ಸಿಸೋದಿಯಾ ಸೂಚನೆಯಂತೆ ಆಪ್ ಶಾಸಕರಿಂದ ತನಗೆ ಥಳಿತ:ಮಾಜಿ ಸಚಿವನ ಆರೋಪ
ಹೊಸದಿಲ್ಲಿ,ಮೇ 31: ದಿಲ್ಲಿ ವಿಧಾನಸಭೆಯು ಬುಧವಾರ ನಾಟಕೀಯ ಘಟನೆಗಳಿಗೆ ಸಾಕ್ಷಿಯಾಯಿತು. ಮಾಜಿ ಸಚಿವ ಹಾಗೂ ಬಂಡುಕೋರ ಆಪ್ ಶಾಸಕ ಕಪಿಲ್ ಮಿಶ್ರಾರನ್ನು ಸದನದಿಂದ ಹೊರಗೆ ಹಾಕುವಂತೆ ಸ್ಪೀಕರ್ ಆದೇಶಿದ ಬೆನ್ನಿಗೇ ಪಕ್ಷದ ಇತರ ಕೆಲವು ಶಾಸಕರು ಅವರ ಮೇಲೆ ಹಲ್ಲೆ ನಡೆಸಿದ್ದು, ಕೊನೆಗೂ ಮಾರ್ಷಲ್‌ಗಳು ಮಿಶ್ರಾರನ್ನು ಸದನದಿಂದ ಹೊರಹಾಕಿದರು.
ಪ್ರಾಥಮಿಕ ವರದಿಗಳು ತಿಳಿಸಿರುವಂತೆ ಉಪಮುಖ್ಯಮಂತ್ರಿ ಮನೀಷ್ ಸಿಸೋದಿಯಾ ಅವರು ದಿಲ್ಲಿಯ ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ತಲೆದೋರಿದೆ ಎಂಬ ಪ್ರತಿಪಕ್ಷ ನಾಯಕ ವಿಜೇಂದರ್ ಗುಪ್ತಾ ಅವರ ಆರೋಪಕ್ಕೆ ಉತ್ತರಿಸುತ್ತಿದ್ದಾಗ ಮಧ್ಯಪ್ರವೇಶಿಸಿದ ಮಿಶ್ರಾ ಆಪ್ ಮತ್ತು ದಿಲ್ಲಿ ಸರಕಾರದ ಭ್ರಷ್ಟಾಚಾರ ಆರೋಪಗಳ ಕುರಿತು ಚರ್ಚಿಸಲು ರಾಮಲೀಲಾ ಮೈದಾನದಲ್ಲಿ ವಿಶೇಷ ಅಧಿವೇಶನವನ್ನು ಕರೆಯುವ ಬಗ್ಗೆ ಸ್ಪೀಕರ್‌ರಿಂದ ಉತ್ತರವನ್ನು ಕೋರಿದ್ದರು.
ಸರದಿ ತಪ್ಪಿಸಿ ಮಾತನಾಡದಂತೆ ಸ್ಪೀಕರ್ ಎಚ್ಚರಿಕೆ ನೀಡಿದಾಗ ವಿಶೇಷ ಅಧಿವೇಶನ ವನ್ನು ಕೋರುವ ಬ್ಯಾನರೊಂದನ್ನು ಮಿಶ್ರಾ ಪ್ರದರ್ಶಿಸಿದ್ದರು. ಇದು ಸದನದ ಘನತೆಗೆ ಅನುಗುಣವಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸ್ಪೀಕರ್, ಮಿಶ್ರಾರನ್ನು ಸದನದಿಂದ ಹೊರಗೆ ಹಾಕುವಂತೆ ಮಾರ್ಷಲ್‌ಗಳಿಗೆ ಆದೇಶಿಸಿದ್ದರು. ಆದರೆ ಮಾರ್ಷಲ್‌ಗಳು ಬರುವ ಮುನ್ನವೇ ಆಪ್ ಶಾಸಕರು ಮತ್ತು ಮಿಶ್ರಾ ನಡುವೆ ಹೊಯ್‌ಕೈ ಆರಂಭ ಗೊಂಡಿತ್ತು. ಮಿಶ್ರಾರನ್ನು ಮಾರ್ಷಲ್‌ಗಳು ಹೊರಗೆ ಕರೆದೊಯ್ಯುವ ಮುನ್ನ ಆಪ್ ಶಾಸಕರು ಅವರನ್ನು ತಳ್ಳುತ್ತಿರುವ ಮತ್ತು ಹಲ್ಲೆ ನಡೆಸುತ್ತಿರುವ ದೃಶ್ಯಗಳಿಗೆ ಸದನವು ಸಾಕ್ಷಿಯಾಗಿತ್ತು.
ಘಟನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಿಶ್ರಾ, ತನಗೆ ಥಳಿಸುವಂತೆ ಸಿಸೋದಿಯಾ ನಾಲ್ಕೈದು ಶಾಸಕರಿಗೆ ನಿರ್ದೇಶ ನೀಡಿದ್ದರು ಎಂದು ಆರೋಪಿಸಿದರು.
ಸದಸ್ಯನೋರ್ವನನ್ನು ಸದನದಿಂದ ಹೊರಗೆ ಹಾಕಲು ಸಾಮಾನ್ಯವಾಗಿ ಮಾರ್ಷಲ್ ಗಳನ್ನು ಕರೆಸಲಾಗುತ್ತದೆ. ಶಾಸಕರನ್ನು ಕರೆಸಿದ್ದು ಇದೇ ಮೊದಲ ಬಾರಿಯಾಗಿರಬೇಕು ಎಂದ ಮಿಶ್ರಾ, ಉಪ ರಾಜ್ಯಪಾಲ ಅನಿಲ್ ಬೈಜಾಲ್ ಅವರ ಭೇಟಿಯಾಗಿ ಈ ಘಟನೆಯ ಬಗ್ಗೆ ವಿವರಿಸಲಿದ್ದೇನೆ ಎಂದು ತಿಳಿಸಿದರು.