ತಪ್ಪು ರೈಲು ಹತ್ತಿದ ಮಹಿಳೆಯ ಮೇಲೆ ರೈಲ್ವೆ ಪೊಲೀಸ್ ಸಿಬ್ಬಂದಿಯಿಂದ ಅತ್ಯಾಚಾರ
ಬಿಜ್ನೋರ್,ಮೇ 31: ಸೋಮವಾರ ರಾತ್ರಿ ಲಕ್ನೋ-ಚಂಡಿಗಡ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಹಿಳೆಯ ಮೇಲೆ ಅತ್ಯಾಚಾರ ವೆಸಗಿದ ಆರೋಪದಲ್ಲಿ ಸರಕಾರಿ ರೈಲ್ವೆ ಪೊಲೀಸ್(ಜಿಆರ್‌ಪಿ) ಕಾನ್‌ಸ್ಟೇಬಲ್ ಕಮಲ್ ಶುಕ್ಲಾ ಎಂಬಾತನನ್ನು ಬಂಧಿಸಲಾಗಿದೆ. ಲಕ್ನೋದಿಂದ ಮೀರತ್‌ಗೆ ತಪ್ಪು ರೈಲು ಹತ್ತಿದ್ದ ಅನಾರೋಗ್ಯ ಪೀಡಿತ ಮಹಿಳೆ ಮೀಸಲು ಬೋಗಿಯಲ್ಲಿ ಕುಳಿತಿದ್ದ ಸಂದರ್ಭ ಶುಕ್ಲಾನ ಪಾಶವೀ ಕೃತ್ಯಕ್ಕೆ ಬಲಿಯಾಗಿದ್ದಾಳೆ ಎನ್ನಲಾಗಿದೆ.
ಮಂಗಳವಾರ ಮಧ್ಯಾಹ್ನ ರೈಲು ಬಿಜ್ನೋರ್ ನಿಲ್ದಾಣವನ್ನು ತಲುಪಿದಾಗಷ್ಟೇ ಈ ಘಟನೆ ಬೆಳಕಿಗೆ ಬಂದಿದೆ. ಅಂಗವಿಕಲರಿಗಾಗಿ ಮೀಸಲಾಗಿದ್ದ ಬೋಗಿಯನ್ನು ಒಳಗಿನಿಂದ ಭದ್ರಪಡಿಸಲಾಗಿದ್ದು, ಶುಕ್ಲಾ ಮತ್ತು ಮಹಿಳೆಯನ್ನು ಕಂಡ ಪ್ರಯಾಣಿಕರು ಬಲವಂತದಿಂದ ಬೋಗಿಯ ಬಾಗಿಲು ತೆರೆಸಿದ್ದರು. ಅವರು ಒಳಪ್ರವೇಶಿಸಿ ನೋಡಿದಾಗ ಮಹಿಳೆ ಕೆಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದಳು. ಈ ಸಂದರ್ಭ ಶುಕ್ಲಾ ಪರಾರಿಯಾಗಲು ಯತ್ನಿಸಿದ್ದು, ಆತನನ್ನು ಬೆನ್ನಟ್ಟಿ ಹಿಡಿದ ಜನರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಹಿರಿಯ ಅಧಿಕಾರಿಗಳು ಭಾರೀ ಪೊಲೀಸ್ ಬಲದೊಂದಿಗೆ ನಿಲ್ದಾಣಕ್ಕೆ ಧಾವಿಸಿ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕವಷ್ಟೇ ಉದ್ರಿಕ್ತ ಜನರು ಶಾಂತರಾದರು.
ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಆರು ಗಂಟೆಗಳ ಬಳಿಕ ಆಕೆಗೆ ಪ್ರಜ್ಞೆ ಮರುಕಳಿಸಿದೆ. ನಜೀಬಾಬಾದ್ ಜಿಆರ್‌ಪಿ ಠಾಣೆಯಲ್ಲಿ ಆಕೆ ದಾಖಲಿಸಿರುವ ದೂರಿನ ಮೇರೆಗೆ ಶುಕ್ಲಾನನ್ನು ಬಂಧಿಸಲಾಗಿದ್ದು, ಸೇವೆಯಿಂದ ಅಮಾನತುಗೊಳಿಸಲಾಗಿದೆ.