ಮೇರು ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ರ ಕಿರುಪರಿಚಯ
ಬೆಂಗಳೂರು, ಮೇ 31: ವರನಟ ಡಾ.ರಾಜ್ ಕುಮಾರ್ ಅವರ ಪತ್ನಿ, ನಿರ್ಮಾಪಕಿ, ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯ ಮಾಲಕಿ ಪಾರ್ವತಮ್ಮ ರಾಜ್ ಕುಮಾರ್ ಇಂದು ಮುಂಜಾನೆ 4:30ರ ಸುಮಾರಿಗೆ ನಿಧನರಾಗಿದ್ದಾರೆ. ಚಿತ್ರರಂಗದ ಹಿರಿಯ, ಕಿರಿಯ ಕಲಾವಿದರು, ನಿರ್ಮಾಪಕ, ನಿರ್ದೇಶಕರಿಗೆ ಮಾರ್ಗದರ್ಶನ ನೀಡುವ ಮೂಲಕ ಚಿತ್ರೋದ್ಯಮದ ಬೆಳವಣಿಗೆಗೆ ಶ್ರಮಿಸಿದ್ದ ಪಾರ್ವತಮ್ಮರ ಕಿರುಪರಿ
ಮೈಸೂರು ಜಿಲ್ಲೆ ಕೆ.ಆರ್.ನಗರದಲ್ಲಿ 1939ರಲ್ಲಿ ಜನಿಸಿದ ಪಾರ್ವತಮ್ಮ ಡಾ.ರಾಜ್ ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಸಹೋದರಿಯ ಪುತ್ರಿ. ಡಾ.ರಾಜ್ ನಾಟಕ ರಂಗದಲ್ಲಿ ಸಕ್ರಿಯವಾಗಿದ್ದಾಗಲೇ ಪಾರ್ವತಮ್ಮ ಅವರನ್ನು ವರಿಸಿದ್ದರು. ಪಾರ್ವತಮ್ಮ ಅವರನ್ನು ವಿವಾಹವಾದ ನಂತರವೇ ರಾಜ್ ಚಿತ್ರರಂಗ ಪ್ರವೇಶಿಸಿದ್ದರು. ಆಗಿನಿಂದ ಡಾ.ರಾಜ್ ಅವರ ಚಿತ್ರಗಳ ಕಥೆ, ಕಲಾವಿದರು ಹಾಗೂ ಇತರ ಆಯ್ಕೆಗಳಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಹಾಗೂ ರಾಜ್ ಅವರ ಸಹೋದರ ವರದರಾಜ್ ಪ್ರಮುಖ ಪಾತ್ರವಹಿಸಿದರು. ಈ ಮೂಲಕ ಅನೇಕ ಯಶಸ್ವಿ ಚಿತ್ರಗಳನ್ನು ಡಾ.ರಾಜ್ ನೀಡಿದ್ದರು.
ರಾಜ್ ಕುಮಾರ್ ಅಭಿನಯದ "ಬಂಗಾರದ ಮನುಷ್ಯ" ಚಿತ್ರದ ನಂತರ ಪಾರ್ವತಮ್ಮ ನವರು ಪೂರ್ಣಿಮಾ ಎಂಟರ್ ಪ್ರೈಸಸ್ ಮತ್ತು ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಗಳನ್ನು ಹುಟ್ಟು ಹಾಕಿ, ಚಿತ್ರ ನಿರ್ಮಾಣ ಹಾಗೂ ವಿತರಣೆಯ ಹೊಣೆ ವಹಿಸಿಕೊಂಡರು. ಪಾರ್ವತಮ್ಮನವರು ನಿರ್ಮಿಸಿದ ಮೊದಲ ಚಿತ್ರ "ತ್ರಿಮೂರ್ತಿ" ದೊಡ್ಡಮಟ್ಟದ ಯಶಸ್ಸನ್ನು ಕಂಡಿತು. ಹಾಲುಜೇನು, ಜೀವನಚೈತ್ರ, ಕವಿರತ್ನ ಕಾಳಿದಾಸ ಸೇರಿದಂತೆ 80ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ ಕೀರ್ತಿ ಪೂರ್ಣಿಮಾ ಎಂಟರ್ ಪ್ರೈಸಸ್ ನದ್ದು.
ಚಿತ್ರರಂಗಕ್ಕೆ ಅವರು ಸಲ್ಲಿಸಿದ ಶ್ರೇಷ್ಠ ಸೇವೆಯನ್ನು ಗುರುತಿಸಿ ರಾಜ್ಯ ಸರಕಾರ "ಕನ್ನಡ ರಾಜ್ಯೋತ್ಸವ ಪ್ರಶಸ್ತಿ", "ಜೀವಮಾನ ಸಾಧನೆ ಪುರಸ್ಕಾರ" ನೀಡಿ ಗೌರವಿಸಿದೆ. ಹಲವಾರು ಸಂಘಸಂಸ್ಥೆಗಳು ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
ಪಾರ್ವತಮ್ಮ ನಿಧನಕ್ಕೆ ಶೋಕ : ಚಿತ್ರೋದ್ಯಮ ಬಂದ್
ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದಲ್ಲಿ ದುಃಖದ ಛಾಯೆ ಆವರಿಸಿಕೊಂಡಿದ್ದು, ಇಂದು ಕನ್ನಡಚಿತ್ರರಂಗ ಸ್ತಬ್ಧವಾಗಿದೆ. ಯಾವುದೇ ಚಿತ್ರಮಂದಿರಗಳಲ್ಲಿ ಇಂದು ಚಲನಚಿತ್ರ ಪ್ರದರ್ಶನಗಳು ನಡೆದಿಲ್ಲ. ಎಲ್ಲಾ ಚಿತ್ರಗಳ ಶೂಟಿಂಗ್ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕರ್ನಾಟಕಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ತಿಳಿಸಿದ್ದಾರೆ.