ಅದ್ದೂರಿ ಜೀವನಶೈಲಿಗೆ ಶಿಕ್ಷೆ; ಸಿಪಿಎಂ ಸಂಸದ ರಿತಬ್ರತ ಬ್ಯಾನರ್ಜಿ 3 ತಿಂಗಳು ಅಮಾನತು

Update: 2017-06-02 14:55 GMT

ಕೋಲ್ಕತಾ, ಜೂ.2: ಅದ್ದೂರಿ ಜೀವನಶೈಲಿ ಅಳವಡಿಸಿಕೊಂಡಿರುವ ರಾಜ್ಯಸಭಾ ಸಂಸದ ರಿತಬ್ರತ ಬ್ಯಾನರ್ಜಿಯನ್ನು ಮೂರು ತಿಂಗಳು ಪಕ್ಷದಿಂದ ಅಮಾನತು ಮಾಡಿರುವುದಾಗಿ ಸಿಪಿಐ(ಎಂ) ತಿಳಿಸಿದೆ.

ಅವರ ಜೀವನ ಶೈಲಿ ಕಮ್ಯುನಿಸ್ಟರಿಗೆ ತಕ್ಕುದಾಗಿಲ್ಲ. ಈ ಕುರಿತು ಹಲವು ದೂರು ಬಂದಿದ್ದ ಹಿನ್ನೆಲೆಯಲ್ಲಿ ಅವರನ್ನು ಮೂರು ತಿಂಗಳ ಅವಧಿಗೆ ಪಕ್ಷದಿಂದ ಉಚ್ಛಾಟಿಸಿರುವುದಾಗಿ ಹಿರಿಯ ಸಿಪಿಐ(ಎಂ) ಮುಖಂಡರೋರ್ವರು ತಿಳಿಸಿದ್ದಾರೆ.

   ಬ್ಯಾನರ್ಜಿ ವಿರುದ್ಧ ಕೇಳಿ ಬಂದ ದೂರಿನ ಹಿನ್ನೆಲೆಯಲ್ಲಿ ಮೂವರು ಸದಸ್ಯರ ಆಂತರಿಕ ತನಿಖಾ ಸಮಿತಿಯೊಂದನ್ನು ರಚಿಸಲಾಗಿತ್ತು. ಸಮಿತಿಯು ಮೂರು ತಿಂಗಳೊಳಗೆ ತನ್ನ ವರದಿ ಸಲ್ಲಿಸಲಿದೆ. ಅದುವರೆಗೆ ಬ್ಯಾನರ್ಜಿಯವರನ್ನು ಅಮಾನತು ಮಾಡಲಾಗಿದೆ. ಒಂದು ವೇಳೆ ದೂರಿನಲ್ಲಿ ಸತ್ಯಾಂಶವಿದ್ದಲ್ಲಿ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಾಗುವುದು. ದೂರಿನಲ್ಲಿ ಹುರುಳಿಲ್ಲ ಎಂದಾದಲ್ಲಿ ಅಮಾನತು ಆದೇಶ ಹಿಂಪಡೆಯಲಾಗುವುದು ಎಂದವರು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಿಪಿಐ(ಎಂ) ರಾಜ್ಯ ಘಟಕದ ಕಾರ್ಯದರ್ಶಿ ಸೂರ್ಯಕಾಂತ ಮಿಶ್ರ ನಿರಾಕರಿಸಿದ್ದಾರೆ.

   ದುಬಾರಿ ವಾಚ್, ಪೆನ್‌ಗಳನ್ನು ಹೊಂದಿರುವ ಬಗ್ಗೆ ಬ್ಯಾನರ್ಜಿ ವಿರುದ್ಧ ಈ ಹಿಂದೆಯೂ ಪಕ್ಷದ ಸದಸ್ಯರೋರ್ವರು ದೂರು ನೀಡಿದ್ದರು. ತನ್ನ ಸ್ಥಾನದ ಪ್ರಭಾವ ಬಳಸಿಕೊಂಡಿದ್ದ ಬ್ಯಾನರ್ಜಿ, ತನ್ನ ವಿರುದ್ಧ ಆರೋಪ ಹೊರಿಸಿದ್ದ ಸದಸ್ಯನ ಬಗ್ಗೆ ಆತ ಕೆಲಸ ನಿರ್ವಹಿಸುತ್ತಿದ್ದ ಸಂಸ್ಥೆಯ ಮಾಲಕರಿಗೆ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News