" ನಾನು ನೋಡಿದ ಅತ್ಯಂತ ಅನೈತಿಕ ಪತ್ರಕರ್ತ ಅರ್ನಬ್ ಗೋಸ್ವಾಮಿ ": ಯೋಧನ ಪುತ್ರ, ಕೇರಳ ಸಂಸದನ ಫೇಸ್ ಬುಕ್ ಪೋಸ್ಟ್ ವೈರಲ್

Update: 2017-05-30 08:56 GMT

ಪಾಲಕ್ಕಾಡ್,ಮೇ 30 : ಅರ್ನಬ್ ಗೋಸ್ವಾಮಿಯ ರಿಪಬ್ಲಿಕ್ ಟಿವಿಯಲ್ಲಿನ ಚರ್ಚಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿರುವ ಕೇರಳದ ಪಾಲಕ್ಕಾಡ್ ಕ್ಷೇತ್ರದ ಸಂಸದ ಎಂ ಬಿ ರಾಜೇಶ್ ಅರ್ನಬ್ ಗೆ ಬಹಿರಂಗ ಪತ್ರವೊಂದನ್ನು ಬರೆದು ಅದನ್ನು ಫೇಸ್ ಬುಕ್ ನಲ್ಲಿಯೂ ಪೋಸ್ಟ್ ಮಾಡಿ ‘‘ನಾನು ನೋಡಿದ ಅತ್ಯಂತ ಅನೈತಿಕ ಪತ್ರಕರ್ತ ಅರ್ನಬ್ ಗೋಸ್ವಾಮಿ’’ ಎಂದು ಅವರನ್ನು ಜರಿದಿದ್ದಾರೆ. ಅರ್ನಬ್ ಅವರ ಅನಾಗರಿಕ ವರ್ತನೆಯನ್ನು ಟೀಕಿಸಿರುವ ರಾಜೇಶ್ ಅವರು ಬದ್ಧತೆ ಮತ್ತು ವಿಶ್ವಸನೀಯತೆಯ ಕೊರತೆ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಪತ್ರ ಇದೀಗ ವೈರಲ್ ಆಗಿದೆ.

ಮೇ 26ರಂದು ರಿಪಬ್ಲಿಕ್ ಟಿವಿಯ ಚರ್ಚಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ರಾಜೇಶ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಅವರಿಗೆ ನರೇಂದ್ರ ಮೋದಿ ಸರಕಾರದ ಮೂರು ವರ್ಷಗಳ ಆಡಳಿತದ ಬಗೆಗಿನ ಚರ್ಚೆಯೆಂದು ಹೇಳಲಾಗಿತ್ತಾದರೂ ಕೊನೆಯ ಕ್ಷಣದಲ್ಲಿ ಚರ್ಚೆಯ ವಿಚಯವನ್ನು ಬದಲಾಯಿಸಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರು ಸೇನೆಯ ಬಗ್ಗೆ ನೀಡಿದ ಹೇಳಿಕೆಯನ್ನು ಸಮರ್ಥಿಸಲು ಹೇಳಲಾಗಿತ್ತೆಂದು ರಾಜೇಶ್ ತಮ್ಮ ಬಹಿರಂಗ ಪತ್ರದಲ್ಲಿ ಹೇಳಿಕೊಂಡಿದ್ದಾರೆ.

‘‘ನಾನು ಆ ಚರ್ಚಾ ಕಾರ್ಯಕ್ರಮವನ್ನು ಬಹಿಷ್ಕರಿಸಬಹುದಾಗಿತ್ತಾದರೂ ಹಾಗೆ ಮಾಡಿದ್ದೇ ಆದರೆ ನನ್ನ ಅನುಪಸ್ಥಿತಿಯಲ್ಲಿ ನಾನು ಕಾರ್ಯಕ್ರಮದಿಂದ ಓಡಿ ಹೋದೆ ಎಂದು ಅವರ ಸತತವಾಗಿ ಅರಚಬಹುದೆಂದು ತಿಳಿದಿದ್ದೆ. ಇಂತಹ ಒಂದು ಸನ್ನಿವೇಶವನ್ನು ತಪ್ಪಿಸಲೆಂದೇ ನಾನು ಆ ಕಾರ್ಯಕ್ರಮದಲ್ಲಿದ್ದು ನನ್ನ ಅಭಿಪ್ರಾಯ ವ್ಯಕ್ತಪಡಿಸಿದೆ’’ ಎಂದು ರಾಜೇಶ್ ಬರೆದಿದ್ದಾರೆ.

ಬಾಲಕೃಷ್ಣನ್ ಅವರ ಹೇಳಿಕೆ ಸೇನೆಯ ವಿರುದ್ಧವಲ್ಲ, ಬದಲಾಗಿ ಸೇನಾ ಪಡೆಗಳ ವಿಶೇಷ ರಕ್ಷಣಾ ಕಾಯಿದೆಯನ್ವಯ ನಡೆಯುವ ದೌರ್ಜನ್ಯದ ವಿರುದ್ಧವಾಗಿತ್ತು ಎಂದರು.

‘‘ನಿಮ್ಮ ಇತಿಹಾಸದ ಜ್ಞಾನ ಪ್ರಾಥಮಿಕ ಶಾಲೆಯ ಮಗುವಿನ ಜ್ಞಾನಕ್ಕಿಂತಲೂ ಕಡಿಮೆಯಾಗಿದೆ’’ ಎಂದು ರಾಜೇಶ್ ಅರ್ನಬ್ ಅವರನ್ನು ಟೀಕಿಸಿದ್ದಲ್ಲದೆ ತಾನೊಬ್ಬ ಮಾಜಿ ಯೋಧನ ಹೆಮ್ಮೆಯ ಪುತ್ರ ಎಂದು ಹೇಳಿಕೊಂಡಿದ್ದಾರೆ. ಸೇನೆಯ ಹೆಸರಿನಲ್ಲಿ ಇಷ್ಟೆಲ್ಲಾ ಮಾಡಿರುವ ನೀವು ಸೇನೆಗಾಗಿ ಏನು ಮಾಡಿದ್ದೀರಿ?’’ ಎಂದೂ ರಾಜೇಶ್ ಅರ್ನಬ್ ಅವರನ್ನು ಪ್ರಶ್ನಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News