ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ ಎಂದ ನ್ಯಾಯಾಧೀಶರು ಮಂಡಿಸಿದ ಬ್ರಹ್ಮಚಾರಿ ನವಿಲಿನ ವಾದ!
ರಾಜಸ್ಥಾನ, ಮೇ 31: ರಾಜ್ಯ ಸರಕಾರ ಕೇಂದ್ರ ಸರಕಾರದೊಂದಿಗೆ ಸಹಮತ ವ್ಯಕ್ತಪಡಿಸಬೇಕು ಹಾಗೂ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಲು ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿರುವ ರಾಜಸ್ಥಾನದ ಹೈಕೋರ್ಟ್ ನ ನ್ಯಾಯಾಧೀಶರು ನವಿಲುಗಳ ಸಂತಾನೋತ್ಪತ್ತಿ ಪ್ರಕ್ರಿಯೆಯ ಬಗ್ಗೆ ವಿಚಿತ್ರ ವಾದವೊಂದನ್ನು ಮಂಡಿಸಿ ನಗೆಪಾಟಲಿಗೀಡಾಗಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಜಸ್ಟೀಸ್ ಶರ್ಮಾ, “ಗಂಡು ನವಿಲು ಜೀವನಪರ್ಯಂತ ಬ್ರಹ್ಮಚಾರಿಯಂತೆ ಇದ್ದು, ಹೆಣ್ಣು ನವಿಲಿನೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದಿಲ್ಲ. ಹೆಣ್ಣು ನವಿಲು ಗಂಡು ನವಿಲಿನ ಕಣ್ಣೀರಿನಿಂದ ಗರ್ಭ ಧರಿಸುತ್ತದೆ. ನಂತರವೇ ಹೆಣ್ಣು ಅಥವಾ ಗಂಡು ನವಿಲು ಜನಿಸುತ್ತದೆ” ಎಂದಿದ್ದಾರೆ.
ಗೋವು ಯಾವ ಕಾರಣಕ್ಕಾಗಿ ರಾಷ್ಟ್ರೀಯ ಪ್ರಾಣಿ ಎನ್ನುವುದಕ್ಕೆ ಅರ್ಹವಾಗಿದೆ ಹಾಗೂ ನವಿಲು ಯಾವ ಕಾರಣಕ್ಕಾಗಿ ರಾಷ್ಟ್ರೀಯ ಪಕ್ಷಿ ಎನ್ನುವುದಕ್ಕೆ ಅರ್ಹವಾಗಿದೆ ಎನ್ನುವುದನ್ನು ವಿವರಿಸುವ ಸಂದರ್ಭ ಅವರು ಈ ರೀತಿ ವಿಶ್ಲೇಷಿಸಿದ್ದಾರೆ.
“ನೇಪಾಳ ಹಿಂದೂ ರಾಷ್ಟ್ರವಾಗಿದ್ದು, ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿದೆ. ಭಾರತವು ಕೃಷಿ ಪ್ರಧಾನ ರಾಷ್ಟ್ರವಾಗಿದೆ. 48 ಹಾಗೂ 51ಎ ಪರಿಚ್ಛೇದದ ಪ್ರಕಾರ ದೇಶದಲ್ಲಿ ಗೋವಿಗೆ ಕಾನೂನಾತ್ಮಕ ನೆಲೆ ಕಲ್ಪಿಸಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ” ಎಂದರು.
ಹೆಣ್ಣು ನವಿಲು ಹಾಗೂ ಗಂಡು ನವಿಲು ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ತೊಡಗುವುದಿಲ್ಲ ಎನ್ನುವ ನ್ಯಾಯಾಧೀಶರ ಹೇಳಿಕೆ ನಗೆಪಾಟಲಿಗೀಡಾಗಿದೆ. ಆದರೆ ಹೆಣ್ಣು ಹಾಗೂ ಗಂಡು ನವಿಲು ಎಲ್ಲಾ ಇತರ ಪಕ್ಷಿಗಳಂತೆ ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತವೆ.