ಅನರ್ಹತೆಯ ಭೀತಿ ಎದುರಿಸುತ್ತಿರುವ 8 ವಿಧಾನಪರಿಷತ್ ಸದಸ್ಯರು
ಬೆಂಗಳೂರು, ಜೂ.1: ಪ್ರಯಾಣ ಭತ್ಯೆ ದುರ್ಬಳಕೆ ಮಾಡಿರುವ ಆರೋಪದಲ್ಲಿ ಎಂಟು ಮಂದಿ ವಿಧಾನಪರಿಷತ್ ಸದಸ್ಯರಿಗೆ ವಿಧಾನಪರಿಷತ್ ಸಭಾಪತಿ ಡಿಎಚ್ ಶಂಕರಮೂರ್ತಿ ನೋಟಿಸ್ ನೀಡಿದ್ದಾರೆ.
ಬಿಬಿಎಂಪಿ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ನೀಡಿದ ದೂರಿನಂತೆ ಡಿಎಚ್ ಶಂಕರಮೂರ್ತಿ ನೋಟೀಸ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಪರಿಷತ್ ಸದಸ್ಯರುಗಳಾದ ಅಪ್ಪಾಜಿ ಗೌಡ , ರಘು ಆಚಾರ್, ಎಂ.ಡಿ.ಲಕ್ಷ್ಮೀ ನಾರಾಯಣ ,ಬೋಸ್‌ರಾಜ್ , ಆರ್.ಬಿ ತಿಮ್ಮಾಪುರ, ಎಸ್.ರವಿ , ಅಲ್ಲಂ ವೀರಭದ್ರಪ್ಪ ಮತ್ತು ಸಿ.ಆರ್ ಮನೋಹರ್ ಅವರು ಅನರ್ಹತೆಯ ಭೀತಿ ಎದುರಿಸುವಂತಾಗಿದೆ.
ಸದನದ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ವಿಧಾನಪರಿಷತ್ ಸಭಾಪತಿ ಡಿಎಚ್ ಶಂಕರಮೂರ್ತಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಕಾಂಗ್ರೆಸ್ ಸದಸ್ಯರು ನೋಟಿಸ್ ನೀಡಿದ ಬೆನ್ನಲ್ಲೇ ಡಿಎಚ್ ಶಂಕರಮೂರ್ತಿ ಅವರು ಪ್ರಯಾಣ ಭತ್ಯೆ ದುರ್ಬಳಕೆ ಆರೋಪದಲ್ಲಿ 8 ಮಂದಿ ಎಂಎಲ್‌ಸಿಗಳಿಗೆ ನೊಟೀಸ್ ನೀಡುವ ಮೂಲಕ ತಿರುಗೇಟು ನೀಡಿದ್ದಾರೆ. ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಏಕೆ ಹಾಕಬಾರದು ಎಂದು ಸಭಾಪತಿ ಪ್ರಶ್ನಿಸಿ ಜೂನ್ 3 ರ ಒಳಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ.