ಮಹಾರಾಷ್ಟ್ರ:ನಿಲ್ಲದ ರೈತರ ಮುಷ್ಕರ

Update: 2017-06-02 14:45 GMT

ಮುಂಬೈ,ಜೂ.2: ಮಹಾರಾಷ್ಟ್ರದ ರೈತರು ಸತತ ಎರಡನೆಯ ದಿನವಾದ ಶುಕ್ರವಾರವೂ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರವನ್ನು ಮುಂದುವರಿಸಿದ್ದು, ತರಕಾರಿಗಳ ಅಭಾವ ಮತ್ತು ಅವುಗಳ ಬೆಲೆಏರಿಕೆಯ ಆತಂಕ ಮುಂಬಯಿಗರನ್ನು ಕಾಡುತ್ತಿದೆ.

ಮಹಾನಗರದಲ್ಲಿ ಹಾಲಿನ ಪೂರೈಕೆ ಅಬಾಧಿತವಾಗಿದ್ದರೂ ಮುಷ್ಕರನಿರತ ರೈತರಿಂದ ತೊಂದರೆ ಎದುರಾಗಬಹುದೆಂಬ ಆತಂಕದಿಂದ ತರಕಾರಿಗಳನ್ನು ತರುವ ವಾಹನಗಳ ಸಂಖ್ಯೆ ಕಡಿಮೆಯಾಗಿತ್ತು.ಗುರುವಾರ ಮುಂಬೈಗೆ ಹಾಲು ಮತ್ತು ತರಕಾರಿಗಳ ಪೂರೈಕೆಗೆ ವ್ಯತ್ಯಯವನ್ನುಂಟು ಮಾಡಲು ರೈತರು ಪ್ರಯತ್ನಿಸಿದ್ದರು.

ಮುಂಬೈ ಮಹಾನಗರಕ್ಕೆ ಪ್ರಮುಖವಾಗಿ ತರಕಾರಿಗಳನ್ನು ಪೂರೈಸುವ ನವಿ ಮುಂಬೈ ಎಪಿಎಂಸಿಗೆ ಪ್ರತಿದಿನ ಸರಾಸರಿ 7,000 ಟನ್‌ಗಳಷ್ಟು ತರಕಾರಿ ಆವಕವಾಗುತ್ತದೆ.ನಾಸಿಕ್ ಜಿಲ್ಲೆಯಲ್ಲಿ ಇಂದು ತರಕಾರಿ ಮತ್ತು ಹಾಲು ಸಾಗಾಟದ ಕೆಲವು ವಾಹನಗಳನ್ನು ತಡೆದ ಘಟನೆಗಳು ವರದಿಯಾಗಿವೆ.

ಪುಣೆ,ಅಹ್ಮದ್‌ನಗರ ಮತ್ತು ನಾಸಿಕ್ ಜಿಲ್ಲೆಗಳ ರೈತರು ಮುಷ್ಕರದಲ್ಲಿ ಕೈಜೋಡಿಸಿದ್ದು, ಆಡಳಿತ ಬಿಜೆಪಿಯ ಮಿತ್ರಪಕ್ಷ ರಾಜು ಶೆಟ್ಟಿ ನೇತೃತ್ವದ ಸ್ವಾಭಿಮಾನಿ ಶೇತ್‌ಕರಿ ಸಂಘಟನಾದಂತಹ ಕೆಲವು ಪಕ್ಷಗಳು ಮುಷ್ಕರಕ್ಕೆ ನೈತಿಕ ಬೆಂಬಲವನ್ನು ನೀಡಿವೆ.

ಯಾವುದೇ ರೈತರು ತಮ್ಮ ಉತ್ಪನ್ನಗಳ ಮಾರಾಟಕ್ಕೆ ಬಂದಿರದ ಹಿನ್ನೆಲೆಯಲ್ಲಿ ಶುಕ್ರವಾರ ನಾಸಿಕ್ ಜಿಲ್ಲೆಯ ಎಲ್ಲ 15 ಎಪಿಎಂಸಿಗಳು ಬಾಗಿಲೆಳೆದುಕೊಂಡಿದ್ದವು. ನಾಸಿಕ್ ಬಳಿ ಮುಂಬೈ-ಆಗ್ರಾ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೂ ರೈತರು ತಡೆಯೊಡ್ಡಿದ್ದರು.

ತನ್ಮಧ್ಯೆ ಗುರುವಾರ ಕಲ್ಲು ತೂರಾಟದಿಂದ 14 ಪೊಲೀಸರು ಗಾಯಗೊಂಡಿದ್ದ ಮತ್ತು ಗೋಲಿಬಾರ್ ನಡೆದಿದ್ದ ನಾಸಿಕ್ ಜಿಲ್ಲೆಯ ಯೆವೋಲಾ ಪಟ್ಟಣದಲ್ಲಿ ಜಾರಿಗೊಳಿಸ ಲಾಗಿರುವ ಕರ್ಫ್ಯೂ ಶುಕ್ರವಾರವೂ ಮುಂದುವರಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News