ಭಾರತೀಯ ಸೇನೆಯ ಪ್ರತೀಕಾರದ ಕೃತ್ಯ ಐವರು ಪಾಕ್ ಯೋಧರ ಹತ್ಯೆ

Update: 2017-06-01 12:59 GMT

ಜಮ್ಮು, ಜೂ.1: ಜಮ್ಮು-ಕಾಶ್ಮೀರದ ಗಡಿಭಾಗದಲ್ಲಿ ಭಾರತೀಯ ಸೇನೆ ನಡೆಸಿದ ಪ್ರತೀಕಾರದ ಕಾರ್ಯಾಚರಣೆಯೊಂದರಲ್ಲಿ ಐವರು ಪಾಕ್ ಯೋಧರನ್ನು ಹತ್ಯೆಗೈಯಲಾಗಿದೆ.

   ಭಿಂಬರ್ ಮತ್ತು ಬಟ್ಟಲ್ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ. ಇದಕ್ಕೂ ಮೊದಲು ಜಮ್ಮು-ಕಾಶ್ಮೀರದ ರಜೋರಿ ಮತ್ತು ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಪಾಕ್ ಸೇನೆ ನಡೆಸಿದ್ದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಗಡಿ ನಿಯಂತ್ರಣ ರೇಖೆಯ ಬಳಿ ಕಾರ್ಯ ನಿರ್ವಹಿಸುತ್ತಿದ್ದ ಜನರಲ್ ಇಂಜಿನಿಯರಿಂಗ್ ರಿಸರ್ವ್ ಫೋರ್ಸ್‌ನ ಓರ್ವ ಕಾರ್ಮಿಕ ಮೃತಪಟ್ಟಿದ್ದು , ಬಿಎಸ್‌ಎಫ್ ಸಿಬ್ಬಂದಿ ಸಹಿತ ಇಬ್ಬರು ಗಾಯಗೊಂಡರು. ಬೆಳಿಗ್ಗೆ 7:30ರಿಂದ ರಜೋರಿ ಜಿಲ್ಲೆಯ ನೌಶೆರ ವಿಭಾಗದಲ್ಲಿ ಪಾಕ್ ಪಡೆಗಳು ಭಾರತೀಯ ಸೇನೆಯ ಮುಂಚೂಣಿ ನೆಲೆಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿವೆ. ಭಾರತೀಯ ಸೇನೆ ಇದಕ್ಕೆ ಪ್ರತ್ಯುತ್ತರ ನೀಡಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರ ಲೆ.ಕ. ಮನೀಶ್ ಮೆಹ್ತ ತಿಳಿಸಿದ್ದಾರೆ.

 ಈ ಮಧ್ಯೆ, ಭಾರತದ ಸಹಾಯಕ ರಾಯಭಾರಿಯನ್ನು ಕರೆಸಿಕೊಂಡ ಪಾಕಿಸ್ತಾನದ ವಿದೇಶಾಂಗ ಇಲಾಖೆಯ ಅಧಿಕಾರಿಗಳು , ಭಾರತವು ಗಡಿ ನಿಯಂತ್ರಣಾ ರೇಖೆಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಮೂಲಕ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ದೂಷಿಸಿದರು.
 ಕಾಶ್ಮೀರಕ್ಕೆ ಸೇನಾ ಮುಖ್ಯಸ್ಥರ ಭೇಟಿ: ಗಡಿ ನಿಯಂತ್ರಣಾ ರೇಖೆಯಲ್ಲಿ ಕಾರ್ಯ ನಿರತರಾಗಿರುವ ಸಶಸ್ತ್ರ ಪಡೆಗಳ ಕಾರ್ಯಾಚರಣೆ ಸಿದ್ಧತೆಯ ಅವಲೋಕನ ನಡೆಸುವ ಉದ್ದೇಶದಿಂದ ಭಾರತದ ಸೇನಾ ಮುಖ್ಯಸ್ಥ ಜ ಬಿಪಿನ್ ರಾವತ್ ಗುರುವಾರ ಕಾಶ್ಮೀರಕ್ಕೆ ಭೇಟಿ ನೀಡಿದರು. ಜ ರಾವತ್ ಹಾಗೂ ಕೆಲವು ಹಿರಿಯ ಸೇನಾಧಿಕಾರಿಗಳು ಬಾದಾಮಿಭಾಗ್ ಸೇನಾಪ್ರದೇಶಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಮತ್ತು ಕಾರ್ಯಾಚರಣೆ ಸಿದ್ಧತೆಯ ಅವಲೋಕನ ನಡೆಸಿದರು. ಇದೊಂದು ವಾಡಿಕೆಯ ಭೇಟಿಯಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News