಗಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಇಂತಹ ಘಟನೆ ನಡೆದಿದ್ದರೆ ಅದು ಭಾರೀ ಸುದ್ದಿಯಾಗುವ ಸಾಧ್ಯತೆಯಿದ್ದುದರಿಂದ ಈ ಚಿತ್ರ ಬಾಂಗ್ಲಾದೇಶದ್ದಾಗಿರುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.

ಈ ಚಿತ್ರ 2009ರಿಂದ ವಿವಿಧ ಕಾರಣಗಳಿಗಾಗಿ ಉಪಯೋಗಿಸಲಾಗುತ್ತಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News