ಏರ್‌ಇಂಡಿಯಾ ಮಾರಾಟಕ್ಕೆ ಕೇಂದ್ರ ಸಿದ್ಧತೆ?

Update: 2017-05-31 14:34 GMT

ಹೊಸದಿಲ್ಲಿ, ,ಮೇ 31: ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವ ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿ ಸಕ್ರಿಯವಾಗಿ ಪರಿಶೀಲಿಸುತ್ತಿದ್ದಾರೆಂದು ಈ ಬಗ್ಗೆ ನೇರವಾದ ಮಾಹಿತಿಯನ್ನು ಹೊಂದಿರುವ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ವಿಮಾನಗಳ ಖರೀದಿಗೆ ಸಂಬಂಧಿಸಿ ಏರ್ ಇಂಡಿಯಾ ಹೊಂದಿರುವ 200 ಶತಕೋಟಿ ರೂ.ಗಳ ಸಾಲದ ಬಾಧ್ಯತೆಯನ್ನು ವಹಿಸಿಕೊಳ್ಳುವಂತೆ ಅವರು ಖರೀದಿದಾರ ಸಂಸ್ಥೆಯನ್ನು ಕೇಳಿಕೊಳ್ಳುವ ಸಾಧ್ಯತೆಯಿದೆ ಯೆಂದು ಅವರು ಹೇಳಿದ್ದಾರೆ.

  ಸುಮಾರು 8 ಶತಕೋಟಿ ಡಾಲರ್ ಸಾಲದಲ್ಲಿದ್ದು, ಭಾರೀ ನಷ್ಟ ಅನುಭವಿಸುತ್ತಿರುವ ಏರ್‌ಇಂಡಿಯಾವನ್ನು ಮಾರಾಟ ಮಾಡುವಂತೆ ಸರಕಾರಿ ಸಮಿತಿಯೊಂದು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಪ್ರಧಾನಿ ಈ ನಿಟ್ಟಿನಲ್ಲಿ ಮಾತುಕತೆ ನಡೆಸುತ್ತಿದ್ದಾರೆನ್ನಲಾಗಿದೆ. ಆದರೆ ಏರ್‌ಇಂಡಿಯಾದ ಬಾಕಿ ಉಳಿದ 5 ಶತಕೋಟಿ ಡಾಲರ್ ಸಾಲವನ್ನು ಮನ್ನಾ ಮಾಡಬೇಕೇ ಅಥವಾ ಮರುಹೊಂದಿಸಿಕೊಳ್ಳಬೇಕೇ ಎಂಬ ಬಗ್ಗೆ ಕೇಂದ್ರ ಸರಕಾರವು ಇನ್ನಷ್ಟೇ ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ ಎಂದು ಆತ ಹೇಳಿದ್ದಾರೆ.

        ಏರ್‌ಇಂಡಿಯಾದ ಮಾರಾಟಕ್ಕೆ ಮುನ್ನ ಅದರ ಬಳಿಯಿರುವ 3 ಶತಕೋಟಿ ಡಾಲರ್‌ಗೂ ಅಧಿಕ ವೌಲ್ಯದ ರಿಯಲ್ ಎಸ್ಟೇಟ್ ಸೇರಿದಂತೆ ಹೆಚ್ಚು ಮಹತ್ವವನ್ನು ಪಡೆದಿರದ ಆಸ್ತಿಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆಯೂ ಆರಂಭಗೊಳ್ಳಲಿದೆ. ಆದರೆ ಏರ್‌ಇಂಡಿಯಾ ಮಾರಾಟ ಪ್ರಕ್ರಿಯೆಗೆ ಪ್ರಧಾನಿ ನರೇಂದ್ರ ಮೋದಿ ಅಥವಾ ಏರ್ ಇಂಡಿಯಾ ವಕ್ತಾರ ಧನಂಜಯ್ ಕುಮಾರ್ ಅವರಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲವೆಂದು ಅಮೆರಿಕದ ವಾಣಿಜ್ಯ ವಿಷಯಗಳ ಸುದ್ದಿವಾಹಿನಿ ಬ್ಲೂಂಬರ್ಗ್ ತಿಳಿಸಿದೆ.

   ಏರ್‌ಇಂಡಿಯಾದ ಭವಿಷ್ಯದ ದೃಷ್ಟಿಯಿಂದ ಅದನ್ನು ಮಾರಾಟ ಮಾಡುವ ಕುರಿತ ಆಯ್ಕೆಗಳನ್ನು ಮುಕ್ತವಾಗಿಡಬೇಕೆಂದದು ನೀತಿ ಆಯೋಗವು ಕೇಂದ್ರ ಸರಕಾರಕ್ಕೆ ಸಲಹೆ ನೀಡಿರುವುದಾಗಿ ಕೇಂದ್ರ ನಾಗರಿಕ ವಾಯುಯಾನ ಸಚಿವ ಅಶೋಕ್ ಗಜಪತಿ ರಾಜು ಮಂಗಳವಾರ ತಿಳಿಸಿದ್ದರು. ಮೇ 26ರಂದು ಬ್ಲೂಂಬರ್ಗ್ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗಾರಿಯಾ ಅವರು ಮಾತನಾಡುತ್ತಾ, ಏರ್‌ಇಂಡಿಯಾದ ಪ್ರಸಕ್ತ ಹಣಕಾಸು ಸ್ಥಿತಿಗತಿಯನ್ನು ಗಮನಿಸಿದರೆ ಅದನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲವೆಂದು ಹೇಳಿದ್ದರು.

  ದಶಕದ ಹಿಂದೆ ದೇಶದ ವಾಯುಯಾನ ಮಾರುಕಟ್ಟೆಯಲ್ಲಿ ಏರ್‌ಇಂಡಿಯಾದ ಪಾಲು ಶೇ.35ರಷ್ಟಿದ್ದರೆ, ಈಗ ಅದು 12.9 ಶೇ.ಕ್ಕೆ ಕುಸಿದಿದೆ. ಸರಕಾರದ ಅಂಕಿಅಂಶಗಳ ಪ್ರಕಾರ ತೈಲ ಬೆಲೆ ಕುಸಿತದ ಪರಿಣಾಮವಾಗಿ 2016ರ ಮಾರ್ಚ್‌ನಲ್ಲಿ ಏರ್‌ಇಂಡಿಯಾಕ್ಕೆ ಸುಮಾರು 1 ಶತಕೋಟಿ ಡಾಲರ್‌ಗಳ ನಿರ್ವಹಣಾ ಲಾಭ ದೊರೆತಿತ್ತು. ಆದಾಗ್ಯೂ, ಈಗಲೂ ಅದು 28.4 ಶತಕೋಟಿ ಡಾಲರ್‌ಗಳ ನಷ್ಟವನ್ನು ಅನುಭವಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News