ಕೇಂದ್ರದ ಕಾನೂನಿನಲ್ಲಿ ಬೀಫ್ ಸೇವನೆಗೆ ನಿಷೇಧವಿಲ್ಲ : ಕೇರಳ ಹೈಕೋರ್ಟ್ ಸ್ಪಷ್ಟನೆ
ತಿರುವನಂತಪುರ,ಮೇ 31: ಗೋಹತ್ಯೆಯ ವಿರುದ್ಧ ಕೇಂದ್ರ ಸರಕಾರದ ಹೊರಡಿಸಿರುವ ಅಧಿಸೂಚನೆಯ ಬಗ್ಗೆ ವ್ಯಾಪಕ ಗೊಂದಲ ಮುಂದುವರಿದಿ ರುವಂತೆಯೇ, ಕೇರಳದ ಹೈಕೋರ್ಟ್ ಬುಧವಾರ ಈ ಕುರಿತು ಕುತೂಹಲಕಾರಿ ಅಭಿಪ್ರಾಯವೊಂದನ್ನು ವ್ಯಕ್ತಪಡಿಸಿದ್ದು, ಕೇಂದ್ರದ ಅಧಿಸೂಚನೆಯಲ್ಲಿ ಬೀಫ್ ಸೇವನೆಗೆ ಯಾವುದೇ ನಿಷೇಧ ವಿಧಿಸಲಾಗಿಲ್ಲವೆಂದು ಸ್ಪಷ್ಟಪಡಿಸಿದೆ.
ಗೋಹತ್ಯೆ ನಿಷೇಧದ ವಿರುದ್ಧ ಕೇಂದ್ರದ ಅಧಿಸೂಚನೆಯನ್ನು ಪ್ರಶ್ನಿಸಿ ಯುವಕಾಂಗ್ರೆಸ್ ಕಾರ್ಯಕರ್ತ ಸುನೀಲ್ ಎಂಬವರು ಕೇರಳ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯ ಆಲಿಕೆ ನಡೆಸಿದ ಮುಖ್ಯನ್ಯಾಯಮೂರ್ತಿ ನವನೀತ್ ಪ್ರಸಾದ್ ಅವರು ‘‘ಗೋಮಾರಾಟ ಹಾಗೂ ಗೋಹತ್ಯೆಗೆ ಸಂಬಂಧಿಸಿದ ಕೇಂದ್ರದ ನೂತನ ಕಾನೂನಿನಲ್ಲಿ ಹೊಸತೇನಿಲ್ಲ. ಬೀಫ್ ಸೇವನೆಯ ಕುರಿತ ಜನರ ಹಕ್ಕುಗಳನ್ನು ಅದು ಕಸಿಯುವುದೂ ಇಲ್ಲ’’ ಎಂದು ಹೇಳಿದ್ದಾರೆ.
‘‘ದೇಶದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕಾನೂನಿನ ಜೊತೆಗೆ ನೂತನ ಆದೇಶವನ್ನು ಸಮರ್ಪಕವಾಗಿ ಓದಿದ ಯಾರು ಕೂಡಾ ಈ ತೀರ್ಮಾನಕ್ಕೆ ಬರಲಾರರು. ನೂತನ ಅಧಿಸೂಚನೆಯಲ್ಲಿ ಬೀಫ್‌ನ ಮಾರಾಟಕ್ಕೆ ಯಾವುದೇ ನಿಷೇಧವನ್ನು ಹೇರಲಾಗಿಲ್ಲ. ಹತ್ಯೆಗಾಗಿ ಗೋವುಗಳನ್ನು ಸಾಮೂಹಿಕವಾಗಿ ಜಾನುವಾರು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದನ್ನಷ್ಟೇ ನೂತನ ಆದೇಶವು ನಿಷೇಧಿಸಿದೆ’’ ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದಾರೆ.
ಹತ್ಯೆಗಾಗಿ ಗೋವುಗಳ ಮಾರಾಟ ಹಾಗೂ ಖರೀದಿಯನ್ನು ನಿಷೇಧಿಸುವ ಕೇಂದ್ರ ದ ಅಧಿಸೂಚನೆಗೆ ತಾತ್ಕಾಲಿಕ ತಡೆಯಾಜ್ಞೆ ವಿಧಿಸಿದ ಮದ್ರಾಸ್ ಹೈಕೋರ್ಟ್‌ನ ಆದೇಶದ ಬಗ್ಗೆಯೂ ಅವರು ಅಚ್ಚರಿ ವ್ಯಕ್ತಪಡಿಸಿದರು.
ಹತ್ಯೆಗಾಗಿ ಗೋವುಗಳ ಮಾರಾಟ ಹಾಗೂ ಖರೀದಿಯನ್ನು ನಿಷೇಧಿಸುವ ನೂತನ ಅಧಿಸೂಚನೆಯು ದೇಶದ ಮಾಂಸ ಹಾಗೂ ಚರ್ಮ ರಫ್ರು ಉದ್ಯಮಕ್ಕೆ ಭಾರೀ ಹೊಡೆತ ನೀಡುವ ಸಾಧ್ಯತೆಯಿದೆಯೆನ್ನಲಾಗಿದೆ. ನೂತನ ಅಧಿಸೂಚನೆಯು ಗೋವುಗಳ ಕೊಂಬುಗಳಿಗೆ ಬಣ್ಣ ಬಳಿಯುವುದನ್ನು ಹಾಗೂ ಅವುಗಳನ್ನು ಆಭರಣ ಮತ್ತಿತರ ವಸ್ತುಗಳಿಂದ ಆಲಂಕರಿಸುವುದನ್ನು ಕೂಡಾ ನಿಷೇಧಿಸುತ್ತದೆ.
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಕೇಂದ್ರ ಪರಿಸರ ಸಚಿವಾಲಯವು ಈ ಅಧಿಸೂಚನೆಯನ್ನು ಜಾರಿಗೊಳಿಸಿದೆ.
ಕೇಂದ್ರ ಪರಿಸರ ಸಚಿವ ಹರ್ಷ ವರ್ಧನ್ ಅವರು ನೂತನ ಕಾಯ್ದೆಗಳು ಅತ್ಯಂತ ನಿರ್ದಿಷ್ಟವಾಗಿ, ಜಾನುವಾರು ಮಾರುಕಟ್ಟೆಗಳು ಹಾಗೂ ಗೋವುಗಳ ಮಾರಾಟವನ್ನು ನಿಯಮಬದ್ಧಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದ್ದಾರೆ.