ಗೋಹತ್ಯೆಗೆ , ಗೋಮಾಂಸ ಸೇವನೆಗೆ ನಿಷೇಧ ಇಲ್ಲ : ಕೇರಳ ಹೈಕೋರ್ಟ್

Update: 2017-06-01 07:29 GMT

ತಿರುವನಂತಪುರಂ,ಜೂ.1 : ಕೇಂದ್ರದ ಅಧಿಸೂಚನೆಯಂತೆ ಪ್ರಾಣಿ ಹಿಂಸೆ ತಡೆ ನಿಯಮಾವಳಿ 2017ರ ಅನ್ವಯ ಗೋವುಗಳ ಹತ್ಯೆಯ ಮೇಲೆ ಯಾವುದೇ ನಿಷೇಧವಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಕೇರಳ ಹೈಕೋರ್ಟಿನ ವಿಭಾಗೀಯ ಪೀಠವೊಂದು ಈ ನಿಯಮಾವಳಿಯ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದನ್ನು ಹಿಂದಕ್ಕೆ ಪಡೆಯಲಾಗಿದೆ ಎಂದುಕೊಂಡು ಅದನ್ನು ವಜಾಗೊಳಿಸಿದೆ.

ಈ ನಿಯಮಾವಳಿಗಳು ಗೋ ಹತ್ಯೆಯನ್ನು ನಿಷೇಧಿಸಿಲ್ಲ, ಎಂದು ಈ ಅಪೀಲು ವಿಚಾರಣೆಗೆ ಬಂದಾಗ, ಮುಖ್ಯ ನ್ಯಾಯಮೂರ್ತಿ ನವನೀತಿ ಪ್ರಸಾದ್ ಸಿಂಗ್ ಅವರ ನೇತೃತ್ವದ ಪೀಠವು ಮೌಖಿಕವಾಗಿ ಅಭಿಪ್ರಾಯ ಪಟ್ಟಿತಲ್ಲದೆ ಅದು ಕೇವಲ ಜಾನುವಾರು ಮಾರುಕಟ್ಟೆಗಳಲ್ಲಿ ದನಗಳ ಮಾರಾಟವನ್ನು ನಿಷೇಧಿಸಿದೆ ಎಂದು ಹೇಳಿದೆ. ‘‘ನಿಯಮಗಳು ಅದಕ್ಕಿಂತ ಆಚೆ ಹೋಗಿಲ್ಲ’’ ಎಂದೂ ಅದು ತಿಳಿಸಿದೆ. ಮನೆಗಳಿಂದ ಅಥವಾ ಬೇರಿನ್ಯಾವ ಪ್ರದೇಶಗಳಿಂದಲೂ ದನಗಳನ್ನು ಮಾರಾಟ ಮಾಡಲು ನಿರ್ಬಂಧವಿಲ್ಲ ಎಂದು ಹೇಳಿದ ಪೀಠ ಯಾರು ಕೂಡ ದನವನ್ನು ಮಾರಾಟ ಮಾಡಬಹುದು ಯಾ ಹತ್ಯೆಗೈದು ಅದರ ಮಾಂಸವನ್ನು ಭಕ್ಷಿಸಬಹುದು ಎಂದು ಹೇಳಿದೆ.

ಸಂವಿಧಾನದ 21ನೇ ವಿಧಿ (ಬದುಕುವ ಹಕ್ಕು) ನಿಯಮಾವಳಿಗಳಿಂದ ಬಾಧಿತವಾಗಿದೆ ಎಂದು ಫಿರ್ಯಾದಿದಾರರ ಪರ ವಕೀಲರು ಹೇಳಿದಾಗ ‘‘ಗೋಮಾಂಸ ಮಾರಾಟ ಮಾಡದಂತೆ ನಿಮ್ಮನ್ನು ತಡೆದವರ್ಯಾರು ? ಗೋಮಾಂಸ ಮಾರಾಟ ನಿಷೇಧಿಸುವ ಬಗ್ಗೆ ಅಧಿಸೂಚನೆಯಲ್ಲಿ ಏನೂ ಹೇಳಲಾಗಿಲ್ಲ’’ ಎಂದು ಹೇಳಿತು.

‘ನಿಯಮಗಳನ್ನು ಓದಿ’

ಜನರು ನಿಯಮಗಳನ್ನು ಸರಿಯಾಗಿ ಓದಿಲ್ಲವಾದುದರಿಂದ ಉದ್ವಿಗ್ನರಾಗುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿತಲ್ಲದೆ ಜನರು ನಿಯಮಗಳನ್ನು ಓದಬೇಕೆಂಬ ಇರಾದೆಯೂ ಫಿರ್ಯಾದಿದಾರರಿಗೆ ಇದ್ದಂತಿಲ್ಲ ಎಂದು ಅಭಿಪ್ರಾಯ ಪಟ್ಟಿತು. ‘‘ನೀವೊಬ್ಬರು ಉತ್ಸಾಹಭರಿತ ವ್ಯಕ್ತಿಯಾಗಿದ್ದರೆ, ನಿಯಮಗಳನ್ನು ಜನರ ಬಳಿಗೆ ಒಯ್ಯಿರಿ,’’ ಎಂದು ನ್ಯಾಯಾಲಯ ಹೇಳಿತು.

ಫಿರ್ಯಾದಿದಾರ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ ಜಿ ಸುನಿಲ್ ಅವರು ಈ ಅಧಿಸೂಚನೆಯು ಆಹಾರದ ಮೇಲಿನ ಹಕ್ಕಿನ ಆಕ್ರಮಣವೆಂದು ಹೇಳಿದಾಗ ಗೋವುಗಳ ಮಾರಾಟದ ಮೇಲಿನ ನಿಯಂತ್ರಣ ಆಹಾರದ ಮೇಲಿನ ಹಕ್ಕಿನ ಉಲ್ಲಂಘನೆ ಹೇಗಾಗುವುದೆಂದು ನ್ಯಾಯಾಲಯ ಪ್ರಶ್ನಿಸಿತು. 

ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಅಚ್ಚರಿ

ಕೇಂದ್ರದ ಅಧಿಸೂಚನೆಗೆ ತಡೆಯಾಜ್ಞೆ ನೀಡಿದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಕೇರಳ ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ. ತರುವಾಯ ಕೇರಳ ಹೈಕೋರ್ಟಿನ ಮೌಖಿಕ ಅಭಿಪ್ರಾಯಗಳನ್ನು ಮನ್ನಿಸಿ ಫಿರ್ಯಾದಿದಾರರ ವಕೀಲರು ಅಪೀಲನ್ನು ನ್ಯಾಯಾಲಯದ ಅನುಮತಿ ಪಡೆದು ಹಿಂಪಡೆದುಕೊಂಡರು.

ಪ್ರಾಣಿಗಳ ರಕ್ಷಣೆ, ಸಂರಕ್ಷಣೆ, ಪ್ರಾಣಿಗಳ ರೋಗಗಳ ನಿಯಂತ್ರಣ, ಪಶುವೈದ್ಯಕೀಯ ತರಬೇತಿ ಮತ್ತು ಪಾಲನೆ ಇವುಗಳು ರಾಜ್ಯಗಳ ಅಧೀನದಲ್ಲಿ ಬರುವುದರಿಂದ ಕೇವಲ ರಾಜ್ಯಕ್ಕೆ ಮಾತ್ರ ಗೋವುಗಳ ಬಗೆಗೆ ಯಾವುದೇ ನಿಯಮಾವಳಿಗಳನ್ನು ರಚಿಸಲು ಅಧಿಕಾರವಿದೆ ಎಂದು ಫಿರ್ಯಾದಿದಾರರು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News