ಎಐಎಡಿಎಂಕೆ ಚಿಹ್ನೆ ಪ್ರಕರಣದಲ್ಲಿ ಟಿಟಿವಿ ದಿನಕರನ್‌ಗೆ ಜಾಮೀನು
ಹೊಸದಿಲ್ಲಿ,ಜೂ.1: ಚುನಾವಣಾ ಆಯೋಗಕ್ಕೆ ಲಂಚ ನೀಡಲು ಪ್ರಯತ್ನಿಸಿದ್ದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ಎಐಎಡಿಎಂಕೆ (ಅಮ್ಮಾ) ಬಣದ ನಾಯಕ ಟಿಟಿವಿ ದಿನಕರನ್ ಮತ್ತು ಅವರ ಬಲಗೈ ಬಂಟ ಮಲ್ಲಿಕಾರ್ಜುನ ಅವರಿಗೆ ದಿಲ್ಲಿಯ ವಿಶೇಷ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿದೆ.
ತಲಾ ಐದು ಲ.ರೂ.ಗಳ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಇನ್ನೆರಡು ಭದ್ರತೆಗಳನ್ನು ಒದಗಿಸುವಂತೆ ವಿಶೇಷ ನ್ಯಾಯಾಧೀಶೆ ಪೂನಂ ಚೌಧರಿ ಅವರು ಆರೋಪಿಗಳಿಗೆ ನಿರ್ದೇಶ ನೀಡಿದರು.
ದಿನಕರನ್ ಮತ್ತು ಮಲ್ಲಿಕಾರ್ಜುನರನ್ನು ದಿಲ್ಲಿ ಪೊಲೀಸ್ ಕ್ರೈಂ ಬ್ರಾಂಚ್ ಎ.25ರಂದು ಬಂಧಿಸಿತ್ತು.
ಪ್ರಕರಣದಲ್ಲಿ ಇತರ ಆರೋಪಿಗಳಾದ ಮಧ್ಯವರ್ತಿ ಸುಕೇಶ್ ಚಂದ್ರಶೇಖರ್ ಮತ್ತು ಹವಾಲಾ ಏಜೆಂಟ್ ನಾಥು ಸಿಂಗ್ ಅವರು ಜೂ.12ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದರೆ, ಇನ್ನೋರ್ವ ಆರೋಪಿ ಹವಾಲಾ ಏಜೆಂಟ್ ಲಲಿತ್ ಕುಮಾರ್ ಜೂ.5ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾನೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾರ ನಿಧನದಿಂದಾಗಿ ತೆರವಾಗಿದ್ದ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಪಕ್ಷದ ಮೂಲಚಿಹ್ನೆ ಯನ್ನು ಪಡೆದುಕೊಳ್ಳಲು ದಿನಕರನ್ ಬಣ ಬಯಸಿತ್ತು. ಮಾಧ್ಯಮಗಳಲ್ಲಿ ಅಕ್ರಮಗಳು ಬಹಿರಂಗಗೊಂಡ ಬಳಿಕ ಚುನಾವಣಾ ಆಯೋಗವು ಉಪಚುನಾವಣೆಯನ್ನು ರದ್ದುಗೊಳಿಸಿತ್ತು.
ದಿನಕರನ್ ಸೋದರತ್ತೆ ಶಶಿಕಲಾ ಮತ್ತು ಮಾಜಿ ಮುಖ್ಯಮಂತ್ರಿ ಒ.ಪನ್ನೀರಸೆಲ್ವಂ ಅವರ ಬಣಗಳು ಎಐಎಡಿಎಂಕೆಯ ಮೂಲಚಿಹ್ನೆಗಾಗಿ ತಮ್ಮ ಹಕ್ಕುಗಳನ್ನು ಮಂಡಿಸಿದ ಬಳಿಕ ಆಯೋಗವು ಅದನ್ನು ಸ್ತಂಭನಗೊಳಿಸಿತ್ತು.
ಈ ಚಿಹ್ನೆಯನ್ನು ತನ್ನ ಬಣಕ್ಕೆ ಪಡೆದುಕೊಳ್ಳಲು ಚುನಾವಣಾ ಆಯೋಗಕ್ಕೆ ಲಂಚ ನೀಡುವ ಉದ್ದೇಶದಿಂದ ದಿನಕರನ್ ಅವರು ರಹಸ್ಯ ಮೂಲಗಳಿಂದ ಹಣದ ವ್ಯವಸ್ಥೆ ಮಾಡಿದ್ದರು ಮತ್ತು ಅಕ್ರಮ ಮಾರ್ಗಗಳ ಮೂಲಕ ಅದನ್ನು ಚೆನ್ನೈನಿಂದ ದಿಲ್ಲಿಗೆ ರವಾನಿಸಿದ್ದರು ಎಂದು ಆರೋಪಿಸಲಾಗಿದೆ. ದಿನಕರನ್ ಮತ್ತು ಚಂದ್ರಶೇಖರ್ ನಡುವೆ 50 ಕೋ.ರೂ.ಗಳ ವ್ಯವಹಾರವನ್ನು ಕುದುರಿಸಿದ್ದಕ್ಕಾಗಿ ಮಲ್ಲಿಕಾರ್ಜುನನನ್ನು ಬಂಧಿಸಲಾಗಿತ್ತು.