ರೈಲ್ವೆಯಿಂದ ಶೀಘ್ರವೇ ‘ಈಗ ಖರೀದಿಸಿ,ನಂತರ ಪಾವತಿಸಿ’ ಸೌಲಭ್ಯ

Update: 2017-06-01 10:52 GMT

ಹೊಸದಿಲ್ಲಿ,ಜೂ.1: ಯಾವುದೇ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಕ್ಕಾಗಿ ‘ಈಗ ಟಿಕೆಟ್‌ಗಳನ್ನು ಖರೀದಿಸಿ ಮತ್ತು ನಂತರ ಪಾವತಿಸಿ ’ ಸೇವೆಯನ್ನು ಒದಗಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ ಎಂದು ಐಆರ್‌ಸಿಟಿಸಿ ಅಧಿಕಾರಿಯೋರ್ವರು ಗುರುವಾರ ಇಲ್ಲಿ ತಿಳಿಸಿದರು.

ಶೀಘ್ರವೇ ಪ್ರಯಾಣಿಕರು ಐಆರ್‌ಸಿಟಿಸಿ ವೆಬ್‌ಸೈಟ್‌ನಿಂದ ಟಿಕೆಟ್‌ಗಳನ್ನು ಖರೀದಿಸಿ, ನಂತರ ಹಣ ಪಾವತಿಸಲು ಸಾಧ್ಯವಾಗಲಿದೆ ಎಂದು ಸಂಸ್ಥೆಯ ವಕ್ತಾರ ಸಂದೀಪ ಗುಪ್ತಾ ಸುದ್ದಿಸಂಸ್ಥೆಗೆ ತಿಳಿಸಿದರು. ಈ ನೂತನ ಸೇವೆಯನ್ನು ಒದಗಿಸಲು ಮುಂಬೈನ ಇ-ಪೇ-ಲೇಟರ್ ಸಂಸ್ಥೆಯೊಡನೆ ಐಆರ್‌ಸಿಟಿಸಿಯು ಒಪ್ಪಂದವನ್ನು ಮಾಡಿಕೊಂಡಿದೆ. ಈ ಸೇವೆಯ ಮೂಲಕ ಪ್ರಯಾಣಿಕರು ಪ್ರಯಾಣ ದಿನದ ಐದು ದಿನಗಳ ಮೊದಲು ಶೇ.3.5 ಸೇವಾ ಶುಲ್ಕದೊಂದಿಗೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಮತ್ತು ಮುಂದಿನ 14 ದಿನಗಳಲ್ಲಿ ಮೊತ್ತವನ್ನು ಪಾವತಿಸಬಹುದಾಗಿದೆ ಎಂದು ತಿಳಿಸಿದರು.
ಈ ಸೌಲಭ್ಯವು ಇ-ಟಿಕೆಟ್‌ಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದರು.

ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ನೀಡುವ ಮುನ್ನ ಬ್ಯಾಂಕು ಅವರ ಸಿಬಿಲ್ ಸ್ಕೋರನ್ನು ಪರಿಶೀಲಿಸುತ್ತದೆ. ಇಲ್ಲಿಯೂ ಇದೇ ಪದ್ಧತಿಯನ್ನು ಅನುಸರಿಸಲಾಗುವುದು ಎಂದು ತಿಳಿಸಿದ ಗುಪ್ತಾ, ಈ ಸೇವೆಯನ್ನು ಪಡೆಯಲು ಬಯಸುವವರು ತಮ್ಮ ಹೆಸರು, ಇಮೇಲ್ ಐಡಿ, ಮೊಬೈಲ್ ನಂ, ಪಾನ್ ಕಾರ್ಡ್ ಅಥವಾ ಆಧಾರ ವಿವರಗಳನ್ನು ಸಲ್ಲಿಸಬೇಕಾ ಗುತ್ತದೆ ಎಂದು ಹೇಳಿದರು.

ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಲು ಗ್ರಾಹಕರಿಗೆ ಹಸಿರು ನಿಶಾನೆ ಲಭಿಸಿದ ಬಳಿಕ ಅವರಿಗೆ ಒನ್ ಟೈಮ್ ಪಾಸ್‌ವರ್ಡ್ ರವಾನಿಸಲಾಗುತ್ತದೆ ಮತ್ತು ಅದನ್ನು ಬಲಸಿಕೊಂಡು ಅವರು ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News