4 ವರ್ಷದ ಬಾಲಕಿಯ ಪ್ರಾಣಕ್ಕೆ ಕುತ್ತಾದ ಕುಡುಕ ತಂದೆಯ ನೃತ್ಯ!
Update: 2017-06-01 18:22 IST
ಮುಂಬೈ, ಜೂ.1: ಕುಡುಕ ತಂದೆಯೊಬ್ಬನ ನೃತ್ಯ ನಾಲ್ಕು ವರ್ಷದ ಮಗಳ ಪ್ರಾಣಕ್ಕೆ ಕುತ್ತಾದ ಘಟನೆ ಇಲ್ಲಿನ ಸೈವಾನ್ ಗ್ರಾಮದ ತಡಚಾ ಪಡ ಎಂಬಲ್ಲಿ ನಡೆದಿದೆ.
ಮದುವೆ ಸಮಾರಂಭದಿಂದ ನಿಲೇಶ್ ಸಾತ್ವಿ, ಆತನ ಪತ್ನಿ ಹಾಗೂ ಮಗಳು ಹಿಂದಿರುಗುತ್ತಿದ್ದರು. ಪಾನಮತ್ತನಾಗಿದ್ದ ನಿಲೇಶ್ ಬಾಲಕಿ ಗೌರಿಯನ್ನು ಭುಜದಲ್ಲಿ ಕುಳ್ಳಿರಿಸಿ ಹಾಡುತ್ತಾ ಕುಣಿಯುತ್ತಿದ್ದ. ಈ ಸಂದರ್ಭ ಸಣ್ಣ ಸೇತುವೆಯ ಮೇಲಿಂದ ಸಾಗುತ್ತಿದ್ದ ವೇಳೆ ಕಾಲು ಜಾರಿದ್ದು, ಭುಜದ ಮೇಲಿದ್ದ ಗೌರಿ ಸಮೇತ ಕೆಳಕ್ಕೆ ಬಿದ್ದಿದ್ದಾನೆ. ಗೌರಿ ಬಂಡೆಕಲ್ಲಿನ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟರೆ ನೀಲೇಶ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಈ ಸಂದರ್ಭ ನೀಲೇಶ್ ಪತ್ನಿ ಬೊಬ್ಬಿಟ್ಟಿದ್ದು, ದಾರಿಹೋಕರು ಸ್ಥಳಕ್ಕೆ ಆಗಮಿಸಿ ಮಗು ಹಾಗೂ ನೀಲೇಶ್ ನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆಗೆ ಸಂಬಂಧಿಸಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಲಾಗಿದೆ.